Advertisement

ಹೆದ್ದಾರಿ ಬದಿ ಸಾಗಾಟ ವಾಹನ ನಿಲುಗಡೆ

02:50 AM Jun 30, 2018 | Karthik A |

ವಿಶೇಷ ವರದಿ – ಪುತ್ತೂರು: ಹೆದ್ದಾರಿಯ ಎರಡೂ ಬದಿಗಳಲ್ಲಿ 100 ಮೀ. ಉದ್ದ ಸಾಲುಗಟ್ಟಿ ನಿಂತಿರುವ ಲಾರಿಗಳು, ಮುಂದೆ ಹಾಗೂ ಹಿಂದೆ ಬರುವ ವಾಹನಗಳ ಅರಿವಾಗದೆ ಸಂಚಾರಕ್ಕೆ ಪರದಾಡುವ ವಾಹನ ಚಾಲಕರು, ರಸ್ತೆಯಲ್ಲೇ ಭಯದಿಂದ ನಡೆದುಕೊಂಡು ಹೋಗುವ ಶಾಲಾ-ಕಾಲೇಜು ವಿದ್ಯಾರ್ಥಿಗಳು…! ಇದು ಮರೀಲು ಪರಿಸರದಲ್ಲಿ ನಿತ್ಯ ಕಾಣುವ ದೃಶ್ಯ. ಈ ಅಪಾಯಕಾರಿ ಸ್ಥಿತಿಗೆ ಕಾರಣ ಪ್ರತಿಷ್ಟಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೋದ ಚಾಕಲೇಟು ಫ್ಯಾಕ್ಟರಿ, ಅಬಕಾರಿ ಇಲಾಖೆಯ ಮದ್ಯ ದಾಸ್ತಾನು ಕೇಂದ್ರ, ಕ್ಯಾಶ್ಯೂ ಕಾರ್ಖಾನೆ. ಈ ಸಂಸ್ಥೆಗಳು ತಮ್ಮಲ್ಲಿಗೆ ಬರುವ ವಾಹನಗಳಿಗೆ ವಿಸ್ತಾರದ ಯಾರ್ಡ್‌ ವ್ಯವಸ್ಥೆ ಕಲ್ಪಿಸದೆ ಸಾರ್ವಜನಿಕ ರಸ್ತೆಬದಿಯನ್ನು ಬಳಸಿಕೊಳ್ಳುತ್ತಿರುವುದು ಇಷ್ಟೆಲ್ಲಾ ಸಮಸ್ಯೆಗಳ ಸೃಷ್ಟಿಗೆ ಕಾರಣ.

