Advertisement

Scleroderma: ಸ್ಕ್ಲೆರೋಡರ್ಮಾ ಜತೆಗೆ ಜೀವಿಸುವುದು

11:42 AM Jul 21, 2024 | Team Udayavani |

ಸ್ಕ್ಲೆರೊಡರ್ಮಾ ಎಂದರೇನು?

Advertisement

ಸ್ಕ್ಲೆರೊಡರ್ಮಾ ಎಂದರೆ “ಗಡಸು ಚರ್ಮ’ ಎಂದರ್ಥ. ಚರ್ಮದ ಅಡಿಭಾಗದಲ್ಲಿ ನಾರುನಾರಾದ ಅಂಗಾಂಶಗಳು ಅಸಹಜವಾಗಿ ಬೆಳೆಯುವುದರಿಂದಾಗಿ ಚರ್ಮ ಗಡುಸಾಗುವುದು ಅಥವಾ ಗಟ್ಟಿಯಾಗುವ ಮೂಲಕ ಇದು ಉಂಟಾಗುತ್ತದೆ.

ಲಕ್ಷಣಗಳು

  1. ಚರ್ಮ ಬಿಗಿದುಕೊಳ್ಳುವುದು ಇದು ಸಾಮಾನ್ಯವಾಗಿ ಸ್ಕ್ಲೆರೊಡರ್ಮಾದ ಆರಂಭಿಕ ಲಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಬೆರಳುಗಳು, ಕೈಗಳು, ಕಾಲುಗಳು ಮತ್ತು ಮುಖದ ಚರ್ಮ ಗಡಸಾಗಲಾರಂಭಿಸುತ್ತದೆ. ಇದರಿಂದಾಗಿ ಮುಷ್ಠಿ ಹಿಡಿದುಕೊಳ್ಳಲು ಕಷ್ಟ ಅಥವಾ ಬಾಯಿ ತೆರೆಯಲು ಕಷ್ಟದಂತಹ ಸಮಸ್ಯೆಗಳು ತಲೆದೋರುತ್ತವೆ.
  2. ಬೆರಳುಗಳು ನೀಲಿಗಟ್ಟುವುದು ಕೈಬೆರಳುಗಳು ಅಥವಾ ಕಾಲ್ಬೆರಳುಗಳು ಶೀತ, ನೀರಿಗೆ ಒಡ್ಡಿಕೊಂಡಾಗ ಅಥವಾ ಭಾವನಾತ್ಮಕ ಪ್ರಚೋದನೆಯುಂಟಾದಾಗ ಬಿಳಿ ಅಥವಾ ನೀಲಿ ಬಣ್ಣಕ್ಕೆ ತಿರುಗುತ್ತವೆ. ಕೈಬೆರಳು ಅಥವಾ ಕಾಲ್ಬೆರಳುಗಳಲ್ಲಿ ಇರುವ ರಕ್ತನಾಳಗಳಲ್ಲಿ ರಕ್ತ ಪರಿಚಲನೆಗೆ ಅಡಚಣೆ ಉಂಟಾಗಿ ರಕ್ತ ಸರಬರಾಜು ಕಡಿಮೆಯಾಗುವುದು ಇದಕ್ಕೆ ಕಾರಣ. ಈ ಹಂತದಲ್ಲಿಯೇ ಇದಕ್ಕೆ ಚಿಕಿತ್ಸೆ ನೀಡದೆ ಹೋದರೆ ಗ್ಯಾಂಗ್ರೀನ್‌ ಎಂದು ಕರೆಯಲಾಗುವ ಬೆರಳುಗಳು ಶಾಶ್ವತವಾಗಿ ಕಪ್ಪುಗಟ್ಟುವ ತೊಂದರೆ ಉಂಟಾಗುತ್ತದೆ.
  3. ಕ್ಯಾಲ್ಸಿನೋಸಿಸ್‌ ಚರ್ಮದ ಅಡಿಭಾಗದಲ್ಲಿ ಅಥವಾ ಸ್ನಾಯುಗಳಲ್ಲಿ ಕ್ಯಾಲ್ಸಿಯಂ ಸಂಗ್ರಹಗೊಳ್ಳುತ್ತದೆ. ಈ ಶೇಖರಣೆಗಳಿಂದಾಗಿ ಅವುಗಳ ಮೇಲ್ಭಾಗದ ಚರ್ಮದಲ್ಲಿ ಪದೇಪದೆ ಹುಣ್ಣುಗಳು ಉಂಟಾಗಬಹುದು.
