ಕೋಲಾರ: ಅವಿಭಜಿತ ಜಿಲ್ಲೆಯ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬದ ಮಹಿಳೆಯರಿಗೂ ಆರ್ಥಿಕ ಶಕ್ತಿ ತುಂಬಲು ಡಿಸಿಸಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ತಲುಪಿಸುವ ಸಂಕಲ್ಪ ಮಾಡಿರುವುದಾಗಿ ಬ್ಯಾಂಕ್‌ನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಗುರುವಾರ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ ಆಯೋಜಿಸಿದ್ದ ಸಾಲ ವಿತರಣಾಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಸಾಲದ ಚೆಕ್ ವಿತರಿಸಿ ಅವರು ಮಾತನಾಡಿದರು. 4.16 ಲಕ್ಷ ಕುಟುಂಬಗಳಿಗೆ ಸಾಲ: ಎರಡೂಜಿಲ್ಲೆಗಳಲ್ಲಿ 9.46 ಲಕ್ಷ ಬಿಪಿಎಲ್ ಕುಟುಂಬಗಳಿವೆ. ಈಗಾಗಲೇ 4.16 ಲಕ್ಷ ಕುಟುಂಬಗಳಿಗೆ ಸಾಲ ನೀಡಿದ್ದು, ಉಳಿದ 5.25 ಲಕ್ಷ ಕುಟುಂಬದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಬಡ್ಡಿರಹಿತ ಸಾಲ: ಮಹಿಳಾ ಸ್ವಸಹಾಯ ಸಂಘಗಳಿಗೆ ಈಗಾಗಲೇ 5 ಲಕ್ಷ ವಿತರಿಸುತ್ತಿರುವುದನ್ನು ಮುಂದಿನ ದಿನಗಳಲ್ಲಿ 10 ಲಕ್ಷ ರೂ.ಗೆ ಏರಿಕೆ ಮಾಡಲಾಗುವುದು. ಪ್ರತಿಯೊಬ್ಬ ಮಹಿಳೆಗೆ ಒಂದು ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡುವ ಮೂಲಕ ಸ್ವಾವಲಂಬಿಗಳಾಗಿಸಿ ಡಿಸಿಸಿ ಬ್ಯಾಂಕ್ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಆಶಯ ಇದೆ ಎಂದು ತಿಳಿಸಿದರು.ಕಸಬಾ ಸೊಸೈಟಿಗೆ 9 ಕೋಟಿ ಸಾಲ: ಬ್ಯಾಂಕ್‌ನ ನಿರ್ದೇಶಕ ನಾಗನಾಳ ಸೋಮಣ್ಣ, ಕೋವಿಡ್-19 ಸೋಂಕಿನಿಂದಾಗಿ ಬೃಹತ್ ಸಮಾರಂಭ ಮಾಡಲು ಅಡಚಣೆ ಇರುವುದರಿಂದ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಸಬಾ ಸೊಸೈಟಿಗೆ 9 ಕೋಟಿ ರೂ. ಸಾಲವನ್ನು 450ಮಹಿಳಾ ಸ್ವಸಹಾಯ ಸಂಘಗಳಿಗೆ ಮಂಜೂರು ಮಾಡಲಾಗಿದ್ದು, ಇದು ಮೂರನೇ ಹಂತದ ಸಾಲ ವಿತರಣೆ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಬ್ಯಾಂಕ್‌ನ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಡಿಸಿಸಿ ಬ್ಯಾಂಕ್ ಇಂದು ಮಹಿಳೆಯರ ಹಾಗೂ ರೈತರ ಪಾಲಿನ ಕಲ್ಪವೃಕ್ಷವಾಗಿದೆ. ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರು ವೈಯಕ್ತಿಕ ವಾಗಿ ಬ್ಯಾಂಕ್‌ನಲ್ಲಿ ಖಾತೆಗಳನ್ನು ತೆರೆದು ನಿಮ್ಮ ಉಳಿತಾಯ, ಠೇವಣಿ ಸೇರಿದಂತೆ ಎಲ್ಲಾ ವಹಿವಾಟುಗಳನ್ನು ಇದೇ ಬ್ಯಾಂಕ್‌ನಲ್ಲಿ ಮಾಡುವಂತಾಗ ಬೇಕು ಎಂದು ಮನವಿ ಮಾಡಿದರು. ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸ್, ನಿರ್ದೇಶಕರಾದ ಶ್ರೀರಾಮರೆಡ್ಡಿ, ಅಮ್ಮೇರಹಳ್ಳಿ ಶ್ರೀನಿವಾಸ್, ಬೆಗ್ಲಿ ಪ್ರಕಾಶ್, ಕಾರ್ಯದರ್ಶಿ ವೆಂಕಟೇಶ್, ಬ್ಯಾಂಕ್ ವ್ಯವಸ್ಥಾಪಕ ಅಂಬರೀಶ್ ಹಾಜರಿದ್ದರು.
ಮಹಿಳೆಯರು, ರೈತರಿಗೆ 1500 ಕೋಟಿ ರೂ. ಸಾಲ : ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ಗೋವಿಂದಗೌಡರು ಅಧ್ಯಕ್ಷರಾದ ಮೇಲೆ 1500 ಕೋಟಿ ರೂ. ಸಾಲಸೌಲಭ್ಯ ಬಡ್ಡಿ ರಹಿತವಾಗಿ ಕಲ್ಪಿಸಿದೆ. ಈವರೆಗೆ 320 ಕೋಟಿ ರೂ.ಬಡ್ಡಿಯನ್ನು ಸರ್ಕಾರ ಪಾವತಿಸುತ್ತಿದೆ ಎಂದರು. ಡಿಸಿಸಿ ಬ್ಯಾಂಕಿನಲ್ಲಿ 320 ಕೋಟಿ ರೂ. ಠೇವಣಿ ಇರುವುದರಿಂದ 1500 ಕೋಟಿ ರೂ. ಸಾಲ ನೀಡುವ ಶಕ್ತಿ ಹೊಂದಿದೆ. ಅದೇ ರೀತಿ 600 ಕೋಟಿ ಠೇವಣಿ ಹೊಂದಿದಲ್ಲಿ 3000 ಸಾವಿರ ಕೋಟಿ ಸಾಲ ಸೌಲಭ್ಯ ಕಲ್ಪಿಸಲು ಬ್ಯಾಂಕ್ ಶಕ್ತವಾಗುತ್ತದೆ ಎಂದರು.
ಪ್ರತಿ ಬಿಪಿಎಲ್ ಕುಟುಂಬದ ಮಹಿಳೆಗೂಸಾಲ ತಲುಪಿಸುವ ನಮ್ಮ ಸಂಕಲ್ಪ ಕೈಗೂಡಿ ದರೆ, “ಜಾತಿ, ಧರ್ಮ, ಪಕ್ಷಾಧಾರಿತ ಸಾಲ ವಿತರಣೆ’ ಎಂಬ ಸಂಕುಚಿತ ಮನಸ್ಸುಗಳ ಆರೋಪಗಳಿಗೆ ಶಾಶ್ವತವಾಗಿ ಕಡಿವಾಣ ಬೀಳಲಿದೆ.
–ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