Advertisement

ಸಮಸ್ಯೆ ಏನು ?
ಅಬಕಾರಿ ಇಲಾಖೆಯ ಮದ್ಯ ದಾಸ್ತಾನು ಕೇಂದ್ರವು ನಾಲ್ಕು ತಾಲೂಕು ವ್ಯಾಪ್ತಿಯನ್ನು ಹೊಂದಿದೆ. ಈ ಕಾರಣದಿಂದ ನಾಲ್ಕು ತಾ|ಗಳ ಮದ್ಯದಂಗಡಿಗಳಿಗೆ ಹಂಚಿಕೆಯಾಗುವ ವಿವಿಧ ಬಗೆಯ ಮದ್ಯ ದಾಸ್ತಾನಿಗಾಗಿ ಮರೀಲ್‌ ನಲ್ಲಿರುವ ಈ ಕೇಂದ್ರಕ್ಕೆ ಬರುತ್ತದೆ. ದಿನಂಪ್ರತಿ 20- 25 ಲಾರಿಗಳು ಇಲ್ಲಿ ಖಾಲಿ ಮಾಡಿ ಹೋದರೆ ಮತ್ತೆ 20 -25 ಲಾರಿಗಳು ಬರುತ್ತವೆ. ಮದ್ಯ ದಾಸ್ತಾನು ಕೇಂದ್ರದ ಯಾರ್ಡ್‌ನಲ್ಲಿ ಸಾಕಷ್ಟು ಜಾಗ ಇಲ್ಲದೇ ಇರುವುದರಿಂದ ಮತ್ತು ದಾಸ್ತಾನು ಮುಗಿದ ಬಳಿಕವಷ್ಟೇ ಲಾರಿಗಳಿಂದ ಅನ್‌ ಲೋಡ್‌ ಮಾಡುವುದರಿಂದ ಕೆಲವೊಮ್ಮೆ ವಾರಗಟ್ಟಲೆಯೂ ಲಾರಿಗಳು ರಸ್ತೆ ಬದಿಯಲ್ಲೇ ನಿಲ್ಲಬೇಕಾಗುತ್ತದೆ. ಕೇಂದ್ರಕ್ಕೆ ಬರುವ ಮದ್ಯ ತುಂಬಿದ ಲಾರಿಗಳಿಗೆ ಯಾರ್ಡ್‌ನ ವ್ಯವಸ್ಥೆ ಮಾಡದಿರುವುದು ಅಬಕಾರಿ ಇಲಾಖೆಯ ಸಮಸ್ಯೆ. ಇನ್ನು ಪ್ರತಿಷ್ಠಿತ ಕ್ಯಾಂಪ್ಕೋ ಚಾಕಲೇಟು ಸಂಸ್ಥೆಯು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಹಬ್ಬಿರುವುದರಿಂದ ದಿನಂಪ್ರತಿ ಹಲವು ಲಾರಿಗಳಲ್ಲಿ ಚಾಕಲೇಟುಗಳನ್ನು ಇಲ್ಲಿಂದ ಸಾಗಾಟ ಮಾಡಲಾಗುತ್ತದೆ. ಈ ಸಾಗಾಟ ವಾಹನಗಳೂ ರಸ್ತೆ ಬದಿಯಲ್ಲೇ ದಿನಗಟ್ಟಲೇ ನಿಲುಗಡೆಯಾಗುತ್ತವೆ. ಕ್ಯಾಶ್ಯೂ ಇಂಡಸ್ಟ್ರೀಸ್‌ಗೂ ಇದೇ ರೀತಿಯಲ್ಲಿ ಘನ ವಾಹನಗಳು ಬರುವುದರಿಂದ ಅವುಗಳೂ ರಸ್ತೆ ಬದಿಯಲ್ಲೇ ನಿಲ್ಲುತ್ತವೆ.

ಕಾಲೇಜು ಪರಿಸರ, ತಿರುವು
ಈ ಮೂರು ಸಂಸ್ಥೆಗಳು 50 ಮೀ. ವ್ಯಾಪ್ತಿಯಲ್ಲಿ ಬಂದರೆ ಇವುಗಳಿಗೆ ಸಂಬಂಧಿಸಿದ ಸಾಗಾಟ ವಾಹನಗಳು 100 ಮೀ. ವ್ಯಾಪ್ತಿಯಲ್ಲಿ ರಸ್ತೆಯ ಎರಡೂ ಕಡೆಗಳಲ್ಲಿ ನಿಲ್ಲುತ್ತವೆ. ಜತೆಗೆ ಇರುವೂ ಇರುವುದರಿಂದ ಎದುರಿನಿಂದ ವಾಹನಗಳು ಬರುವುದು ಅರಿವಾಗುವುದಿಲ್ಲ. ಅಪಘಾತ ಗಳ ಪ್ರಮಾಣವೂ ಅಧಿಕವಾಗುತ್ತಿದೆ. ಪಕ್ಕದಲ್ಲೇ ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳು, ಇತರ ಶಾಲೆಗಳು ಇರುವುದರಿಂದ ನೂರಾರು ವಿದ್ಯಾರ್ಥಿಗಳು ನಡೆದುಕೊಂಡು ಹೋಗಲೂ ಪರದಾಡುವ ಸ್ಥಿತಿ ಇದೆ. ಸಾರ್ವಜನಿಕರು, ಹಿರಿಯ ನಾಗರೀಕರೂ ರಸ್ತೆಯಲ್ಲೇ ಭಯದಿಂದ ನಡೆದುಕೊಂಡು ಹೋಗಬೇಕಾಗಿದೆ.

