Advertisement

ಗ್ರಾಮೀಣಕ್ಕೆ ತಟ್ಟಿದ ಬಿಸಿ: ಬತ್ತುತ್ತಿದೆ ಅಂತರ್ಜಲ

05:46 AM Feb 28, 2019 | Team Udayavani |

ಜಾಲ್ಸೂರು: ಬಿಸಿಲಿನ ಬೇಗೆ ತೀವ್ರಗೊಳ್ಳುತ್ತಿದ್ದು, ಗ್ರಾಮೀಣ ಪ್ರದೇಶಗಳ ನೀರಿನ ಮೂಲಗಳು ಬತ್ತ ತೊಡಗಿವೆ. ಮುಂಬರುವ ದಿನಗಳಲ್ಲಿ ದಿನ ಬಳಕೆಯ ನೀರಿನ ಪೂರೈಕೆಗೂ ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗುವ ಸಂಶಯ ಕಾಡುತ್ತಿದೆ.

Advertisement

ನಗರಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳ ಸ್ಥಿತಿ ಕೊಂಚ ಪರವಾಗಿಲ್ಲ ಎಂದರೂ ಪರಿಸ್ಥಿತಿ ಹೆಚ್ಚೇನೂ ಭಿನ್ನವಾಗಿಲ್ಲ. ನದಿಗಳು ನೀರಿನ ಅಭಾವ ಎದುರಿಸುತ್ತಿರುವಂತೆಯೇ ಕೊಳವೆ ಬಾವಿಗಳ ನೀರಿನ ಮಟ್ಟ ದಿನೇ ದಿನೇ ಕುಸಿತ ಕಂಡುಬರುತ್ತಿದೆ. ಐದು ಗ್ರಾಮಗಳಿಗೂ ಇದೆ ಸಮಸ್ಯೆ ಬೇಸಗೆ ಕಾಲದಲ್ಲಿ ಗ್ರಾಮಗಳಲ್ಲಿ ಹೆಚ್ಚಿನ ಜನರು ಕುಡಿಯುವ ನೀರು ಹಾಗೂ ದಿನಬಳಕೆಗೆ ನಳ್ಳಿ ನೀರನ್ನೇ ಆಶ್ರಯಿಸಿದ್ದಾರೆ. ಬಾವಿಗಳಲ್ಲಿ ಮಾರ್ಚ್‌, ಎಪ್ರಿಲ್‌ ತಿಂಗಳಾಗುವಾಗ ನೀರಿನ ಮಟ್ಟ ಕಡಿಮೆಯಾಗುವುದು ಇದಕ್ಕೆಲ್ಲ ಪ್ರಮುಖ ಕಾರಣ. ಐವರ್ನಾಡು, ಜಾಲ್ಸೂರು, ಕನಕಮಜಲು, ಅಜ್ಜಾವರ ಹಾಗೂ ಮಂಡೆಕೋಲು ಇಲ್ಲಿನ ಗ್ರಾಮಸ್ಥರಿಗೆ ನಳ್ಳಿ ನೀರಿನ ಸಂಪರ್ಕವಿದ್ದರೂ, ವ್ಯವಸ್ಥಿತ ನೀರಿನ ಪೂರೈಕೆಯಿಲ್ಲದೆ ತೊಂದರೆಪಡುವಂತಾಗಿದೆ. ಒಟ್ಟು ಐದು ಗ್ರಾಮಗಳಲ್ಲಿ 2,673ರಷ್ಟು ನಳ್ಳಿ ನೀರಿನ ಬಳಕೆದಾರದ್ದಾರೆ. 79 ಕೊಳವೆ ಬಾವಿಗಳು ಹಾಗೂ 6 ಬಾವಿಗಳನ್ನು ಪ್ರಸ್ತುತ ನೀರು ಪೂರೈಕೆಗೆ ಬಳಸಲಾಗುತ್ತಿದೆ.


ಎಲ್ಲ ಕಡೆ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದ್ದರೂ ಐವರ್ನಾಡು, ಜಾಲ್ಸೂರು, ಅಜ್ಜಾವರ ಗ್ರಾಮಗಳಲ್ಲಿ ಬಾವಿಗಳನ್ನೂ ನಳ್ಳಿ ನೀರಿಗೆ ಉಪಯೋಗಿಸುತ್ತಾರೆ. ಜಾಲ್ಸೂರಿನಲ್ಲಿ ಹೊಳೆಗೆ ರಿಂಗ್‌ ಅಳವಡಿಸಿ ನೀರು ಶೇಖರಿಸುತ್ತಾರೆ. ಹೀಗಿದ್ದರೂ ಮಾರ್ಚ್‌, ಎಪ್ರಿಲ್‌, ಮೇ ತಿಂಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗುತ್ತವೆ ಎಂದು ಪಂಚಾಯತ್‌ ಸಿಬಂದಿ ಹೇಳುತ್ತಾರೆ.

