ದಾವಣಗೆರೆ: ರಾಜ್ಯ ಸರ್ಕಾರ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಮಹಿಳೆಯರಿಗೆ 2 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ನೀಡಲು ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದರು. ನಗರದ ಎಸ್‌ಎಸ್‌ಪಿ ಕಲ್ಯಾಣ ಮಂಟಪದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ಹಮ್ಮಿ ಕೊಂಡಿದ್ದ ವಿಜಯೋತ್ಸವ, ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಇನ್ನೆರಡು ತಿಂಗಳಲ್ಲಿ ಈ ಯೋಜನೆ ಜಾರಿಯಾಗಲಿದೆ ಎಂದರು. ಸದ್ಯ ರೈತರಿಗೆ ನೀಡಲಾಗುತ್ತಿರುವ ಮಾದರಿಯಲ್ಲಿಯೇ ಸಹಕಾರ ಸಂಘಗಳ
ಮೂಲಕ ಮಹಿಳೆಯರಿಗೆ ಸಾಲ ನೀಡಲಾಗುವುದು. ಮಹಿಳೆ ಸ್ವಂತ ಉದ್ಯೋಗ ಕೈಗೊಳ್ಳಲು, ಸಣ್ಣಪುಟ್ಟ ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗಲಿದೆ ಎಂದರು. ಅತ್ಯಾಚಾರ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಜಿಲ್ಲಾ ಕೇಂದ್ರದಲ್ಲಿ ತೆರೆಯಲಾಗಿದ್ದ ವಿಶೇಷ ಚಿಕಿತ್ಸಾ ಘಟಕವನ್ನು ಇದೀಗ ತಾಲೂಕು ಮಟ್ಟಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದರು.