ಎಚ್.ಡಿ.ಕೋಟೆ: ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ನ.10ರೊಳಗೆ ಪೂರ್ಣಗೊಳಿಸ ಬೇಕೆಂದು ಹೈಕೋರ್ಟ್ ಆದೇಶಿಸಿದ್ದು, ಈಗಿರುವ ಮೀಸಲಾತಿ ಪ್ರಕಾರ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷವು ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವುದು ಖಚಿತವಾಗಿದೆ.
23 ಸದಸ್ಯ ಬಲದ ಎಚ್.ಡಿ.ಕೋಟೆ ಪುರಸಭೆಯಲ್ಲಿ ಕಾಂಗ್ರೆಸ್-11, ಜೆಡಿಎಸ್-8, ಬಿಜೆಪಿ-1, ಬಿಎಸ್‌ಪಿ-1 ಮತ್ತು ಪಕ್ಷೇತರರು-2 ಸ್ಥಾನ ಹೊಂದಿದ್ದಾರೆ. ಕಾಂಗ್ರೆಸ್ ಶಾಸಕರಆಗಿರುವ ಅನಿಲ್ ಚಿಕ್ಕಮಾದು ಅವರ ಒಂದು ಮತ ಇರುವುದರಿಂದ ಈ ಪಕ್ಷವು ಸ್ಪಷ್ಟ ಬಹುಮತ ಹೊಂದಿದೆ.
ಮೀಸಲಾತಿ: ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಾಂಗ್ರೆಸ್ ಸದಸ್ಯರಲ್ಲಿ ಎಸ್ಟಿ ಮಹಿಳೆ ಯಾರೂ ಇಲ್ಲದ ಕಾರಣ ಅಧ್ಯಕ್ಷ ಸ್ಥಾನ ಕೈತಪ್ಪುತ್ತಿದೆ. ಇನ್ನು 2ನೇ ಬಹುಸಂಖ್ಯಾ ಬಲಹೊಂದಿರುವ ಜೆಡಿಎಸ್ ಈ ಬಾರಿ ಪುರಸಭೆ ಅಧ್ಯಕ್ಷ ಸ್ಥಾನ ಅಲಂಕರಿಸುವುದು ಬಹುತೇಕವಾಗಿ ಖಚಿತವಾಗಿದೆ. ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ವಶವಾಗಲಿದೆ.
ಬಹುಸಂಖ್ಯೆ ಪುರಸಭೆ ಸದಸ್ಯರ ಬಲ ಹೊಂದಿದ್ದರೂ ತಾಲೂಕಿನಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವು ಈ ಬಾರಿ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಿದೆ. ಕಳೆದ 2 ವರ್ಷಗಳ ಹಿಂದೆ ಪುರಸಭೆ ಚುನಾವಣೆ ನಡೆದರೂ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನದ ಗೊಂದಲ ನ್ಯಾಯಾಲಯದಲ್ಲಿ ಇದ್ದುದ್ದರಿಂದ 2 ವರ್ಷದ ತನಕ ಸದಸ್ಯರಿಗೆಅಧಿಕಾರ ಇರಲಿಲ್ಲ. ಇತ್ತೀಚೆಗಷ್ಟೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಿ, ಚುನಾವಣೆ ನಡೆಸುವಂತೆ ಆದೇಶ ಹೊರಬಿದ್ದಾಗ ಸದಸ್ಯರು ಹರ್ಷಿತರಾದರೂ, ಮೀಸಲಾತಿ ಪ್ರಕಾರ ಅಭ್ಯರ್ಥಿಯೇ ಇಲ್ಲದಿರುವುದು ನಿರಾಸೆ ಉಂಟುಮಾಡಿದೆ.
ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪುರಸಭೆ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಇನ್ನೇನು ಬಹು ಸಂಖ್ಯೆಯಲ್ಲಿರುವ ಕಾಂಗ್ರೆಸ್‌ಗೆ ಪುರಸಭೆ ಅಧ್ಯಕ್ಷ ಸ್ಥಾನ ಖಚಿತ ಎಂಬ ಆಶಾಭಾವನೆಯಲ್ಲಿದ್ದ ಕಾಂಗ್ರೆಸ್ಸಿರಿಗೆ ಇದೀಗ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿರುವುದು ಕೈ ಕೈ ಹಿಸುಕಿಕೊಳ್ಳುವಂತೆ ಮಾಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಎಸ್ಟಿ ಮಹಿಳೆ ಅಭ್ಯರ್ಥಿ ಇಲ್ಲದೇ ಇರುವುದು ಜೆಡಿಎಸ್‌ಗೆ ವರದಾನವಾಗಿದ್ದು, ತನ್ನ ಮೀಸಲು ಅಭ್ಯರ್ಥಿಯನ್ನು ಅಧ್ಯಕ್ಷ ಗದ್ದುಗೆಗೆ ಕೂರಿಸಲು ಸನ್ನದ್ಧವಾಗಿದೆ.
ಪುರಸಭೆ ಅಧ್ಯಕ್ಷ ಸ್ಥಾನ ಹೈತಪ್ಪುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರಾದ ಪ್ರೇಮ್‌ಸಾಗರ್ ಹಾಗೂ ಸೋಮಶೇಖರ್ ಇತ್ತೀಚೆಗೆ ಹೈಕೋರ್ಟ್ ಮೊರೆ ಹೋಗಿ, ಮೀಸಲಾತಿ ಬದಲಿರುವಂತೆ ಕೋರಿದ್ದರು. ವಿಚಾರಣೆ ಕೈಗತ್ತಿಕೊಂಡ ಹೈಕೋರ್ಟ್, ಈಗಿರುವ ಮೀಸಲಾತಿ ಆಧಾರದ ಮೇಲೆ ನ.10ರೊಳಗೆ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯನ್ನು ಪೂರ್ಣಗೊಳಿಸುವಂತೆ ಆದೇಶ ನೀಡಿರುವುದು ಕಾಂಗ್ರೆಸ್ಸಿಗರಿಗೆ ನಿರಾಸೆಯಾಗಿದೆ.
-ಎಚ್.ಬಿ.ಬಸವರಾಜು