Advertisement

Local Body Election: ಫೆಬ್ರವರಿಯಲ್ಲಿ ಜಿ.ಪಂ., ತಾ.ಪಂ. ಚುನಾವಣೆ: ಡಿಸಿಎಂ ಡಿಕೆಶಿ ಸುಳಿವು

02:13 AM Dec 02, 2024 | Team Udayavani |

ಬೆಂಗಳೂರು: ಉಪಸಮರದ ಅಭೂತಪೂರ್ವ ಗೆಲುವಿನ ಅನಂತರ ಅತ್ಯಂತ ಆತ್ಮವಿಶ್ವಾಸದಲ್ಲಿರುವ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ಸ್ಥಳೀಯ ಪಂಚಾಯತ್‌ ಚುನಾವಣೆಗೆ ಸಿದ್ಧತೆ ನಡೆಸಿದ್ದು, ತನ್ನ ಗೆಲುವಿನ ಓಟ ಮುಂದುವರಿಸಲು ನಿರ್ಧರಿಸಿದೆ. ಫೆಬ್ರವರಿಯಲ್ಲಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸುಳಿವು ನೀಡಿದ್ದಾರೆ.

Advertisement

ಮೈತ್ರಿಪಕ್ಷಗಳ ಹಲವು ಆರೋಪಗಳು, ಪಾದಯಾತ್ರೆಯಂತಹ ಹೋರಾಟದ ನಡುವೆಯೂ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನಿಂದ ಮತದಾರರ ನಾಡಿಮಿಡಿತ ಗೊತ್ತಾಗಿದೆ. ತನ್ನ ಗ್ಯಾರಂಟಿ ಯೋಜನೆಗಳಿಂದ ಜನತೆ “ಕೈ’ ಹಿಡಿದಿದ್ದಾರೆ ಎಂಬ ದೃಢವಿಶ್ವಾಸ ನಾಯಕರಲ್ಲಿದೆ.

ಈ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜಿ.ಪಂ., ತಾ.ಪಂ. ಚುನಾವಣೆಗೆ ಕೈಹಾಕಲು ನಿರ್ಧರಿಸಿದೆ. ಇತ್ತೀಚೆಗಿನ ಗೆಲುವು ಮತ್ತು ಪಂಚಾಯತ್‌ ಚುನಾವಣೆಗೆ ಗೆಲುವಿನ ಮುನ್ನೋಟವೇ ಹಾಸನದ ಸಮಾವೇಶ ಆಗಿದೆ. ಸಮಾವೇಶದ ಮೂಲಕ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿ, ಸಿದ್ಧಗೊಳಿಸಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸದ್ಯದಲ್ಲೇ ಸ್ಥಳೀಯ ಚುನಾವಣೆ
ನಾವು ಯಾವುದೋ ಒಂದು ಉದ್ದೇಶ ಇಟ್ಟುಕೊಂಡು ವೇದಿಕೆ ಸಿದ್ಧ ಮಾಡಬೇಕಲ್ಲವೇ? ಜಿ.ಪಂ. ಮತ್ತು ತಾ.ಪಂ. ಚುನಾವಣೆ ಸದ್ಯದಲ್ಲೇ ನಡೆಯಲಿದೆ ಎನ್ನುವುದು ನಿಜ. ಅದನ್ನು ತಡೆಯಲು ಆಗುವುದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಫೆಬ್ರವರಿ ವೇಳೆಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಈ ಕುರಿತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಮೂರು ಕ್ಷೇತ್ರಗಳ ಉಪಚುನಾವಣೆಯ ಯಶಸ್ಸನ್ನು ಮುಂದುವರಿಸಿಕೊಂಡು ಹೋಗಲು ಪಕ್ಷ ಸಂಘಟನೆ ಮಾಡಲಾಗುವುದು. ಚುನಾವಣೆ ಬಂದಾಗ ಸಿದ್ಧತೆ ಮಾಡಿಕೊಳ್ಳುವುದಲ್ಲ. ಚುನಾವಣೆ ಮುಗಿದ ಮರುದಿನದಿಂದಲೇ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

