ಹೊಸದಿಲ್ಲಿ/ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕಜನ ಶಕ್ತಿ ಪಕ್ಷ (ಎಲ್‌ಜೆಪಿ) ಏಕಾಂಗಿಯಾಗಿ ಸ್ಪರ್ಧಿಸಲಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಯಕತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಮತ್ತು ಅವರ ವಿರುದ್ಧ ಪಕ್ಷ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ ಮತ್ತು ಬಿಜೆಪಿ ಜತೆಗೆ ಮಾತ್ರ ಮೈತ್ರಿ ಮಾಡಿಕೊಳ್ಳಲಿದೆ ಎಂದು ಹೇಳಿದೆ.
ಸಚಿವ ಪಾಸ್ವಾನ್ ಅನುಪಸ್ಥಿತಿಯಲ್ಲಿ ಹೊಸದಿಲ್ಲಿಯಲ್ಲಿ ರವಿವಾರ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಂಸದ ಚಿರಾಗ್ ಪಾಸ್ವಾನ್ ನೇತೃತ್ವದಲ್ಲಿ ಸಭೆ ನಡೆದಿದೆ. ಹೀಗಾಗಿ, ಬಿಹಾರದ ಎನ್‌ಡಿಎಯಿಂದ ಎಲ್‌ಜೆಪಿ ನಿರ್ಗಮಿಸುವುದು ಬಹುತೇಕ ಖಚಿತವಾದಂತಾಗಿದೆ. 243 ಕ್ಷೇತ್ರಗಳ ಪೈಕಿ 143 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ಸಂಸದ ಚಿರಾಗ್ ಪಾಸ್ವಾನ್ ಈಗಾಗಲೇ ಬಿಜೆಪಿ ವರಿಷ್ಠರಿಗೆ ಸೂಚಿಸಿದ್ದಾರೆ. ನಮಗೆ ಬಿಜೆಪಿ ಜತೆ ಯಾವುದೇ ವೈಮನಸ್ಸು ಇಲ್ಲ. ಆದರೆ, ಜೆಡಿಯು ಜತೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ಎಲ್ಲೆಲ್ಲಿ ಜೆಡಿಯು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೋ, ಅಲ್ಲೆಲ್ಲ ಎಲ್‌ಜೆಪಿ ಸ್ಪರ್ಧಿಸಲಿದೆ. ರಾಜ್ಯದಲ್ಲಿ ನಾವು ಬಿಜೆಪಿ ಜತೆಗೂಡಿ ಸರಕಾರ ರಚಿಸುವುದು ಖಚಿತ ಎಂದೂ ಎಲ್‌ಜೆಪಿ ತಿಳಿಸಿದೆ.
ಇದನ್ನೂ ಓದಿ:ಉಗ್ರರಿಗೆ ಸೇನೆಯ ಶ್ವಾನಭಯ: “ರಫ್ಲಿಂಗ್ ರೋಶ್’ಗೆ ಬೆಚ್ಚಿ ಬೀಳುವ ಉಗ್ರರು
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಸಮಾನ ಸ್ಥಾನಗಳಲ್ಲಿ ಸ್ಪರ್ಧಿಸುವ ಬಗ್ಗೆ ಒಮ್ಮತಕ್ಕೆ ಬಂದಿವೆ. 243 ಕ್ಷೇತ್ರಗಳ ಪೈಕಿ ಬಿಜೆಪಿ 121, ಜೆಡಿಯು 122 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಮ್ಮತಿಸಿವೆ ಎಂದು ಮೂಲಗಳು ತಿಳಿಸಿವೆ. ಎನ್‌ಡಿಎ ತೆಕ್ಕೆಗೆ ಬಂದಿರುವ ಮಾಜಿ ಮುಖ್ಯಮಂತ್ರಿ ಜಿತನ್ ರಾಂ ಮಾಂಝಿ ಅವರ ಹಿಂದುಸ್ತಾನಿ ಅವಾಂ ಮೋರ್ಚಾ (ಎಚ್‌ಎಎಂ)ಗೆ ಜೆಡಿಯು ಕೋಟಾದಿಂದ ಐದು ಕ್ಷೇತ್ರಗಳನ್ನು ನೀಡುವ ಬಗ್ಗೆ ಸಿಎಂ ನಿತೀಶ್ ಕುಮಾರ್ ಒಪ್ಪಿಕೊಂಡಿದ್ದಾರೆ. ಬಿಹಾರದಲ್ಲಿ ಮೊದಲ ಹಂತದ ಮತದಾನ ಅ.28ಕ್ಕೆ ನಡೆಯಲಿದೆ.
ಆಯೋಗದಿಂದ ನಿಯಮ: ಕೋವಿಡ್ ಹಿನ್ನೆಲೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟವರು, ದಿವ್ಯಾಂಗರಿಗಾಗಿ ಅಂಚೆ ಮತದಾನ ವ್ಯವಸ್ಥೆ ಬಳಕೆ ಮಾಡುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೊಸ ನಿಯಮಗಳನ್ನು ಭಾನುವಾರ ಪ್ರಕಟಿಸಿದೆ. ನಿಗದಿತ ನಮೂನೆಯ ಅರ್ಜಿ ಭರ್ತಿ ಮಾಡಬೇಕು. ಅದನ್ನು ಬೂತ್ ಮಟ್ಟದ ಅಧಿಕಾರಿ ಸಂಗ್ರಹಿಸುತ್ತಾರೆ ಎಂದು ಹೇಳಲಾಗಿದೆ.