Advertisement

“ಕಾಯಕ ಯೋಜನೆ’ಯಲ್ಲಿ ಮಹಿಳೆಯರಿಗೆ ಸಾಲ

06:10 AM Nov 12, 2018 | |

ಬೀದರ: ಗ್ರಾಮೀಣ ಭಾಗದ ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕಾಭಿವೃದ್ಧಿಗೆ ಮುಂದಾಗಿರುವ ರಾಜ್ಯ ಸರ್ಕಾರ  “ಕಾಯಕ ಯೋಜನೆ’ ಜಾರಿಗೆ ಸಿದ್ಧತೆ ನಡೆಸಿದ್ದು, ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ ಮೊದಲ ವಾರದಲ್ಲಿ ಸಿಎಂ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

Advertisement

ಸಹಕಾರ ಇಲಾಖೆ ವ್ಯಾಪ್ತಿಗೆ ಒಳಪಡುವ ಯೋಜನೆ ಇದಾಗಿದ್ದು, ಕೌಶಲ್ಯ ಮತ್ತು ಉದ್ಯಮಶೀಲತೆ ಗುಣಮಟ್ಟ ವೃದ್ಧಿಸುವ ಗುರಿಯೊಂದಿಗೆ ಸರ್ಕಾರ ಕಾಯಕ ಯೋಜನೆ ಜಾರಿಗೊಳಿಸುತ್ತಿದೆ. ಸ್ವಸಹಾಯ ಸಂಘಗಳ ಬಲವರ್ಧನೆ ಹಾಗೂ ರಾಜ್ಯದ ಬಡ ಮಹಿಳೆಯರ ಬಾಳಲ್ಲಿ ಬೆಳಕು ಮೂಡಿಸುವ ಸಂಕಲ್ಪದೊಂದಿಗೆ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

ಗ್ರಾಮೀಣ ಭಾಗದ ಮಹಿಳಾ ಸ್ವಸಹಾಯ ಸಂಘಗಳು ಸ್ವಯಂ ಉದ್ಯೋಗ ಪ್ರಾರಂಭಿಸಿ ಆರ್ಥಿಕವಾಗಿ ಬೆಳೆಯುವ ನಿಟ್ಟಿನಲ್ಲಿ ಸರ್ಕಾರ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು ನೀಡಲಿದೆ. ರಾಜ್ಯದ ಸುಮಾರು 3,000 ಸ್ವಸಹಾಯ ಸಂಘಗಳಿಗೆ ಸ್ವಯಂ ಉದ್ಯೋಗ ಪ್ರಾರಂಭಿಸಲು ಸಾಲ ನೀಡುವ ಗುರಿಯಿದೆ. ಬೆಂಗಳೂರಿನಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲ್ಲಿದ್ದು, ರಾಜ್ಯದ ವಿವಿಧೆಡೆಯಿಂದ ಸುಮಾರು ಒಂದು ಸಾವಿರ ಮಹಿಳಾ ಸದಸ್ಯರನ್ನು ಒಂದೆಡೆ ಸೇರಿಸಿ ಈ ಯೋಜನೆಗೆ ಚಾಲನೆ ನೀಡುವ ಉದ್ದೇಶವನ್ನು ಸಹಕಾರ ಇಲಾಖೆ ಹೊಂದಿದೆ.

ಬಡ್ಡಿ ರಹಿತ ಸಾಲ: ಸ್ವಸಹಾಯ ಸಂಘಗಳು ಸ್ವಯಂ ಉದ್ಯೋಗ ಪ್ರಾರಂಭಿಸಿ ಇತರರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡಬೇಕೆಂಬ ಉದ್ದೇಶದ ಹಿನ್ನೆಲೆಯಲ್ಲಿ 10 ಲಕ್ಷ ಸಾಲ ನೀಡಲಾಗುತ್ತಿದೆ. ಸಂಘಗಳು ಪಡೆಯುವ ತಲಾ 10 ಲಕ್ಷ ರೂ. ಸಾಲದ ಪೈಕಿ 5 ಲಕ್ಷ ಸಾಲಕ್ಕೆ ಯಾವುದೇ ಬಡ್ಡಿಯಿಲ್ಲ. ಇತರೆ 5 ಲಕ್ಷ ಸಾಲಕ್ಕೆ ಪ್ರತಿ ವರ್ಷ ಶೇ.4ರಷ್ಟು ಬಡ್ಡಿಯನ್ನು ಸಂಘಗಳು ಪಾವತಿಸಬೇಕು. ಕಾಯಕವೇ ಕೈಲಾಸ ಎಂದು ಬಸವಣ್ಣನವರು ಸಾರಿದ್ದು, ಅವರ ನುಡಿಯಂತೆ  “ಕಾಯಕ ಯೋಜನೆ’ ಎಂಬ  ಹೆಸರು ಇರಿಸಲಾಗಿದೆ  ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ರಾಜ್ಯದ ಮಹಿಳಾ ಸ್ವಸಹಾಯ ಸಂಘಗಳು ಯಾವ ಉದ್ಯೋಗ ಮಾಡಬಹುದು ಎಂಬುದರ ಕುರಿತು ಸಂಘದ ಸದಸ್ಯರೊಂದಿಗೆ ಚಿಂತನೆ ನಡೆಸಬೇಕು. ಸೂಕ್ತ ಕ್ರಿಯಾ ಯೋಜನೆ ತಯಾರಿಸಿಕೊಳ್ಳಬೇಕು. ಸಂಘಗಳು ತಯಾರಿಸುವ ವಸ್ತುಗಳನ್ನು ಸರ್ಕಾರದಿಂದ ಖರೀದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಕೂಡ ಇಲಾಖೆಯಿಂದ ಮಾಡುವ ಗುರಿಯಿದೆ.

Advertisement

ಮುಖ್ಯಮಂತ್ರಿಗಳು ಸಹಕಾರ ಇಲಾಖೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಕೆಲಸ ಮಾಡಲು ಉತ್ಸಾಹ ತುಂಬುತ್ತಿದ್ದಾರೆ. ಆರ್ಥಿಕ ಸಹಕಾರ ನೀಡುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಹೊಸ ಯೋಜನೆಗಳನ್ನು ರೂಪಿಸಿ ಜನರ ಕಷ್ಟಗಳಿಗೆ ನೆರವಾಗುವ ಕೆಲಸ ಮಾಡುತ್ತಿದ್ದೇವೆ. ಕಾಯಕ ಯೋಜನೆಯಿಂದ ಸಾವಿರಾರು ಮಹಿಳೆಯರ ಬದುಕು ಹಸನಾಗಲಿದೆ.
– ಬಂಡೆಪ್ಪ ಖಾಶೆಂಪೂರ, ಸಹಕಾರ ಸಚಿವ

– ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next