Advertisement

ಕಿರು ಆಹಾರ ಸಂಸ್ಕರಣೆ ಉದ್ಯಮ ಘಟಕ ಆರಂಭಕ್ಕೆ  ಸಾಲ ಸೌಲಭ್ಯ: ತಿರಸ್ಕೃತ ಅರ್ಜಿಗಳೇ ಹೆಚ್ಚು !

11:43 PM Aug 18, 2022 | Team Udayavani |

ಉಡುಪಿ: ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣೆ ಉದ್ಯಮ (ಪಿಎಂಎಫ್ಎಂಇ) ಯೋಜನೆಯಡಿ ಉತ್ಪಾದನೆ ಘಟಕ ತೆರೆಯುವುದಕ್ಕಾಗಿ ಸಾಲ ಪಡೆಯಲು ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಮಂಜೂರಾಗಿರುವುದಕ್ಕಿಂತ ತಿರಸ್ಕೃತ ಮತ್ತು ಪರಿಶೀಲನೆಯಲ್ಲಿ ಇರುವುದೇ ಹೆಚ್ಚು.

Advertisement

ಉಡುಪಿ ಜಿಲ್ಲೆಯಲ್ಲಿ ಕಿರು ಆಹಾರ ಸಂಸ್ಕರಣೆ ಘಟಕ  ತೆರೆಯಲು 53 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 23 ಮಂಜೂರಾಗಿದ್ದು, 30 ತಿರಸ್ಕೃತಗೊಂಡಿವೆ. ಎರಡು ಅರ್ಜಿಗಳು ಬ್ಯಾಂಕ್‌ ಹಂತದಲ್ಲಿ ಪರಿಶೀಲನೆಯಲ್ಲಿವೆ. ದಕ್ಷಿಣ ಕನ್ನಡದಲ್ಲಿ 79 ಅರ್ಜಿಗಳಲ್ಲಿ 38 ಮಂಜೂರಾಗಿದ್ದು, 29 ತಿರಸ್ಕೃತಗೊಂಡಿವೆ; 12 ಪರಿಶೀಲನೆಯಲ್ಲಿವೆ. ಈ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಸರಕಾರದ ಸೂಚನೆಯಿದ್ದರೂ ಕೆಲವು ಬ್ಯಾಂಕ್‌ಗಳಲ್ಲಿ ಇದು ಪಾಲನೆಯಾಗುತ್ತಿಲ್ಲ ಎಂಬ ಆರೋಪ ಇದೆ.

ಸರಕಾರದಿಂದ ಸಬ್ಸಿಡಿ:

ಪಿಎಂಎಫ್ಎಂ ಘಟಕ ತೆರೆಯುವವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಬ್ಸಿಡಿ ನೀಡಲಾಗುತ್ತದೆ. 20 ಲಕ್ಷ ರೂ.ಗಳ ವರೆಗಿನ ಹೂಡಿಕೆಗೆ ಶೇ. 50ರಷ್ಟು ಸಬ್ಸಿಡಿ ಸಿಗಲಿದೆ. ಇದರಲ್ಲಿ ರಾಜ್ಯ ಸರಕಾರದ ಪಾಲು ಶೇ. 15 ಮತ್ತು ಕೇಂದ್ರ ಸರಕಾರದ ಪಾಲು ಶೇ. 35ರಷ್ಟಿದೆ. ಸಬ್ಸಿಡಿಯು ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಆಗುತ್ತದೆ. ಈಗಾಗಲೇ ಉಡುಪಿ ಜಿಲ್ಲೆಯಲ್ಲಿ 23 ಘಟಕಗಳಿಗೆ ಸುಮಾರು 2.60 ಕೋಟಿ ರೂ. ಮತ್ತು ದ. ಕನ್ನಡ ಜಿಲ್ಲೆಯಲ್ಲಿ 38 ಘಟಕಗಳಿಗೆ 3 ಕೋ.ರೂ.ಗೂ ಅಧಿಕ ಸಾಲ ಮಂಜೂರು ಮಾಡಲಾಗಿದೆ.

