Advertisement

ಲಿಸ್‌ ಮುಂದಿದೆ ಸವಾಲಿನ ಹಾದಿ; ಹಣದುಬ್ಬರ ನಿಯಂತ್ರಣ, ಆರ್ಥಿಕ ಸುಧಾರಣೆಯೇ ಸವಾಲು

10:17 PM Sep 05, 2022 | Team Udayavani |

ಲಂಡನ್‌: ಕೊರೊನಾ ಹಾಗೂ ರಷ್ಯಾ-ಉಕ್ರೇನ್‌ ಯುದ್ಧದ ಹಿನ್ನೆಲೆಯಲ್ಲಿ ಪ್ರಸ್ತುತ ಬ್ರಿಟನ್‌ ಹಣದುಬ್ಬರ ಎದುರಿಸುತ್ತಿದ್ದು, ನೂತನ ಪ್ರಧಾನಿ ಲಿಸ್‌ ಟ್ರೂಸ್‌ ಅವರ ಮುಂದಿನ ಹಾದಿ ಸವಾಲಿನಿಂದ ಕೂಡಿರಲಿದೆ.

Advertisement

ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದು, ಇಂಧನ ಪೂರೈಕೆ ಸಮಸ್ಯೆ ನೀಗಿಸುವುದು, ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು, ತೆರಿಗೆ ಕಡಿತ ಸೇರಿದಂತೆ ಸಾಲು ಸಾಲು ಸವಾಲುಗಳು ಅವರ ಎದುರಿಗಿವೆ. ಟ್ರಾಸ್‌ ಅವರಿಗೆ 81, 326 ಮತಗಳು ಬಂದರೆ, ಸುನಕ್‌ ಅವರಿಗೆ 60, 399 ಮತಗಳು ಬಂದಿವೆ. ನೂತನ ಪ್ರಧಾನಿ ಆಯ್ಕೆ ಹಿನ್ನೆಲೆಯಲ್ಲಿ ಹಾಲಿ ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಣಿ 2ನೇ ಎಲಿಜಬೆತ್‌ ಅವರನ್ನು ಮಂಗಳವಾರ ಭೇಟಿಯಾಗಿ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ.

ಟ್ರೂಸ್‌ ಅವರು ಯುಕೆ ಯ ಮೂರನೇ ಮಹಿಳಾ ಪ್ರಧಾನಿಯಾಗಿದ್ದಾರೆ. ಇವರಿಗೂ ಮೊದಲು ಮಾರ್ಗರೇಟ್‌ ಥ್ಯಾಚರ್‌ ಮತ್ತು ಥೆರೇಸಾ ಮೇ ಪ್ರಧಾನಿಗಳಾಗಿದ್ದರು. ಅಲ್ಲದೆ ಟ್ರೂಸ್‌(50) ಅತ್ಯಂತ ಕಿರಿಯ ಮಹಿಳಾ ಪ್ರಧಾನಿ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.

ಮುಂಬರುವ ಚಳಿಗಾಲದಲ್ಲಿ ಇಂಧನ ಪೂರೈಕೆ ಸಮಸ್ಯೆ ಜತೆಗೆ ಹಣದುಬ್ಬರ ಸಮಸ್ಯೆಯು ತೀವ್ರವಾಗಿ ದೇಶವನ್ನು ಕಾಡಲಿದೆ ಎಂದು ಯುಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಸವಾಲುಗಳನ್ನು ಟ್ರೂಸ್‌ ಯಾವ ರೀತಿ ನಿಭಾಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರತಿ ಮನೆಗೂ ವಿದ್ಯುತ್‌ ಪೂರೈಕೆ ಹಾಗೂ ನಾಗರಿಕರ ಕೈಗೆಟುಕುವ ದರದಲ್ಲಿ ವಿದ್ಯುತ್‌ ಸರಬರಾಜು ಕೂಡ ಟ್ರೂಸ್‌ ಎದುರಿರುವ ಸವಾಲಾಗಿದೆ.

Advertisement

ಇನ್ನೊಂದೆಡೆ, ಬ್ರಿಟನ್‌ ಕರೆನ್ಸಿಯಾಗಿರುವ ಪೌಂಡ್‌ ದರವು ಡಾಲರ್‌ ಎದುರು ಕುಸಿಯುತ್ತಿದೆ. ಅಲ್ಲದೇ ಜಾಗತಿಕ ಮಾರುಕಟ್ಟೆಯಲ್ಲಿ ಪೌಂಡ್‌ ಅನ್ನು ಪ್ರಮುಖ ಕರೆನ್ಸಿಯನ್ನಾಗಿ ಮಾಡುವುದು ಬ್ರಿಟನ್‌ನ ನೂತನ ಸರ್ಕಾರಕ್ಕೆ ಸವಲಾಗಲಿದೆ.