  4. ಸಂಧಿ ನೋವು ಮತ್ತು ಸ್ನಾಯು ನೋವು ಸಿಸ್ಟೆಮಿಕ್‌ ಸ್ಕ್ಲೆರೊಡರ್ಮಾದ ಆರಂಭಿಕ ಪ್ರಗತಿಯ ಹಂತದಲ್ಲಿ ಸಂಧಿಗಳು ಮತ್ತು ಸ್ನಾಯುಗಳಲ್ಲಿ ನೋವು, ಬಿಗಿತ ಸಾಮಾನ್ಯ ಲಕ್ಷಣಗಳಾಗಿರುತ್ತವೆ. ಕಾಯಿಲೆ ಉಲ್ಬಣಿಸುತ್ತ ಹೋದಂತೆ ಸ್ನಾಯು ನಷ್ಟ ಮತ್ತು ದಣಿವು ಸಾಮಾನ್ಯವಾಗಿರುತ್ತವೆ.
  5. ದಂತ ಕಾಯಿಲೆಗಳು ಬಾಯಿಯ ಸುತ್ತ ಚರ್ಮ ಗಡಸಾಗುವುದರಿಂದಾಗಿ ದಂತ ನೈರ್ಮಲ್ಯ ಕೆಡುತ್ತದೆ, ಬಾಯಿ ಒಣಗುತ್ತದೆ ಮತ್ತು ಹಲ್ಲುಗಳು ದುರ್ಬಲವಾಗಬಹುದು.
  6. ರಿಫ್ಲಕ್ಸ್‌ ಕಾಯಿಲೆ ರೋಗಿಗಳಿಗೆ ಎದೆಯುರಿ, ಎದೆ ಹಿಡಿದುಕೊಂಡಂತಾಗುವುದು ಮತ್ತು ಆಹಾರ ನುಂಗಲು ಕಷ್ಟವಾಗಬಹುದು.
  7. ಹೊಟ್ಟೆಯ ಸಮಸ್ಯೆಗಳು ರೋಗಿಗಳು ಹೊಟ್ಟೆ ತುಂಬಿದ ಅನುಭವ, ಹೊಟ್ಟೆನೋವು ಮತ್ತು ಬೇಧಿ, ತೂಕ ನಷ್ಟ ಹೊಂದಬಹುದು.
  8. ಶ್ವಾಸಕೋಶ ಕಾಯಿಲೆಗಳು ರೋಗಿಗಳು ಆರಂಭದಲ್ಲಿ ಆಗಾಗ ಕಫ‌ ಮತ್ತು ಉಸಿರಾಡಲು ಕಷ್ಟ ಅನುಭವಿಸಬಹುದು. ಕೆಲವರಲ್ಲಿ ಯಾವುದೇ ಲಕ್ಷಣಗಳು ಇಲ್ಲದೆ ಶ್ವಾಸಕೋಶದ ತೊಂದರೆಗಳು ಉಂಟಾಗಬಹುದು. ಆದ್ದರಿಂದ ಯಾವುದೇ ಶ್ವಾಸಕೋಶ ಕಾಯಿಲೆ ಇದೆಯೇ ಎಂದು ಸಿಟಿ ಸ್ಕ್ಯಾನ್‌ ಮೂಲಕ ಬೇಗನೆ ಪತ್ತೆಹಚ್ಚುವುದು ಅಗತ್ಯ.
  9. ಮೂತ್ರಪಿಂಡ ಕಾಯಿಲೆಗಳು ಅತ್ಯಂತ ಅಪರೂಪಕ್ಕೆ ಕೆಲವು ರೋಗಿಗಳಲ್ಲಿ ರಕ್ತದೊತ್ತಡವು ಹಠಾತ್‌ ಹೆಚ್ಚಳವಾಗಬಹುದಾಗಿದ್ದು, ಇದರಿಂದ ಮೂತ್ರಪಿಂಡ ವೈಫ‌ಲ್ಯ ಉಂಟಾಗಬಹುದು. ಸಾಮಾನ್ಯವಾಗಿ ಇದು ಕಾಯಿಲೆ ತಲೆದೋರಿದ ಆರಂಭಿಕ ವರ್ಷಗಳಲ್ಲಿ ಉಂಟಾಗುತ್ತದೆ.

ಇದು ಏಕೆ ಉಂಟಾಗುತ್ತದೆ?