Advertisement

ಜಿ.ಪಂ., ತಾ.ಪಂ. ಚುನಾವಣೆ ಹಿನ್ನೆಲೆ:
ರಾಜ್ಯದಲ್ಲಿ 2019-20ರಿಂದ ಜಿ.ಪಂ., ತಾ.ಪಂ.ಗಳಿಗೆ ಚುನಾವಣೆ ನಡೆದಿಲ್ಲ. ಚುನಾವಣೆಯನ್ನು ನಿಗದಿತ ಸಮಯದಲ್ಲಿ ನಡೆಸಲು ಅವಕಾಶ ಮಾಡಿಕೊಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ರಾಜ್ಯ ಚುನಾವಣ ಆಯೋಗ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಈ ಮಧ್ಯೆ ರಾಜ್ಯ ಚುನಾವಣ ಆಯೋಗ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿ, ಮೀಸಲಾತಿ ಕರಡು ಪ್ರಕಟಿಸಿತ್ತು. ಕೋವಿಡ್‌ ಕಾರಣದಿಂದಾಗಿ ಚುನಾವಣೆ ಸಾಧ್ಯವಾಗಿರಲಿಲ್ಲ.

ಈ ಮಧ್ಯೆ ಕ್ಷೇತ್ರ ಪುನರ್‌ವಿಂಗಡಣೆ ಕುರಿತು ವ್ಯಾಪಕ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷೇತ್ರ ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ಚುನಾವಣ ಆಯೋಗದಿಂದ ಕಿತ್ತುಕೊಂಡು, ನಿವೃತ್ತ ಐಎಎಸ್‌ ಅಧಿಕಾರಿ ಎಂ.ಡಿ. ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ಸೀಮಾ ನಿರ್ಣಯ ಆಯೋಗವನ್ನು ರಚಿಸಲಾಗಿತ್ತು.

ಒಂದೂವರೆ ವರ್ಷದ ಬಳಿಕ ಈ ಆಯೋಗ ವರದಿ ಸಲ್ಲಿಸಿತ್ತು. ಇದರ ಬಗ್ಗೆಯೂ ಆಕ್ಷೇಪಗಳು ಕೇಳಿ ಬಂದದ್ದರಿಂದ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಕಾಂಬ್ಳೆ ನೇತೃತ್ವದಲ್ಲಿ ಹೊಸ ಆಯೋಗ ರಚಿಸಲಾಯಿತು. ಒಬಿಸಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ಸಂಬಂಧ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಮೀಸಲಾತಿ ನಿಗದಿಗೆ ನ್ಯಾ| ಭಕ್ತವತ್ಸಲ ನೇತೃತ್ವದಲ್ಲಿ ಆಯೋಗ ರಚಿಸಲಾಯಿತು.

ಕ್ಷೇತ್ರ ಪುನರ್‌ವಿಂಗಡಣೆ, ಮೀಸಲಾತಿ ನಿಗದಿ ಪ್ರಕ್ರಿಯೆ, ಕೋವಿಡ್‌-19, ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಗಳು ನನೆಗುದಿಗೆ ಬಿದ್ದಿತ್ತು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸರಕಾರವು ಕ್ಷೇತ್ರ ಪುನರ್‌ವಿಂಗಡಣೆಯನ್ನು ಅಂತಿಮಗೊಳಿಸಿದೆ. ಇದನ್ನು 12 ವಾರಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು 2023ರ ಡಿ. 19ರಂದು ರಾಜ್ಯ ಸರಕಾರವು ಹೈಕೋರ್ಟ್‌ಗೆ ಭರವಸೆ ನೀಡಿತ್ತು. ಆದರೆ ಈ ಭರವಸೆಯಂತೆ ಮೀಸಲಾತಿ ಪ್ರಕಟಿಸಿಲ್ಲ ಎಂದು ರಾಜ್ಯ ಚುನಾವಣ ಆಯೋಗ ರಾಜ್ಯ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. 2024ರ ನ. 27ರಂದು ಈ ಅರ್ಜಿ ವಿಚಾರಣೆಗೆ ಬಂದಾಗ ಸರಕಾರ ಮತ್ತೆ ಕಾಲಾವಕಾಶ ಕೇಳಿದ್ದು, ಡಿ. 12ರಂದು ವಿಚಾರಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next