ಕಳೆದ ವರ್ಷದ ಸ್ಥಿತಿ
ನೀರಿನ ಸಮಸ್ಯೆ ಕಳೆದ ವರ್ಷವೂ ಇದೇ ರೀತಿಯಾಗಿದ್ದು, ಮಾರ್ಚ್‌, ಎಪ್ರಿಲ್‌ ತಿಂಗಳುಗಳಲ್ಲಿ ಪರಿಸ್ಥಿತಿ ಹೆಚ್ಚು ಬಿಗಾಡಾಯಿಸುತ್ತವೆ. ಸಮಸ್ಯೆ ನಿವಾರಿಸಲು ಕೊಳವೆ ಬಾವಿ ಕೊರೆಯಲಾಗಿತ್ತು. ಲೋಡ್‌ ಶೆಡ್ಡಿಂಗ್‌, ವಿದ್ಯುತ್‌ ಕಣ್ಣಾ ಮುಚ್ಚಾಲೆ ಕೂಡ ಜನರನ್ನು ಕಂಗೆಟ್ಟಿಸಿತ್ತು. ನೀರಿನ ಅಭಾವ ಇದ್ದ ಕಡೆ ಜಲ ಮರು ಪೂರಣ ಘಟಕ ಮಾಡಿದ್ದರೂ, ಅದಕ್ಕೊಂದು ಶಾಶ್ವತ ಪರಿಹಾರ ಕಾಣಲಿಲ್ಲ. ಜಾಲ್ಸೂರಿನ ಅಡ್ಕಾರು, ಬೊಲುಬೈಲು, ಐವರ್ನಾಡು ಪಂಚಾಯತ್‌ ವ್ಯಾಪ್ತಿಯ ಅಜ್ಜಮೂಲೆ, ಕನಕಮಜಲಿನ ಕಾರಿಂಜ ಅಜ್ಜಾವರ ಗ್ರಾಮದ ನೆಹರೂನಗರ, ಮುಳ್ಯ ದೊಡ್ಡೇರಿ ಈ ಭಾಗಗಳಲ್ಲಿ ಕಳೆದ ವರ್ಷ ನೀರಿನ ಪೂರೈಕೆಗೆ ತೊಂದರೆಯಾಗಿತ್ತು.

ನೀರಿನ ಮಟ್ಟ ಕುಸಿತ
ಐದು ಗ್ರಾಮಗಳಲ್ಲಿ ಸುಮಾರು 79 ಕೊಳವೆ ಬಾವಿಗಳಿದ್ದರೂ ಬೇಸಗೆ ಕಾಲದಲ್ಲಿ ನೀರಿನ ಮಟ್ಟ ಕುಸಿಯುವುದು ಸಾಮಾನ್ಯವಾಗಿವೆ. ಈ ಪೈಕಿ 15 ಕೊಳವೆ ಬಾವಿಗಳಲ್ಲಿ ನೀರು ತೀರಾ ಕೆಳ ಮಟ್ಟಕ್ಕೆ ಕುಸಿಯುತ್ತವೆ. ಕೆಲವು ಕೊಳವೆ ಬಾವಿಗಳನ್ನು ನೀರಿಲ್ಲದೆ ಮುಚ್ಚಲಾಗಿದೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿರುವುದು ಕೊರತೆಗೆ ಕಾರಣವಾಗಿದೆ. ಕೊಳೆಯ ಬಾವಿ ಕೊರೆಯುವುದನ್ನು ಹೊರತು ಪಡಿಸಿ ಮಳೆ ಕೊಯ್ಲು, ಜಲ ಮರುಪೂರಣ ಘಟಕ ನಿರ್ಮಾಣಕ್ಕೆ ಗಂಭೀರ ಪ್ರಯತ್ನ ಮಾಡದಿರುವುದು ಇಲ್ಲಿ ಸ್ಮರಿಸಬಹುದು. ನೀರಿನ ಅಭಾವ, ಲೋಡ್‌ ಶೆಡ್ಡಿಂಗ್‌ ಸವಾಲುಗಳಿಗೆ ಒಂದು ಶಾಶ್ವತ ಪರಿಹಾರ ಕಾಣಬೇಕಿದೆ.

Advertisement

ಕ್ರಮ ಕೈಗೊಂಡಿದ್ದೇವೆ
ಮಾರ್ಚ್‌ ಎಪ್ರಿಲ್‌ ತಿಂಗಳುಗಳಲ್ಲಿ ನೀರಿನ ಸಮಸ್ಯೆ ಸಾಮಾನ್ಯವಾಗಿ ಎದುರಾಗುತ್ತವೆ. ಇದಕ್ಕೆ ತಕ್ಕಂತೆ ನೀರಿನ ಅಭಾವ ಕಂಡುಬರುವ ಭಾಗದಲ್ಲಿ ಕೊಳವೆ ಬಾವಿಗಳನ್ನು ಕೊರೆಯಲು ಕ್ರಮ ಕೈಗೊಂಡಿದ್ದೇವೆ.
– ಯು.ಡಿ. ಶೇಖರ್‌
ಪಿಡಿಒ, ಐವರ್ನಾಡು ಗ್ರಾ.ಪಂ.

ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next