ಸ್ಕ್ಲೆರೊಡರ್ಮಾ ಉಂಟಾಗುವುದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ರೋಗನಿರೋಧಕ ಶಕ್ತಿಯು ದೇಹದ ವಿರುದ್ಧ ಅಸಹಜ ಪ್ರತಿಸ್ಪಂದನೆ ತೋರುವುದರಿಂದ ಸ್ಕ್ಲೆರೊಡರ್ಮಾ ಉಂಟಾಗುತ್ತದೆ; ಇದರಿಂದಾಗಿ ಚರ್ಮವು ಗಡಸಾಗಿ ಶ್ವಾಸಕೋಶ, ಹೃದಯ ಮತ್ತು ಮೂತ್ರಪಿಂಡಗಳಂತಹ ಅಂಗವ್ಯವಸ್ಥೆಗಳು ತೊಂದರೆಗೀಡಾಗುತ್ತವೆ.

Advertisement

ಇದು ಸೋಂಕುರೋಗವೇ?

ಅಲ್ಲ.

ರೋಗಪತ್ತೆಯನ್ನು ದೃಢಪಡಿಸಿಕೊಳ್ಳುವುದು ಹೇಗೆ?

ರುಮಟಾಲಜಿಸ್ಟ್‌ ಜಾಗರೂಕ ಪರೀಕ್ಷೆ, ತಪಾಸಣೆಗಳ ಬಳಿಕ ರೋಗಪತ್ತೆಯನ್ನು ದೃಢೀಕರಿಸುತ್ತಾರೆ. ಕೆಲವು ರಕ್ತಪರೀಕ್ಷೆಗಳು, ಎಕ್ಸ್‌ರೇ ಮತ್ತು ಸಿಟಿ ಸ್ಕ್ಯಾನ್‌ಗಳು ಯಾವೆಲ್ಲ ಕಾಯಿಲೆಯಿಂದ ಬಾಧಿತವಾಗಿವೆ ಎಂಬುದನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ.

ಈ ಕಾಯಿಲೆಗೆ ಚಿಕಿತ್ಸೆ ಹೇಗೆ?

ಹಿಂದೆ ಈ ಕಾಯಿಲೆಗೆ ಯಾವುದೇ ಚಿಕಿತ್ಸೆ ಇರಲಿಲ್ಲ. ಆದರೆ ಈಗ ಸಾಕಷ್ಟು ಪ್ರಗತಿ ಆಗಿದ್ದು, ಚಿಕಿತ್ಸೆ ಸಾಧ್ಯವಿದೆ. ಆರಂಭಿಕ ಹಂತಗಳಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಔಷಧ ನೀಡಿದರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದಾಗಿದೆ. ಆದರೆ ಔಷಧಗಳು ದೀರ್ಘ‌ಕಾಲ ತೆಗೆದುಕೊಳ್ಳಬೇಕಾಗಿರುತ್ತದೆ. ಸಾಮಾನ್ಯವಾಗಿ ಉಪಯೋಗಿಸುವ ಔಷಧಗಳೆಂದರೆ ನಿಫೆಡಿಪೈನ್‌, ಟಾಡಾಲಫಿಲ್‌, ಮೈಕೊಫಿನೊಲೇಟ್‌, ಸೈಕ್ಲೊಫಾಸ್ಫಮೈಡ್‌, ಮೆಥೊಟ್ರಕ್ಸೇಟ್‌.

ರೋಗಿಯು ಯಾವೆಲ್ಲ ಮುಂಜಾಗರೂಕತೆಗಳನ್ನು ತೆಗೆದುಕೊಳ್ಳಬೇಕು?

ಬೆರಳುಗಳು ನೀಲಿಗಟ್ಟುವ ತೊಂದರೆ ಹೊಂದಿರುವವರು: ತಂಪಾದ ನೀರಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ಸ್ನಾನ, ಕೈತೊಳೆಯುವುದು ಇತ್ಯಾದಿಗಳಿಗೆ ಬಿಸಿ ನೀರನ್ನೇ ಉಪಯೋಗಿಸಬೇಕು. ಮಳೆಗಾಲ ಮತ್ತು ಚಳಿಗಾಲದಲ್ಲಿ ಹತ್ತಿಬಟ್ಟೆಯ ಕೈಗವಸುಗಳನ್ನು ಧರಿಸಬೇಕು. ಎಸಿ ಕೊಠಡಿಗಳಲ್ಲಿ ಇರಬಾರದು. ಒತ್ತಡ/ಧೂಮಪಾನ/ಮಿಕ್ಸರ್‌ನಂತಹ ಅದುರುವ ಉಪಕರಣ, ಯಂತ್ರಗಳಿಂದ ದೂರವಿರಬೇಕು.

