ಬೆಂಗಳೂರು: ರಾಜ್ಯದಲ್ಲಿ ಇಂಗ್ಲಿಷ್ ಶಾಲೆಗಳ ಹಾವಳಿ ತಪ್ಪಿಸಲು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ/ಯುಕೆಜಿ ಪ್ರಾರಂಭಿಸಬೇಕೆಂಬ ಪೋಷಕರ ಒತ್ತಡಕ್ಕೆ ಸರ್ಕಾರ ಕಡೆಗೂ ಅಸ್ತು ಎಂದಿದ್ದು, ರಾಜ್ಯದ 276 ತಾಲೂಕುಗಳ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ/ಯುಕೆಜಿ) ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
2018-19ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ಗ್ರಾಮೀಣ ಭಾಗದಲ್ಲಿ ಬಡ ಮಕ್ಕಳಿಗೂ ಅಗತ್ಯ ಪೂರ್ವ ಪ್ರಾಥಮಿಕ ಶಿಕ್ಷಣ ದೊರೆಯಬೇಕು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ಈಗಾಗಲೇ ರಾಜ್ಯದಲ್ಲಿ ಘೋಷಣೆ ಮಾಡಿರುವ ಗ್ರಾಮ ಪಂಚಾಯತಿಗೊಂದರಂತೆ ಆರಂಭಿಸಲು ನಿರ್ಧರಿಸಿರುವ 276 ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿಯೇ ಪೂರ್ವ ಪ್ರಾಥಮಿಕ (ಎಲ್‌ಕೆಜಿ/ಯುಕೆಜಿ) ತರಗತಿಗಳನ್ನು ಆರಂಭಿಸಲು ಆದೇಶಿಸಿದೆ.
ಈಗಾಗಲೇ ರಾಜ್ಯದಲ್ಲಿ ಕೆಲವು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೋಷಕರ ಆಗ್ರಹದ ಮೇರೆಗೆ ಎಸ್‌ಡಿಎಂಸಿಯವರು “ಮಕ್ಕಳ ಮನೆ’ ಹೆಸರಿನಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸಿದ್ದಾರೆ. ಆ ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿರುವುದನ್ನು ಮನಗಂಡು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್‌ನಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ/ಯುಕೆಜಿ ತರಗತಿಗಳನ್ನು ಆರಂಭಿಸುವ ಕುರಿತು ಘೋಷಣೆ ಮಾಡಿದ್ದರು.
ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ 4,100 ಅಂಗನವಾಡಿ ಕೇಂದ್ರಗಳನ್ನು ಪ್ರಾಥಮಿಕ ಶಾಲಾ ಆವರಣಕ್ಕೆ ಸ್ಥಳಾಂತರಿಸಿ ಬಾಲ ಸ್ನೇಹಿ ಕೇಂದ್ರಗಳನ್ನಾಗಿ ಬಲವರ್ಧನೆಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ಹಾವಳಿ ತಡೆಗಟ್ಟಿ ಸರ್ಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಲು ಆಡಳಿತಾತ್ಮಕ ದೃಷ್ಠಿಯಿಂದ ಗ್ರಾಮ ಪಂಚಾಯತಿಗೊಂದರಂತೆ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು 2019-20ನೇ ಸಾಲಿನಿಂದ ಆರಂಭಿಸಲು ಅನುಮೋದನೆ ನೀಡಿದೆ.
ಅದೇ ಶಾಲೆಗಳ ವ್ಯಾಪ್ತಿಯಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಇತ್ತೀಚೆಗೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅಲ್ಲದೇ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪಠ್ಯಕ್ರಮ ರಚಿಸುವ ಕುರಿತಂತೆಯೂ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಯುನಿಸೆಫ್ನ ರಾಜ್ಯ ಯೋಜನಾ ನಿರ್ದೇಶಕರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳ ಸಮಿತಿ ಸಮಾಲೋಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
ಷರತ್ತುಗಳು ಅನ್ವಯ: ಈ ಶೈಕ್ಷಣಿಕ ವರ್ಷದಿಂದಲೇ ಎಲ್‌ಕೆಜಿ/ಯುಕೆಜಿ ತರಗತಿಗಳನ್ನು ಪ್ರಾಯೋಗಿಕವಾಗಿ ಆರಂಭಿಸಲು ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದೆ.
– ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲು ಪ್ರತಿ ವಿಭಾಗಕ್ಕೆ ಕನಿಷ್ಠ 20 ರಿಂದ 30 ಮಕ್ಕಳು ದಾಖಲಾಗುವಂತೆ ನೋಡಿಕೊಳ್ಳಬೇಕು.
– ಯುನಿಸೆಫ್, ಅಜೀಂ ಪ್ರೇಮ್‌ಜಿ ವಿವಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮಿತಿ ಅಂತಿಮಗೊಳಿಸಿದ ಪಠ್ಯಕ್ರಮ, ಬೋಧನಾ ಉಪಕರಣಗಳನ್ನು ತಯಾರಿಸಿ ಶಿಕ್ಷಕರಿಗೆ ತರಬೇತಿ ನೀಡಬೇಕು.
– ಪೂರ್ವ ಪ್ರಾಥಮಿಕ ತರಗತಿಗಳಿಗೆ ಕನಿಷ್ಠ 3.5 ವರ್ಷ ಮೇಲ್ಪಟ್ಟ ವಯಸ್ಸಿನ ಮಕ್ಕಳನ್ನು ಮಾತ್ರ ದಾಖಲಿಸಿಕೊಳ್ಳಬೇಕು.
– ಪೂರ್ವ ಪ್ರಾಥಮಿಕ ತರಗತಿಗಳನ್ನು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ಒಳಗೆ ಮುಕ್ತಾಯ ಮಾಡಬೇಕು.
– ಪ್ರತಿ ಪೂರ್ವ ಪ್ರಾಥಮಿಕ ತರಗತಿಗಳಿಗೆ ಒಬ್ಬರು ಶಿಕ್ಷಕ, ಒಬ್ಬರು ಶಿಕ್ಷಕಿ, ಒಬ್ಬರು ಆಯಾರನ್ನು ಸಮಗ್ರ ಶಿಕ್ಷಣ ಕರ್ನಾಟಕ ಮಾನದಂಡದ ಅಡಿಯಲ್ಲಿ ಸಂಬಂಧಪಟ್ಟ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಯವರು ತಾತ್ಕಾಲಿಕವಾಗಿ ಹತ್ತು ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಬೇಕು.