ಪುತ್ತೂರು: ಗ್ರಾ.ಪಂ.ನಿಂದ ಕುಡಿಯುವ ನೀರಿನ ಸಂಪರ್ಕ ಪಡೆದು ಶುಲ್ಕ ಪಾವತಿಸದೇ ಇರುವವರ ನಳ್ಳಿ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಗ್ರಾ.ಪಂ. ಅಧ್ಯಕ್ಷೆ ಸ್ಮಿತಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಬನ್ನೂರು, ಪಟ್ನೂರು, ಚಿಕ್ಕಮುಟ್ನೂರು ಗ್ರಾಮಗಳಲ್ಲಿ ನೀರಿನ ಶುಲ್ಕ ಪಾವತಿಸಲು ಬಾಕಿಯಿದ್ದು ಈಗಾಗಲೇ ನೋಟೀಸ್ ನೀಡಲಾಗಿದೆ ಎಂದು ಅಧ್ಯಕ್ಷರು ಹೇಳಿದರು.
ಘನತ್ಯಾಜ್ಯ ಘಟಕವನ್ನು ಸಂಜೀವಿನಿ ಒಕ್ಕೂಟದೊಂದಿಗೆ ಒಪ್ಪಂದದ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ.ಇದರ ಮಾಸಿಕ ಶುಲ್ಕ ಸಂಗ್ರಹಣೆ ಮಾಡಲು ಸಿಬಂದಿ ಮನೆ ಮನೆ ಭೇಟಿ ನೀಡುವ ಸಂದರ್ಭದಲ್ಲಿ ಶುಲ್ಕ ನೀಡಬೇಕು, ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು. ಇದರ ಬಗ್ಗೆ ಸ್ವತ್ಛವಾಹಿನಿ ಮೂಲಕ ಜನರಿಗೆ ಅರಿವು ಮೂಡಿಸಲು ನಿರ್ಣಯ ಕೈಗೊಳ್ಳಲಾಯಿತು.
ಗ್ರಾ.ಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್, ಸದಸ್ಯರಾದ ಶ್ರೀನಿವಾಸ ಪೆರ್ವೋಡಿ, ತಿಮ್ಮಪ್ಪ ಪೂಜಾರಿ, ಗಿರಿಧರ ಗೌಡ, ರಾಘವೇಂದ್ರ ಹಂದ್ರಟ್ಟ, ಗಣೇಶ್ ಹೆಗ್ಡೆ, ರಮಣಿ ಡಿ.ಗಾಣಿಗ, ಜಯ ಏಕ, ಹರಿಣಾಕ್ಷಿ, ವಿಮಲ, ಗೀತಾ, ಸುಪ್ರಿತಾ ಉಪಸ್ಥಿತರಿದ್ದರು.
ಸಾಕುಪ್ರಾಣಿ ಬೀದಿಗೆ ಬಿಡಬೇಡಿ ಸಾಕುಪ್ರಾಣಿಗಳನ್ನು ಬೀದಿಗೆ ಬಿಡುವುದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಹಲವಾರು ದೂರುಗಳು ಬರುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ವಾಹನ ಸವಾರರಿಗೆ ತೊಂದರೆ ಉಂಟಾದರೆ ಆ ವೆಚ್ಚಗಳನ್ನು ಸಾಕು ಪ್ರಾಣಿಗಳ ಮಾಲಕರು ಭರಿಸಬೇಕು ಎಂದು ನಿರ್ಣಯಿಸಲಾಯಿತು.