ಒಣಚರ್ಮದಂತಹ ಚರ್ಮದ ಸಮಸ್ಯೆಗಳು

ಆಗಾಗ, ವಿಶೇಷವಾಗಿ ಸ್ನಾನ ಮಾಡಿದ ಅನಂತರ ಮಾಯಿಶ್ಚರೈಸಿಂಗ್‌ ಕ್ರೀಮ್‌ ಮತ್ತು ಲೋಶನ್‌ ಗಳನ್ನು ಉಪಯೋಗಿಸಬೇಕು. ಹೊರಗೆ ಹೋಗುವ ಮುನ್ನ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳಬೇಕು. ತುರಿಕೆಯನ್ನು ಬಾಯಿಯ ಮೂಲಕ ಸೇವಿಸುವ ಸಿಟ್ರಿಝಿನ್‌ನಂತಹ ಆ್ಯಂಟಿಹಿಸ್ಟಮಿನ್‌ ಔಷಧಗಳಿಂದ ನಿಯಂತ್ರಿಸಬಹುದು.

ಸ್ನಾಯು ಮತ್ತು ಸಂಧಿಗಳ ಬಿಗಿತ ಚಲನಶೀಲತೆಯನ್ನು ಮತ್ತು ಸ್ನಾಯ ಸಾಮರ್ಥ್ಯವನ್ನು ಕಾಯ್ದುಕೊಳ್ಳಲು ನಿಯಮಿತವಾಗಿ ವ್ಯಾಯಾಮ ಮಾಡಿ. ಬಿಗಿದುಕೊಂಡಿರುವ ಸಂಧಿಗಳನ್ನು ಸರಿಪಡಿಸಲು μಸಿಯೋಥೆರಪಿಸ್ಟ್‌ ನೆರವು ಪಡೆಯಬೇಕು.

ದಂತವೈದ್ಯಕೀಯ ಸಮಸ್ಯೆಗಳು

  • ಬಾಯಿಯ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು – ನಿಯಮಿತವಾಗಿ ಹಲ್ಲುಜ್ಜಬೇಕು ಮತ್ತು ಫ್ಲಾಸ್‌ ಮಾಡಬೇಕು.
  • ದಂತವೈದ್ಯರನ್ನು ನಿಯಮಿತವಾಗಿ ಸಂದರ್ಶಿಸಿ.
  • ಆಗಾಗ ನೀರು ಕುಡಿಯುವುದು, ಸಕ್ಕರೆರಹಿತ ಗಮ್‌ ಜಗಿಯುವುದು ಅಥವಾ ಜೊಲ್ಲಿನ ಪರ್ಯಾಯಗಳ ಬಳಕೆಯ ಮೂಲಕ ಬಾಯಿಯ ಆದ್ರìತೆಯನ್ನು ಕಾಪಾಡಿಕೊಳ್ಳಬೇಕು. ಮುಖ ಮತ್ತು ಬಾಯಿಯ ನಮನೀಯತೆಯನ್ನು ಕಾಪಾಡಿಕೊಳ್ಳಲು ಮುಖ ವ್ಯಾಯಾಮಗಳನ್ನು ಮಾಡಬೇಕು.

ಜೀರ್ಣಾಂಗ ವ್ಯೂಹದ ಸಮಸ್ಯೆಗಳು

ರಿಫ್ಲಕ್ಸ್‌ ಮತ್ತು ಎದೆಯುರಿ ಸಣ್ಣ ಪ್ರಮಾಣದಲ್ಲಿ ಆಗಾಗ ಆಹಾರ ಸೇವಿಸಬೇಕು.

ಆಹಾರ ಸೇವಿಸಿದ ಬಳಿಕ ಕನಿಷ್ಠ ಒಂದು ತಾಸು ನಿಂತಿರಬೇಕು ಅಥವಾ ಕುಳಿತುಕೊಂಡಿರಬೇಕು.

ರಾತ್ರಿ ತಡವಾಗಿ ಆಹಾರ ಸೇವಿಸಬಾರದು.

ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು.

