ಉಪ್ಪಿನಂಗಡಿ: ತಣ್ಣೀರುಪಂತ ಗ್ರಾಮದ ಅಂಗನವಾಡಿ ಆವರಣದಲ್ಲಿ ಮೂರು ತಿಂಗಳಿಂದ ರಾಶಿ ಬಿದ್ದಿರುವ ಮರಳನ್ನು ತೆರವುಗೊಳಿಸುಂತೆ ಗ್ರಾ.ಪಂ. ಅಧ್ಯಕ್ಷರೇ ಸೂಚನೆ ನೀಡಿದ್ದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ. ಅಂಗನಾಡಿ ಆವರಣದಲ್ಲಿ ಮರಳು ರಾಶಿ ಹಾಕಿದ್ದರಿಂದ ಮಕ್ಕಳ ಆಟ, ಓಡಾಟಕ್ಕೆ ಕಷ್ಟವಾಗುತ್ತಿರುವ ಬಗ್ಗೆ ‘
ಸುದಿನ’ ವರದಿ ಪ್ರಕಟಿಸಿತ್ತು. ರಸ್ತೆ ನಿರ್ಮಾಣ ಕಾಮಗಾರಿಗೆಂದು ಗುತ್ತಿಗೆದಾರರೊಬ್ಬರು ಮರಳು, ಜಲ್ಲಿ ತಂದು ಅಂನವಾಡಿ ಆವರಣದಲ್ಲಿ ಶೇಖರಿಸಿ ಇಟ್ಟಿದ್ದರು. ಮೂರು ತಿಂಗಳಾದರೂ ತೆರವುಗೊಳಿಸದ ಕಾರಣ ನೀರು ನಿಂತು ಮಕ್ಕಳಿಗೆ ಸಮಸ್ಯೆಯಾಗಿತ್ತು. ವರದಿ ಪ್ರಕಟಗೊಂಡ ಬೆನ್ನಲ್ಲೇ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯೇ ಕೃತಕ ಚರಂಡಿ ಮುಚ್ಚುವ ಅನಿವಾರ್ಯತೆ ಒದಗಿತು. ಪ್ರವೇಶದ್ವಾರದ ಗೇಟನ್ನೂ ಮುಚ್ಚಬೇಕಾಯಿತು.
ಪತ್ರಿಕೆಯೊಂದಿಗೆ ಮಾತನಾಡಿದ್ದ ಕರಾಯ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಗುತ್ತಿಗೆದಾರರು ಅಂಗನವಾಡಿ ಆವರಣದಲ್ಲಿ ಜಲ್ಲಿ, ಮರಳು ಸಂಗ್ರಹಿಸಿದ್ದು ಸರಿಯಲ್ಲ. ಸಂಬಂಧಪಟ್ಟ ಗುತ್ತಿಗೆದಾರರನ್ನು ಸಂಪರ್ಕಿಸಿ, ವಾರದೊಳಗೆ ತೆರವುಗೊಳಿಸುವುದಾಗಿ ತಿಳಿಸಿದ್ದರು. ಆದರೆ, 10 ದಿನ ಕಳೆದರೂ ಮಕ್ಕಳು ಹಿಂಬಾಗಿಲಿನ ಮೂಲಕವೇ ಓಡಾಡುವ ಸ್ಥಿತಿ ತಪ್ಪಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ತತ್‌ಕ್ಷಣವೇ ಮರಳು, ಜಲ್ಲಿ ತೆರವುಗೊಳಿಸಿ, ಅಂಗನವಾಡಿಗೆ ಆರೋಗ್ಯಕರ ವಾತಾವರಣ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.