ನಗರಸಭೆಯ ಪಾಲೂ ಇದೆ
ಮಂಜೇಶ್ವರ – ದರ್ಬೆ -ಸುಬ್ರಹ್ಮಣ್ಯ ಅಂತಾರಾಜ್ಯ ರಸ್ತೆ ಇದಾಗಿದ್ದು, ದರ್ಬೆಯಿಂದ ಬೆದ್ರಾಳ ತನಕ ರಸ್ತೆ ಅಗಲಗೊಳಿಸಲು ನಗರಸಭೆ ಆಡಳಿತವು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಚರಂಡಿಗಳನ್ನು ಮುಚ್ಚಿ ಸಮತಟ್ಟುಗೊಳಿಸಲಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಕೆಸರು ತುಂಬಿರುವುದರಿಂದ ವಾಹನಗಳಿಗೂ ನಿಲುಗಡೆ ಮಾಡಲು ಸಾಧ್ಯವಾಗುತ್ತಿಲ್ಲ, ಜತೆಗೆ ಪಾದಚಾರಿಗಳಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ರಸ್ತೆ ಬದಿ ಇಷ್ಟೊಂದು ವಾಹನಗಳ ನಿಲುಗಡೆಗೆ ಕಡಿವಾಣ ಹಾಕದ ನಗರಸಭೆ ಆಡಳಿತ ಸಂಚಾರ ವ್ಯವಸ್ಥೆಯನ್ನೂ ಸಮರ್ಪಕಗೊಳಿಸದೆ ಸಮಸ್ಯೆಗೆ ತನ್ನ ಪಾಲೂ ನೀಡಿದೆ.

ತತ್‌ ಕ್ಷಣ ಕ್ರಮ ಅಗತ್ಯ
ಶಾಲಾ -ಕಾಲೇಜು ಪರಿಸರವಾಗಿರುವುದರಿಂದ ಹಾಗೂ ಸಾರ್ವಜನಿಕ ಓಡಾಟ ಹೆಚ್ಚಾಗಿರುವುದರಿಂದ ಮರೀಲ್‌ ನ ಈ ಪರಿಸರ ಅಪಾಯಕಾರಿಯಾಗಿದೆ. ಅಪಘಾತಗಳೂ ಆಗಾಗ ನಡೆಯುತ್ತಿವೆ. ಹೀಗೇ ಮುಂದುವರೆದರೆ ಸಮಸ್ಯೆ ದೊಡ್ಡದಾಗಬಹುದು. ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು.
– ಅಬೀಜರ್‌ ಕೂರ್ನಡ್ಕ, ಸ್ಥಳೀಯ

Advertisement

ಪಾರ್ಕಿಂಗ್‌ ಸೌಲಭ್ಯ ಬೇಕು
ಮೂರು ಸಂಸ್ಥೆಗಳ ಸಾಗಾಟ ಘನ ವಾಹನಗಳನ್ನು ರಸ್ತೆ ಬದಿ ಪಾರ್ಕ್‌ ಮಾಡಲಾಗುತ್ತಿದೆ. 25-50 ವಾಹನಗಳು ದಿನಂಪ್ರತಿ ಇರುತ್ತವೆ. ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾಗಿರುವುದರಿಂದ ವಾಹನಗಳು ಬರುವುದೂ ಅರಿವಾಗುವುದಿಲ್ಲ. ಈ ಸಂಸ್ಥೆಗಳು ತಮ್ಮ ಅಗತ್ಯಕ್ಕೆ ಬೇರೆ ಕಡೆಗಳಲ್ಲಿ ಯಾರ್ಡ್‌ ಮಾಡಿಕೊಳ್ಳಬೇಕು. ಜನರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಸಂಬಂಧಪಟ್ಟವರು ಗಮನಹರಿಸಬೇಕು. 
– ಕೆ. ಜಿ. ಭಟ್‌, ನಿವೃತ್ತ ಲೆ| ಕರ್ನಲ್‌ ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next