ಮಲಗುವಾಗ ಎರಡು ದಿಂಬುಗಳನ್ನು ತಲೆಯ ಕೆಳಗೆ ಇರಿಸಿಕೊಳ್ಳಬೇಕು ಅಥವಾ ಮಂಚದ ತಲೆಯ ಭಾಗವನ್ನು ಎತ್ತರಿಸಿಕೊಳ್ಳಬೇಕು.

ಜೀವಿತಾವಧಿ ನಿರೀಕ್ಷೆ

ಸಿಸ್ಟಮಿಕ್‌ ಸ್ಕ್ಲೆರೋಸಿಸ್‌ ರೋಗಿಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ, ಮೂತ್ರಪಿಂಡ ಕಾಯಿಲೆಗಳಿಗೆ, ಶ್ವಾಸಕೋಶಗಳ ಸುತ್ತಮುತ್ತಲಿನ ರಕ್ತನಾಳಗಳಲ್ಲಿ ಅಧಿಕ ರಕ್ತದೊತ್ತಡ ಉಂಟಾಗುವ ಪಲ್ಮನರಿ ಆರ್ಟಿರಿಯಲ್‌ ಹೈಪರ್‌ಟೆನ್ಶನ್‌ (ಪಿಎಎಚ್‌)ಗೆ, ಶ್ವಾಸಕೋಶಗಳ ಉರಿಯೂತವಾದ ಅಲ್ವೆಯೊಲೈಟಿಸ್‌ಗೆ, ಜೀರ್ಣಾಂಗ ವ್ಯೂಹದ ಕಾಯಿಲೆಗಳಿಗೆ ಮತ್ತು ಹೃದಯ ಹಾನಿಗೆ ತುತ್ತಾಗುವ ಅಪಾಯವನ್ನು ಹೊಂದಿರುತ್ತಾರೆ. ಇವು ಮಾರಣಾಂತಿಕವಾಗಬಹುದಾಗಿವೆಯಲ್ಲದೆ ಜೀವನ ಗುಣಮಟ್ಟದ ಮೇಲೆ ತುಂಬಾ ಪ್ರತಿಕೂಲ ಪರಿಣಾಮ ಬೀರುತ್ತವೆ. ಆದ್ದರಿಂದ ಈ ಸಮಸ್ಯೆಗಳನ್ನು ಬೇಗನೆ ಪತ್ತೆಹಚ್ಚಿದರೆ ಉತ್ತಮ ಫ‌ಲಿತಾಂಶ ಪಡೆಯಲು ಸಾಧ್ಯ.

ಗರ್ಭಿಣಿಯರು: ಸ್ಕ್ಲೆರೊಡರ್ಮಾಗೆ ತುತ್ತಾಗಿರುವ ಸ್ತ್ರೀಯರು ಮಕ್ಕಳನ್ನು ಪಡೆಯಲು ಬಯಸಿದರೆ ತಮ್ಮ ಸ್ತ್ರೀರೋಗ ಮತ್ತು ಪ್ರಸೂತಿಶಾಸ್ತ್ರಜ್ಞರು, ರುಮಟಾಲಜಿ ತಜ್ಞರ ಜತೆಗೆ ಸವಿವರವಾಗಿ ಸಮಾಲೋಚನೆ ನಡೆಸಿ ಸಂಭಾವ್ಯ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕು. ಸ್ಕ್ಲೆರೋಡರ್ಮಾ ನಿಯಂತ್ರಣದಲ್ಲಿದ್ದು, ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡಗಳಂತಹ ಪ್ರಮುಖ ಅಂಗಾಂಗಗಳು ರೋಗಪೀಡಿತವಾಗಿಲ್ಲದೆ ಇದ್ದರೆ ಯಶಸ್ವಿ ಫ‌ಲಿತಾಂಶ ಪಡೆಯುವ ಸಾಧ್ಯತೆಗಳು ಅಧಿಕ.

-ಡಾ| ಪ್ರತ್ಯೂಷಾ ಮಣಿಕುಪ್ಪಮ್‌

ಅಸಿಸ್ಟೆಂಟ್‌ ಪ್ರೊಫೆಸರ್‌,

-ಡಾ| ಶಿವರಾಜ್‌ ಪಡಿಯಾರ್‌

ಅಸೋಸಿಯೇಟ್‌ ಪ್ರೊಫೆಸರ್‌,

ರುಮಟಾಲಜಿ ವಿಭಾಗ ಕೆಎಂಸಿ ಆಸ್ಪತ್ರೆ,

ಅತ್ತಾವರ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರುಮಟಾಲಜಿ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next