ಭಾರತದ ಕುರಿತು ಲಿಸ್‌ ಟ್ರೂಸ್‌:
ಈ ಹಿಂದೆ ಭಾರತದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದ ಮೇರಿ ಎಲಿಜಿಬತ್‌ ಟ್ರೂಸ್‌(ಲಿಸ್‌ ಟ್ಯೂಸ್‌), “ಈ ವರ್ಷದ ದೀಪಾವಳಿ ಒಳಗೆ ಕೃಷಿಯಿಂದ ಹಿಡಿದು ತಂತ್ರಜ್ಞಾನದವರೆಗೆ ಭಾರತ ಮತ್ತು ಬ್ರಿಟನ್‌ ನಡುವೆ ವ್ಯಾಪಾರ ಒಪ್ಪಂದ ಏರ್ಪಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ,” ಎಂದು ಹೇಳಿದ್ದರು.

ಅದೇ ರೀತಿ, “ಪ್ರಪಂಚದಲ್ಲಿರುವ ಅನೇಕ ಅತ್ಯುತ್ತಮ ಮತ್ತು ಪ್ರತಿಭಾನ್ವಿತರು ಭಾರತದಲ್ಲಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಭಾರತದವರಿಗೆ ಆಕರ್ಷಿಸುವಂತೆ ವೀಸಾ ಪದ್ಧತಿಯನ್ನು ಮುಂದುವರಿಸಲು ನಾನು ಬಯಸುತ್ತೇನೆ,” ಎಂದು ಪ್ರಚಾರದ ಸಮಯದಲ್ಲಿ ಹೇಳಿದ್ದರು.

2022ರ ಮಾರ್ಚ್‌ನಲ್ಲಿ ಲಿಸ್‌ ಟ್ರಾಸ್‌ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ್ದ ಅವರು, “ಭಾರತವು ರಷ್ಯಾದ ಶಸ್ತ್ರಾಸ್ತ್ರಗಳ ಮೇಲೆ ಶೇ.60ರಷ್ಟು ಅವಲಂಬಿತವಾಗಿದೆ. ಆದರೆ ಈಗ ನಿಸ್ಸಂಶಯವಾಗಿ ಅವರು ಚೀನಾದೊಂದಿಗೆ ರಷ್ಯಾದ ವ್ಯೂಹಾತ್ಮಹ ಸಂಬಂಧ ಹಾಗೂ ಕೆಲವು ಶಸ್ತ್ರಾಸ್ತ್ರಗಳ ಪರಿಣಾಮಕಾರಿತ್ವ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಹಾಗಾಗಿ ಬ್ರಿಟನ್‌ ಮತ್ತು ಭಾರತದ ನಿಕಟ ಪಾಲುದಾರಿಕೆಗೆ ಈಗ ಹೆಚ್ಚಿನ ಅವಕಾಶಗಳಿವೆ,” ಎಂದು ಪ್ರತಿಪಾದಿಸಿದ್ದರು.

ಪ್ರತಿಯೊಬ್ಬರಿಗೂ ಧನ್ಯವಾದಗಳು:
ಬ್ರಿಟನ್‌ ಪ್ರಧಾನಿ ಅಭ್ಯರ್ಥಿಯ ರೇಸ್‌ನಲ್ಲಿ ಸೋತಿರುವ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ, ರಿಷಿ ಸುನಕ್‌, “ನನ್ನನ್ನು ಬೆಂಬಲಿಸಿ ಮತ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಕನ್ಸರ್ವೆಟಿವ್‌ಗಳೆಲ್ಲರೂ ಒಂದೇ ಕುಟುಂಬದವರು. ಈಗ ನಾವೆಲ್ಲರೂ ಒಂದಾಗಿ ನೂತನ ಪ್ರಧಾನಿ ಲಿಸ್‌ ಟ್ರೂಸ್‌ ಅವರ ಬೆಂಬಲಕ್ಕೆ ನಿಲ್ಲೋಣ. ಕಷ್ಟದ ಸಮಯದಲ್ಲಿ ಅವರು ದೇಶವನ್ನು ನಡೆಸುತ್ತಿದ್ದು, ಅವರ ಜತೆಗಿರೋಣ,’ ಎಂದು ಟ್ವೀಟ್‌ ಮಾಡಿದ್ದಾರೆ.

ಲಿಸ್‌ ಟ್ರಾಸ್‌- 81, 326
ರಿಷಿ ಸುನಕ್‌- 60, 399
ತಿರಸ್ಕೃತಗೊಂಡದ್ದು 654

Advertisement

Udayavani is now on Telegram. Click here to join our channel and stay updated with the latest news.

Next