ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಎಲ್‌ಎಲ್‌ಸಿ ಕಾಲುವೆಗಳಿಗೆ ಏಪ್ರಿಲ್ 10ರವರೆಗೆ ನೀರು ಹರಿಸಲು ತುಂಗಭದ್ರಾ ಮಂಡಳಿ ಅಧಿ ಕಾರಿಗಳು ಮೌಖೀಕವಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.31ರವರೆಗೆ ಬೇಸಿಗೆ ಬೆಳೆಗೆ ಕಾಲುವೆಗಳ ಮುಖಾಂತರ ನೀರು ಬಿಡುವುದಕ್ಕೆ ಈ ಹಿಂದೆ ಐಸಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಬದಲಾದ ಕಾಲಘಟ್ಟದಲ್ಲಿ ಬೆಳೆಗಳಿಗೆ ಅನುಕೂಲವಾಗುವಂತೆ ಏ.10ರವರೆಗೆ ನೀರು ಬಿಡುವಂತೆ ಅಧಿ ಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ರೈತರ ಸಮಸ್ಯೆ ಅರಿತ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿ, ಏಪ್ರಿಲ್ 10ರವರೆಗೆ ನೀರು ಬಿಡಲು ಮೌಖೀಕವಾಗಿ ಒಪ್ಪಿಗೆ ನೀಡಿದ್ದಾರೆ.
ಅಧಿಕೃ ಆದೇಶ ಪ್ರತಿಯನ್ನು ಸಹಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್ ಅವರಿಗೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು. ಬಳ್ಳಾರಿ- ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹಾಲಿ ಇರುವ ಬೆಳೆಗೆ ಇನ್ನೂ ನೀರು ಬೇಕಿದೆ. ಒಂದು ವೇಳೆ ನೀರು ನಿಲ್ಲಿಸಿದರೆ ಈ ಭಾಗದ ರೈತರಿಗೆ ತೀವ್ರ ತೊಂದರೆ ಆಗಲಿದೆ. ಬಿರುಬೇಸಿಗೆ ಬೆಳೆಗಳಿಗೆ ನೀರಿನ ಅಭಾವ ಎದುರಾಗಿ ಬೆಳೆಗಳೆಲ್ಲ ಸಂಪೂರ್ಣವಾಗಿ ಒಣಗಿ ಹೋಗಲಿವೆ. ಹೀಗಾಗಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಉಸ್ತುವಾರಿ ಸಚಿವ ಆನಂದ ಸಿಂಗ್ ಅಲ್ಲದೆ ತುಂಗಭದ್ರಾ ಮಂಡಳಿ ಮತ್ತು ಬೋರ್ಡ್ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿ, ಸಮಸ್ಯೆಯನ್ನು ತಿಳಿಸಲಾಗಿತ್ತು ಎಂದ ಅವರು, ಹಾಲಿ ಅಧಿಕಾರಿಗಳು ಏ. 10ರವರೆಗೆ ನೀರು ಬಿಡುವುದಕ್ಕೆ ಮೌಖೀಕ ಒಪ್ಪಿಗೆ ನೀಡಿದ್ದಾರೆ. ಲಿಖೀತ ಒಪ್ಪಿಗೆಯನ್ನು ಕೂಡ ಶೀಘ್ರದಲ್ಲೇ ನೀಡಲಿದ್ದಾರೆ ಎಂದರು.
ಹಾಲಿ ಜಲಾಶಯದಲ್ಲಿ 17 ಟಿಎಂಸಿ ನೀರಿದೆ. ಈ ಪೈಕಿ 2 ಟಿಎಂಸಿ ನೀರು ಡೆಡ್‌ಸ್ಟೋರೇಜ್, 1 ಟಿಎಂಸಿ ನೀರು ಆವಿಯಾಗಿ ವಾತಾವರಣ ಸೇರುತ್ತದೆ. ಅಲ್ಲಿಗೆ ಜಲಾಶಯದಲ್ಲಿ ಉಳಿಯುವುದು 13 ಟಿಎಂಸಿ ನೀರು ಮಾತ್ರ. ಇದರಲ್ಲಿ 5.657 ಟಿಎಂಸಿ ಆಂಧ್ರದ ಪಾಲಿದೆ. ಕರ್ನಾಟಕದ ಪಾಲಿಗೆ 7.934 ಟಿಎಂಸಿ ಮಾತ್ರ ಉಳಿಯುತ್ತದೆ ಎಂದು ಅವರು ವಿವರಿಸಿದರು. ಲಭ್ಯ ನೀರಿನಲ್ಲಿ ಬೇಸಿಗೆ ಬೆಳೆ ಸಂರಕ್ಷಿಸಲಾಗುವುದಿಲ್ಲ. ಆದರೆ, ಭದ್ರಾ ಜಲಾಶಯದಿಂದ 1.6 ಟಿಎಂಸಿ ನೀರು ಬರುತ್ತಿದೆ. ಆದರೆ, ಜೊತೆಗೆ ಕೈಗಾರಿಕೆಗಳಿಗೆ ನೀರು ಹರಿಸುವುದನ್ನು ಬಿಡಲು ನಿಲ್ಲಿಸಿದರೆ ಅನುಕೂಲವಾಗುತ್ತದೆ.
ಜಿಂದಾಲ್ ಸೇರಿ ನಾನಾ ಕಾರ್ಖಾನೆಗಳಿಗೆ ಪೂರೈಸುವ ನೀರಿನ ಪಾಲು ರೈತರಿಗೆ ನೀಡಿದರೆ ನೀರು ಸಿಗಲಿದೆ. ಜತೆಗೆ ನದಿ ಮೂಲಕ ಆಂಧ್ರಕ್ಕೆ ಕೊಡಲಿರುವ ನೀರಲ್ಲಿ ಅರ್ಧ ಟಿಎಂಸಿಯನ್ನು ಉಳಿಸಿಕೊಳ್ಳುವಂತೆ ತೆಲಂಗಾಣದ ಸರ್ಕಾರವನ್ನು ಮನವೊಲಿಸಿ ಈ ಭಾಗದ ರೈತರಿಗೆ ಅನುಕೂಲ ಆಗುವುದು ಎಂದು ಅವರು ಹೇಳಿದರು. ಸಂಘದ ಮುಖಂಡರಾದ ಗಂಗಾವತಿ ವೀರೇಶ, ಜಾಲಿಹಾಳ್ ಶ್ರೀಧರಗೌಡ, ಶ್ರೀಧರಗಡ್ಡೆ ವೀರನಗೌಡ, ಕಂಪ್ಲಿ ಸತ್ಯನಾರಾಯಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.