ತಿರಸ್ಕೃತವಾಗಲು ಏನು ಕಾರಣ? :

Advertisement

ಪಿಎಂಎಫ್ಎಂ ಯೋಜನೆಗೆ ಸಲ್ಲಿಸಿರುವ ಬಹುಪಾಲು ಅರ್ಜಿಗಳು ವ್ಯಾಪಾರ ಪರವಾನಿಗೆ (ಟ್ರೇಡ್‌ ಲೈಸನ್ಸ್‌) ಕಾರಣದಿಂದ ತಿರಸ್ಕೃತಗೊಳ್ಳುತ್ತಿವೆ. ಗ್ರಾ.ಪಂ. ಸಹಿತ ಸ್ಥಳೀಯ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು ವ್ಯಾಪಾರ ಪರವಾನಿಗೆ ನೀಡುವುದಿಲ್ಲ. ಅವುಗಳಿಂದ ಎನ್‌ಒಸಿ ಮಾತ್ರ ಪಡೆಯಬೇಕಾಗುತ್ತದೆ. ಆದರೆ ಬ್ಯಾಂಕ್‌ಗಳು ಸ್ಥಳೀಯ ಸಂಸ್ಥೆಗಳಿಂದ ವ್ಯಾಪಾರ ಪರವಾನಿಗೆ ತರುವಂತೆ ಹೇಳುವುದೇ ಪ್ರಮುಖ ಸಮಸ್ಯೆ. ಉದ್ಯಮ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರೆ ವ್ಯಾಪಾರ ಪರವಾನಿಗೆ ಅಗತ್ಯ ಇರುವುದಿಲ್ಲ. ಹೀಗಾಗಿ ಬ್ಯಾಂಕ್‌ಗಳು ಅರ್ಜಿ ತಿರಸ್ಕರಿಸುವುದಕ್ಕೆ ಮುನ್ನ ಈ ಅಂಶವನ್ನು ಗಮನಿಸಬೇಕಾಗುತ್ತದೆ. ಅಪೂರ್ಣ ದಾಖಲೆಗಳನ್ನು ನೀಡುವ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಎಲ್ಲ ದಾಖಲೆಗಳನ್ನು ಏಕಕಾಲದಲ್ಲೇ ನೀಡಬೇಕು. ಒಮ್ಮೆ ಅರ್ಜಿ ಸಲ್ಲಿಸಿದ ಅನಂತರದ ಪರಿಷ್ಕರಿಸಲು ಅಥವಾ ಹೊಸದಾಗಿ ದಾಖಲೆಗಳನ್ನು ಸೇರಿಸಲು ಆಗುವುದಿಲ್ಲ. ಹೀಗಾಗಿ ಯಾವುದೇ ಒಂದು ದಾಖಲೆ ಇಲ್ಲದಿದ್ದರೂ ಅರ್ಜಿ ತಿರಸ್ಕೃತಗೊಳ್ಳುತ್ತದೆ. ಒಮ್ಮೆ ತಿರಸ್ಕೃತಗೊಂಡರೆ ಮತ್ತೆ ಆರಂಭದಿಂದಲೇ ಹೊಸದಾಗಿ ಅರ್ಜಿ ಸಲ್ಲಿಸಬೇಕು. ತಾಂತ್ರಿಕ ಅಂಶಗಳ ಬಗ್ಗೆ ವಿಶೇಷ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿ.ಎಂ. ಪಿಂಜಾರ, ಉಡುಪಿ ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಪಿಎಂಎಫ್ಎಂಇ ಯೋಜನೆಯಡಿ ಅರ್ಜಿಗಳು ತಿರಸ್ಕೃತವಾಗಿರುವುದು ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲೂ ಚರ್ಚೆಯಾಗಿದೆ. ವ್ಯಾಪಾರ ಪರವಾನಿಗೆ ವಿಚಾರವಾಗಿ ತಿರಸ್ಕೃತವಾಗಿರುವುದು ಇದೆ. ಉದ್ಯಮ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡರೆ ಎಲ್ಲದಕ್ಕೂ ಅನುಕೂಲ. ಬ್ಯಾಂಕ್‌ಗಳು ಗ್ರಾ.ಪಂ.ಗಳಿಂದ ವ್ಯಾಪಾರ ಪರವಾನಿಗೆ ಕೇಳಬಾರದು.-ಪಿ.ಎಂ. ಪಿಂಜಾರ, ಉಡುಪಿ ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next