Advertisement
ಶಿಡ್ಲಘಟ್ಟ ನಗರಸಭೆ: ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಅ.31 ರಂದು ಚುನಾವಣೆ ನಿಗದಿಯಾಗಿದ್ದು ಮಧ್ಯಾಹ್ನ 2ರಿಂದ 3 ರವರೆಗೆ ನಾಮಪತ್ರಗಳ ಸ್ವೀಕಾರ, ಮಧ್ಯಾಹ್ನ 5ರಿಂದ 5:15 ರವರೆಗೆ ನಾಮಪತ್ರಗಳ ಪರಿಶೀಲನೆ, 5:15 ರಿಂದ 5:30 ವರೆಗೆ ನಾಮಪತ್ರ ವಾಪಸ್ಸಾತಿ ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ 5:30ರ ನಂತರ ಚುನಾವಣೆ ಪ್ರಕ್ರಿಯೆ ಮುಂದುವರಿಯಲಿದ್ದು, ಬಳಿಕ ಫಲಿತಾಂಶವನ್ನುಚುನಾವಣಾಧಿಕಾರಿಗಳುಘೋಷಣೆ ಮಾಡಲಿದ್ದಾರೆ.
Related Articles
Advertisement
ನಗರಸಭೆಯ 31 ಸದಸ್ಯರ ಸ್ಥಾನಗಳ ಪೈಕಿ ಕಾಂಗ್ರೆಸ್ 15, ಪಕ್ಷೇತರ 01, ಜೆಡಿಎಸ್ 06, ಬಿಜೆಪಿ 03, ಹಾಗೂ ಪುಟ್ಟಸ್ವಾಮಿಗೌಡ ಬಣದ 6 ಸದಸ್ಯರು ಗೆಲುವು ಸಾಧಿಸಿದ್ದಾರೆ. ಶಾಸಕ ಎನ್.ಎಚ್. ಶಿವಶಂಕರ್‌ರೆಡ್ಡಿ ಅವರು ಮತ ಚಲಾಯಿಸಲಿರುವುದರಿಂದ ಕಾಂಗ್ರೆಸ್ ಪಕ್ಷದ ಸದಸ್ಯರು ಅಧಿಕಾರಕ್ಕೇರುವ ಲಕ್ಷಣಗಳು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೊನೆ ಘಳಿಗೆಯಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದು ಕಾದು ನೋಡಬೇಕಾಗಿದೆ.
ಚಿಂತಾಮಣಿ ನಗರಸಭೆ: ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನ.1 ರಂದು ಚುನಾವಣೆ ನಿಗದಿಯಾಗಿದ್ದು, ಅಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ ಬಿ ಮಹಿಳೆಗೆ ಮೀಸಲಾಗಿದೆ. ಅಪರಾಹ್ನ 2ರಿಂದ ಅಪರಾಹ್ನ 3 ರವರೆಗೆ ನಾಮಪತ್ರಗಳ ಸ್ವೀಕಾರ, ಅಪರಾಹ್ನ 5ರಿಂದ 5:15 ಗಂಟೆ ವರೆಗೆ ನಾಮಪತ್ರಗಳ ಪರಿಶೀಲನೆ, 5:15 ರಿಂದ 5:30 ವರೆಗೆ ನಾಮಪತ್ರ ವಾಪಸ್ಸಾತಿ ಪ್ರಕ್ರಿಯೆ ನಡೆಯಲಿದೆ. 5:30ರ ನಂತರ ಚುನಾವಣೆ ಪ್ರಕ್ರಿಯೆ ಮುಂದುವರಿಯಲಿದ್ದು ಬಳಿಕ ಫಲಿತಾಂಶಘೋಷಣೆ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಗರಸಭೆಯ 31 ಸದಸ್ಯರ ಸ್ಥಾನಗಳ ಪೈಕಿ ಜೆಡಿಎಸ್ 14, ಕಾಂಗ್ರೆಸ್ 01, ಮಾಜಿ ಶಾಸಕ ಸುಧಾಕರ್ ಬಣದ 14, ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದು ಇಲ್ಲಿಯೂ ಸಹ ಚುನಾವಣೆ ರಂಗೇರುವ ಸಾಧ್ಯತೆ ಹೆಚ್ಚಾಗಿದೆ.ಪಕ್ಷೇತರ ಮತಗಳು ನಿರ್ಣಾಯಕವಾಗಲಿದ್ದು, ಇಬ್ಬರು ಯಾವ ಕಡೆ ಒಲವು ವ್ಯಕ್ತಪಡಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಚಿಕ್ಕಬಳ್ಳಾಪುರ: ಬಿಜೆಪಿಗೆ ಪ್ರತಿಷ್ಠೆ : ಜಿಲ್ಲೆಯ ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅ.30 ರಂದು ಚುನಾವಣೆ ನಿಗದಿಯಾಗಿದ್ದು ಮಧ್ಯಾಹ್ನ 12ರಿಂದ ಮಧ್ಯಾಹ್ನ 1ರ ವರೆಗೆ ನಾಮಪತ್ರಗಳ ಸ್ವೀಕಾರ, ಮಧ್ಯಾಹ್ನ 3ರಿಂದ 3:15 ರವರೆಗೆ ನಾಮಪತ್ರಗಳ ಪರಿಶೀಲನೆ, 3:15 ರಿಂದ 3:30 ವರೆಗೆ ನಾಮಪತ್ರ ವಾಪಸ್ಸಾತಿ ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ 3:30ರ ನಂತರ ಚುನಾವಣೆಪ್ರಕ್ರಿಯೆ ಮುಂದುವರಿಯಲಿದ್ದು,ಬಳಿಕ ಫಲಿತಾಂಶ ಘೋಷಣೆ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ) ಮೀಸಲಾಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ತಮ್ಮ ತಮ್ಮ ರಾಜಕೀಯ ಗಾಡ್ ಫಾದರ್‌ಗಳ ಮನವೊಲಿಸುವ ಕಾಯಕದಲ್ಲಿ ತೊಡಗಿದ್ದಾರೆ. ಈ ಹಿಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಮಹಿಳೆಯಿಂದ ಇದೀಗ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯಾಗಿದೆ. ನಗರಸಭೆಯಲ್ಲಿ ಕಾಂಗ್ರೆಸ್ 16, ಬಿಜೆಪಿ 09, ಪಕ್ಷೇತರ 04, ಜೆಡಿಎಸ್2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ರಾಜ್ಯ ಸರ್ಕಾರದಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ನಗರಸಭೆಯಲ್ಲಿ ಆಡಳಿತ ಹಿಡಿಯಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‌ಗೆ ಚುಕ್ಕಾಣಿ ಸಾಧ್ಯತೆ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಒಗ್ಗಟ್ಟು ಪ್ರದರ್ಶನ ಮಾಡಿದರೆ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಹಾಗೂ ಗೌರಿಬಿದನೂರು ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದಾಗಿ ಅದೇ ರೀತಿ ಬಾಗೇಪಲ್ಲಿ ಪುರಸಭೆಯಲ್ಲಿ ಸಹ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿಹಿಡಿಯುವ ಸಾಧ್ಯತೆ ಹೆಚ್ಚಾಗಿದೆ. ಚಿಕ್ಕಬಳ್ಳಾಪುರ ನಗರಸಭೆಯ ಚುನಾವಣೆಯಲ್ಲಿ ಮಾತ್ರ ರಂಗೇರಿದ್ದು ಇಲ್ಲಿ ಆಪರೇಷನ್ ಕಮಲ ನಡೆಯುವುದೇ? ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.