ಕಲಬುರಗಿ: ಇಲ್ಲಿನ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಸಾಲ ಮನ್ನಾ ರೈತರಿಗೆ ಹೊಸದಾಗಿ ಸಾಲ ವಿತರಿಸುವ ಕಾರ್ಯಕ್ಕೆ ಮುಂದಾಗಿದ್ದು, ಜ. 4ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡುತ್ತಿದ್ದಾರೆ.
ಪ್ರಸಕ್ತವಾಗಿ 1.26 ಲಕ್ಷ ರೈತರಿಗೆ 500 ಕೋಟಿ ರೂ. ಬೆಳೆಸಾಲ ವಿತರಿಸಲಾಗಿದ್ದು, ಬರುವ ಮಾರ್ಚ್‌ದೊಳಗೆ ಸಾವಿರ ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷರಾಗಿರುವ ಸೇಡಂ ಮತಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜನವರಿ 8ಕ್ಕೆ ತಮ್ಮ ನೇತೃತ್ವದ ಆಡಳಿತ ಮಂಡಳಿ ಅಧಿಕಾರದ ಚುಕ್ಕಾಣಿ ಹಿಡಿದು ವರ್ಷವಾಗುತ್ತಿದೆ. ಎರಡು ವರ್ಷದಿಂದ ಸಾಲ ವಿತರಣೆಯೇ ಮಾಡದಂತಹ ಪರಿಸ್ಥಿತಿ ತಿಳಿಗೊಳಿಸಿ ಪುನಶ್ಚೇತನಗೊಳಿಸಲಾಗಿದೆ. ಪ್ರಮುಖವಾಗಿ 100 ಕೋಟಿ ರೂ. ಠೇವಣಿ ತರಲಾಗಿದೆ. ಇದರಿಂದ ವಿಶ್ವಾಸ ಇಮ್ಮಡಿಗೊಂಡಿದೆ. ರಾಷ್ಟ್ರೀಯ ಬ್ಯಾಂಕ್‌ಗಿಂತ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರಿಗೆ ಮತ್ತಷ್ಟು ಹೆಚ್ಚಿಗೆ ಸಾಲ ನೀಡಲಾಗುತ್ತಿದೆ. ಪ್ರಮುಖವಾಗಿ ನಾಲ್ಕೈದು ವರ್ಷಗಳಿಂದ ವಸೂಲಾಗದ 200 ಕೋಟಿ ರೂ. ಸಾಲ ವಸೂಲಾತಿ ಮಾಡಲಾಗಿದೆ. ಅಲ್ಲದೆ ಸರ್ಕಾರದಿಂದ ಬರಬೇಕಿದ್ದ 40ರಿಂದ 50ಕೋಟಿ ರೂ. ಬಿಡುಗಡೆಯಾಗಿದೆ. ಇದೆಲ್ಲ ಕಾರಣಗಳಿಂದ ರಾಜ್ಯದಲ್ಲಿ 21ನೇ ಸ್ಥಾನದಲ್ಲಿದ್ದ ಬ್ಯಾಂಕ್ ಈಗ ಟಾಪ್ 10ರೊಳಗೆ ಬಂದಿದೆ ಎಂದು ವಿವರಿಸಿದರು.
ಡಿಸಿಸಿ ಬ್ಯಾಂಕ್ ಕಟ್ಟಡಕ್ಕೆ ಅಡಿಗಲ್ಲು
ಬ್ಯಾಂಕ್ ಈಗ ಶತಮಾನೋತ್ಸವ ಸಂಭ್ರಮದಲ್ಲಿದ್ದು, ಕಟ್ಟಡ ಶಿಥಿಲವಾಗಿದೆ. ಹೀಗಾಗಿ ಹೊಸ ಕಟ್ಟಡಕ್ಕೆ ಜ. 4ರಂದು ಬೆಳಗ್ಗೆ 11:45ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂದಾಜು 25 ಕೋಟಿ ರೂ. ವೆಚ್ಚದ ಅಡಿಗಲ್ಲು ನೆರವೇರಿಸುವರು. ವಾಸ್ತುಶಿಲ್ಪಿ ಕಟ್ಟಡದ ನೀಲನಕ್ಷೆ ರೂಪಿಸಿದ್ದಾರೆ ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ 322 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ (ಪಿಕೆಪಿಎಸ್) ಸಂಘಗಳಿಗೆ ಮಿನಿ ಎಟಿಎಂ ವಿತರಿಸಲಾಗುತ್ತಿದೆ. ಅದೇ ರೀತಿ ಎರಡು ಮೊಬೈಲ್ ಬ್ಯಾಂಕಿಂಗ್ ವಾಹನಗಳಿಗೂ ಸಿಎಂ ಚಾಲನೆ ನೀಡುವರು ಎಂದು ತಿಳಿಸಿದರು. ಮಧ್ಯಾಮವಧಿ ಸಾಲ ಮಾರ್ಚ್ ನಂತರ ವಿತರಿಸಲಾಗುವುದು. ಅದೇ ರೀತಿ ಮುಂದಿನ ದಿನಗಳಲ್ಲಿ ಹೊಸ ತಾಲೂಕು ಕೇಂದ್ರಗಳಲ್ಲಿ ಹೊಸ ಶಾಖೆ ಹಾಗೂ ಕೆಲವು ತಾಲೂಕು ಶಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಮಾನಕರ, ಶರಣಬಸಪ್ಪ ಪಾಟೀಲ ಅಷ್ಠಗಾ, ಗೌತಮ ಪಾಟೀಲ, ಬಸವರಾಜ ಪಾಟೀಲ, ಚಂದ್ರಶೇಖರ ತಳ್ಳಳ್ಳಿ, ಬ್ಯಾಂಕ್‌ನ ಎಂಡಿ ಚಿದಾನಂದ ನಿಂಬಾಳ ಮುಂತಾದವರಿದ್ದರು.
ಠೇವಣಿ ಹೆಚ್ಚಳ, ಸಾಲ ವಸೂಲಾತಿಯಲ್ಲಿ ಬದ್ಧತೆ, ನೌಕರರಲ್ಲಿ ಸೇವಾ ದಕ್ಷತೆಗೆ ಕ್ರಮ ಹಾಗೂ ಆಡಳಿತ ಮಂಡಳಿ ಉತ್ತಮ ನಿರ್ಧಾರದಿಂದ ಬ್ಯಾಂಕ್ ಅಭಿವೃದ್ಧಿ ಯತ್ತ ಮುನ್ನಡೆದಿದೆ.
-ರಾಜಕುಮಾರ ಪಾಟೀಲ ತೇಲ್ಕೂರ, ಅಧ್ಯಕ್ಷ, ಡಿಸಿಸಿ ಬ್ಯಾಂಕ್