ನಟ ಕಂ ನಿರ್ದೇಶಕ ಮೋಹನ್ ತಮ್ಮ ಹೊಸಚಿತ್ರ ಚಿತ್ರದ ಚಿತ್ರೀಕರಣ ಆರಂಭಿಸಿದ್ದ ವಿಷಯ ನಿಮಗೆ ಗೊತ್ತಿರಬಹುದು. ತಮ್ಮ ಹೊಸ ಚಿತ್ರಕ್ಕೆ “ಲೋಫರ್ಸ್’ ಎಂಬ ಟೈಟಲ್ ಮೋಹನ್ ಇಟ್ಟುಕೊಂಡಿದ್ದರೂ, ಆರಂಭದಲ್ಲಿ ಚಿತ್ರದ ಟೈಟಲ್ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಿಂದೇಟು ಹಾಕಿತ್ತು. ಆದರೆ ಪಟ್ಟು ಬಿಡದ ಮೋಹನ್, ಅಂತೂ ತಮ್ಮ ಚಿತ್ರಕ್ಕೆ “ಲೋಫರ್ಸ್’ ಟೈಟಲ್ ಪಡೆದುಕೊಳ್ಳಲು ಯಶಸ್ವಿಯಾಗಿದ್ದರು.
ಈಗ ವಿಷಯ ಏನಪ್ಪಾ ಅಂದರೆ, ಮೋಹನ್ ಸದ್ದಿಲ್ಲದೆ ತಮ್ಮ “ಲೋಫರ್ಸ್’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ ಇತ್ತೀಚೆಗೆ ಚಿತ್ರದ ಹಾಡುಗಳನ್ನೂ ಬಿಡುಗಡೆ ಮಾಡಿದ್ದಾರೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಸರಳ ಸಮಾರಂಭದಲ್ಲಿ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರೇ ಸೇರಿಕೊಂಡು “ಲೋಫರ್ಸ್’ ಚಿತ್ರದ ಆಡಿಯೋವನ್ನು ಬಿಡುಗಡೆಗೊಳಿಸಿದರು. ಈ ಚಿತ್ರಕ್ಕೆ ಬಿ.ಎನ್.ಗಂಗಾಧರ್ ನಿರ್ಮಾಪಕರು.
ಅವರು ಹೊಸಬರನ್ನೇ ಇಟ್ಟುಕೊಂಡು ಚಿತ್ರ ಮಾಡೋಕೆ ಕಾರಣ ಏನೆಂಬುದನ್ನು ಹೇಳಿದ್ದು ಹೀಗೆ. “ಮಲ್ಟಿಸ್ಟಾರ್ ಚಿತ್ರ ಮಾಡುವ ಬದಲು ಹೊಸಬರು ಬರಬೇಕು ಎನ್ನುವ ಕಾರಣಕ್ಕೆ ನಿರ್ಮಾಣ ಮಾಡಲಾಗಿದೆ. ಹೊಸಬರಲ್ಲಿ ಹೊಸತನ ಇರುತ್ತೆ. ಹಾಗಾಗಿ, ಹೊಸಬರೇ ಈ ಚಿತ್ರದ ಹೈಲೈಟ್’ ಅಂದರು. ನಿರ್ದೇಶಕ ಮೋಹನ್ ಅವರು ಇಲ್ಲಿ ನಿರ್ದೇಶನದ ಜೊತೆಗೆ ಹಾಡನ್ನೂ ಬರೆದಿದ್ದಾರೆ. ಆ ಬಗ್ಗೆ ಹೇಳುವ ಮೋಹನ್, “ಚಿತ್ರದಲ್ಲಿ ಎರಡು ಹಾಡುಗಳಿಗೆ ನಾನು ಹಾಗೂ ಹರೀಶ್. ಬಿ ರಾಯ್ ಸಾಹಿತ್ಯ ಬರೆದಿದ್ದೇವೆ.
ಇದು ಯಾವುದೋ ಒಂದು ಜಾನರ್‌ಗೆ ಅಂತ ಸೀಮಿತವಾದ ಚಿತ್ರ ಎಂದು ಹೇಳಲು ಸಾಧ್ಯವಿಲ್ಲ. ಇದು ಎಲ್ಲಾ ವರ್ಗದ ಪ್ರೇಕ್ಷಕರೂ ನೋಡುವಂತಹ ಸಿನಿಮಾ. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಇದೆ’ ಎಂಬುದು ಮೋಹನ್ ಅವರ ಮಾತು. ಹಾಗಾದರೆ, ಈ “ಲೋಫರ್ಸ್’ ಕಥೆ ಏನು? “ಏಳು ಜನ ದಿಕ್ಕು-ದೆಸೆ ಇಲ್ಲದ ಅಬ್ಬೆಪಾರಿಗಳು, ಅಲೆಮಾರಿಗಳ ಬದುಕನ್ನು ಈ ಚಿತ್ರದಲ್ಲಿ ತೆರೆದಿಡಲಾಗಿದೆ.
ನಕರಾತ್ಮಕ ಹುಡುಗ, ಹುಡುಗಿಯರು ಒಂದೇ ಅತಿಥಿ ಗೃಹದಲ್ಲಿ ತಂಗುತ್ತಾರೆ. ಅಲ್ಲಿ ಇವರುಗಳ ಕಥೆ ತೆರೆದುಕೊಳ್ಳಲಿದ್ದು, ಆ್ಯಕ್ಷನ್-ಥ್ರಿಲ್ಲರ್ ಸ್ವರೂಪದಲ್ಲಿ ಚಿತ್ರವನ್ನು ತೆರೆಮೇಲೆ ತರುತ್ತಿದ್ದೇವೆ. ಅಲ್ಲದೆ ಇಂದಿನ ಯುವ ಸಮೂಹ ಏನು ಮಾಡಬಾರದು, ಮಾಡಿದರೂ ಅದನ್ನು ಒಂದು ಹಂತದವರೆಗೆ ಮಿತಿಯಲ್ಲಿ ಇಟ್ಟುಕೊಳ್ಳಬೇಕು. ಡ್ರಗ್ಸ್‌ನಿಂದ ದೂರವಿರಿ ಎಂಬ ಸಂದೇಶ ಚಿತ್ರದಲ್ಲಿದೆ ಎಂಬುದು ನಿರ್ದೇಶಕರು ಕೊಡುವ ವಿವರ.
ಚಿತ್ರದ ಮೂವರು ನಾಯಕರುಗಳಾದ ಚೇತನ್, ಅರ್ಜುನ್, ಮನೋಹರ್, ಕೆಂಪೇಗೌಡ ಹಾಗು ನಾಯಕಿಯರಾದ ಸಾಕ್ಷಿ, ಸುಶ್ಮಾ ರಾವ್, ಶ್ರಾವ್ಯ ಚಿತ್ರೀಕರಣದ ಅನುಭವಗಳನ್ನು ಚುಟುಕಾಗಿ ಹಂಚಿಕೊಂಡರು. ಸಮಾರಂಭದಲ್ಲಿ ಛಾಯಾಗ್ರಹಕ ಪ್ರಸಾದ್ ಬಾಬು, ಸಂಗೀತ ಸಂಯೋಜಕ ದಿನೇಶ್ ಕುಮಾರ್ ಸೇರಿದಂತೆ ಇತರರು ಹಾಡುಗಳ ಬಿಡುಗಡೆಗೆ ಸಾಕ್ಷಿಯಾದರು.