ಬೆಂಗಳೂರು: ಸಾರ್ವಜನಿಕರೇ ಎಚ್ಚರ! ಲೋನ್ ಕೊಡಿಸುವ ನೆಪದಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಮೋಸ ಮಾಡುವ ವ್ಯವಸ್ಥಿತ ಜಾಲ ಸಿಲಿಕಾನ್ ಸಿಟಿಯಲ್ಲಿ ತಲೆ ಎತ್ತಿದ್ದು ಯಾಮಾರಿದರೆ ಮೋಸ ಹೋಗುವುದು ಗ್ಯಾರೆಂಟಿ. ಅಂತಹದ್ದೆ ಖತರ್ನಾಕ್ ವಂಚಕ ಜಾಲದ ಹೆಡೆಮುರಿ ಕಟ್ಟುವಲ್ಲಿ ಈಶಾನ್ಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಲೋನ್ ಕೊಡಿಸುವ ನೆಪದಲ್ಲಿ ಆನ್‌ಲೈನ್‌ನಲ್ಲಿ ಕರೆ ಮಾಡಿ ನಂಬಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಜಾಲವನ್ನು ಈಶಾನ್ಯ ವಿಭಾಗದ ಸಿಎನ್ ಎನ್ ಪೊಲೀಸರು ಭೇದಿಸಿದ್ದು ನಾಲ್ವರು ವಂಚಕರನ್ನು ಬಂಧಿಸಿದ್ದಾರೆ.
ಪೀಣ್ಯ ನಿವಾಸಿ ಸತೀಶ್ (24), ಮಧನಾಯ್ಕನಹಳ್ಳಿಯ ನಿವಾಸಿ ಉದಯ್ (24), ಗವಿಪುರಂ ಎಕ್ಸ್‌ಟೇಷನ್‌ನ ಜಯರಾಮ್ (33) ಹಾಗೂ ಚಿಕ್ಕಗೊಲ್ಲರಹಟ್ಟಿಯ ವಿನಯ್ (26) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ ಅನೂಪ್ ಎ.ಶೆಟ್ಟಿ ಮಾಹಿತಿ ನೀಡಿದ್ದಾರೆ.
1.5ಲಕ್ಷ ರೂ. 7 ಸಿಮ್ ಕಾರ್ಡ್ ವಶಕ್ಕೆ: ಬಂಧಿತ ಆರೋಪಿಗಳಿಂದ 1.5 ಲಕ್ಷ ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ 4 ಮೊಬೈಲ್, 7 ಸಿಮ್ ಕಾರ್ಡನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಗ್ರಾಹಕರಿಗೆ ಕರೆ ಮಾಡಿ ತಾವು ಟಾಟಾ ಕ್ಯಾಪಿಟಲ್‌ನ ಲೋನ್ ಡಿಪಾರ್ಟ್‌ಮೆಂಟ್‌ನಿಂದ ಕರೆ ಮಾಡುತ್ತಿದ್ದು, ನಿಮಗೆ ಬ್ಯುಸಿನೆಸ್ ಗೆ ಸಾಲ ಕೊಡುತ್ತೇವೆ ಎಂದು ನಂಬಿಸುತ್ತಿದ್ದರು. ಜತೆಗೆ ಮೊದಲು ಅಪ್ಲಿಕೇಷನ್ ಚಾರ್ಜ್ ಎಂದು 1 ಸಾವಿರ ರೂ. ಪಡೆಯುತ್ತಿದ್ದರು. ಬಳಿಕ 18 ಲಕ್ಷ ರೂ.ಲೋನ್‌ಗೆ 23 ಸಾವಿರ ರೂ. ಸಂಸ್ಥೆಯ ಶುಲ್ಕ ಹಾಗೂ 32 ಸಾವಿರ ರೂ. ತೆರಿಗೆ ಎಂದು ನಂಬಿಸಿ ಗ್ರಾಹಕರಿಂದ ಹಣ ಸುಲಿಗೆ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಪಿರ್ಯಾದುದಾದರು ಲೋನ್ ಹಣಕ್ಕಾಗಿ ಆರೋಪಿಗಳು ಕರೆ ಮಾಡಿದ್ದ ನಂಬರನ್ನು ಸಂಪರ್ಕಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಬಳಿಕ ಮೋಸ ಹೋಗಿರುವುದನ್ನು ಅರಿತು ಈಶಾನ್ಯ ವಿಭಾಗದ ಸಿ.ಎನ್. ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳು ಕರೆ ಮಾಡಿದ್ದ ನಂಬರ್‌ಗಳನ್ನು ಆಧರಿಸಿ ಮಾಹಿತಿ ಕಲೆ ಹಾಕಿ ನಾಲ್ವರನ್ನು ನಗರದ ಪೀಣ್ಯದಲ್ಲಿ ಪತ್ತೆ ಮಾಡಿದ್ದು, ಬಂಧಿಸಲಾಗಿದೆ.
ಲೋನ್ ನೆಪದಲ್ಲಿ ನಂಬಿಸಿ ಮೋಸ : ನಾಲ್ವರು ಆರೋಪಿಗಳು ರಾಜಧಾನಿ ವ್ಯಾಪ್ತಿಯ ಹಲವರಿಗೆ ಲೋನ್ ಕೊಡಿಸುವ ನೆಪದಲ್ಲಿ ಇದೇ ರೀತಿ ಕರೆ ಮಾಡಿ ಲೋನ್ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುವುದು ವಿಚಾರಣೆಯಿಂದ ಪತ್ತೆಯಾಗಿತ್ತು. ಈ ಕಾರ್ಯಾಚರಣೆ ಯನ್ನು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ಅನೂಪ್ ಎ.ಶೆಟ್ಟಿ ಮಾರ್ಗದರ್ಶ ನದಲ್ಲಿ ಸಿ.ಎನ್.ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಸಂತೋಷ್ ರಾಮ್ ಮತ್ತು ಸಿಬ್ಬಂದಿ ತಂಡ ಕೈಗೊಂಡು ವಂಚಕರನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.