Advertisement

9 ವರ್ಷಗಳಲ್ಲಿ ದೇಶದ ಬಡವರ ಜೀವನ ಮಟ್ಟ ಸುಧಾರಿಸಿದೆ : ಸಚಿವೆ ನಿರ್ಮಲಾ ಸೀತಾರಾಮನ್

06:34 PM Jul 14, 2023 | Team Udayavani |

ಮಣಿಪಾಲ: ಕೊರೊನಾ ಕಾಲಘಟ್ಟದ ಸಂದಿಗ್ಧ ಪರಿಸ್ಥಿತಿ ಸಹಿತವಾಗಿ ಕಳೆದ 9 ವರ್ಷಗಳಿಂದ ಕೇಂದ್ರ ಸರಕಾರವು ದೇಶದ ಜನರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಎಲ್ಲ ವ್ಯವಸ್ಥೆ ಮಾಡಿದೆ ಮತ್ತು ದೇಶವು ಸೇವೆಯ ಉತ್ಕೃಷ್ಟತೆಯನ್ನು ಕಂಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

Advertisement

ಜಿಲ್ಲಾ ಬಿಜೆಪಿ ವತಿಯಿಂದ ಮಣಿಪಾಲದ ಕಂಟ್ರಿ ಇನ್ ಹೊಟೇಲ್‌ ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಜೀವದ ಹಂಗನ್ನು ತೊರೆದು ಸೇವೆ ಸಲ್ಲಿಸಿದ್ದಾರೆ ಎಂದರು.

50-60 ವರ್ಷಗಳಿಂದ ಬಡತನ ನಿರ್ಮೂಲನೆ ಘೋಷಣೆಯಾಗಿತ್ತು. 2013ರ ಅನಂತರದಲ್ಲಿ ಜನರ ಜೀವನ ಮಟ್ಟ ಬದಲಾಗಿದೆ. ಮನೆ ಮನೆಗೆ ನೀರು, ಗ್ಯಾಸ್, ಶೌಚಾಲಯದ ವ್ಯವಸ್ಥೆಯಾಗುತ್ತಿದೆ. ಮನೆ ಇಲ್ಲದವರಿಗೆ ಮನೆ ನಿರ್ಮಾಣ, ಆಯುಷ್ಮಾನ್ ಭಾರತ್ ಮೂಲಕ ಆರೋಗ್ಯ ಸೇವೆ, ಜನೌಷಧದ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಔಷಧ ಒದಗಿಸುವುದು ಸೇರಿದಂತೆ ಜನರ ಮೂಲ ಸೌಕರ್ಯ ಸುಧಾರಿಸಲು ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಮ್ಮದು ಭ್ರಷ್ಟಾಚಾರ ಇಲ್ಲದ ಶುದ್ಧ ಸರಕಾರ. ಅನುದಾನ ಬಳಕೆಯಲ್ಲೂ ಯಾವುದೇ ಲೋಪವಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಅನುದಾನದ ಹಂಚಿಕೆ ಮತ್ತು ಬಳಕೆಗೆ ಸರಿಯಾದ ಕ್ರಮ ಅನುಸರಿಸುತ್ತಿದ್ದೇವೆ. ಪ್ರಧಾನಿ ಮೋದಿಯವರು ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದರು.

ಎಂಎಸ್‌ಎಂಇಗೆ ಒತ್ತು

ಕೇಂದ್ರ ಸರಕಾರ ಎಂಎಸ್‌ಎಂಇಗೆ ಒತ್ತು ನೀಡುತ್ತಲೇ ಬಂದಿದೆ. 142ನೇ ಸ್ಥಾನದಲ್ಲಿದ್ದ ನಾವು ಈಗ 62 ಸ್ಥಾನಕ್ಕೆ ಏರಿದ್ದೇವೆ. ಸಣ್ಣ ಉದ್ಯಮಿಗಳಿಗೆ ಹೊರೆಯಾಗದಂತೆ ಮತ್ತು ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದ ನಿಯಮಗಳನ್ನು ಬದಲಿಸಿದ್ದೇವೆ. 39000 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇವೆ. ಉದ್ಯಮ್ ಪೋರ್ಟಲ್‌ನಲ್ಲಿ 1.97 ಕೋಟಿಗೂ ಅಧಿಕ ಉದ್ಯಮಿಗಳು ನೋಂದಣಿ ಮಾಡಿಕೊಂಡಿದ್ದಾರೆ. ರಫ್ತು ಉತ್ತೇಜನಕ್ಕೆ ವಿಶೇಷ ಅನುದಾನ ಒದಗಿಸಿದ್ದೇವೆ. 1387 ಟ್ರೆಡ್‌ಮಾರ್ಕ್, 126 ಪೆಟೆಂಟ್ ನೀಡಲಾಗಿದೆ. ಪಬ್ಲಿಕ್ ಪ್ರಕ್ಯೂರ್‌ಮೆಂಟ್ ಪಾಲಿಸಿಯಲ್ಲಿಯೂ ಬದಲಾವಣೆ ತಂದಿರುವುದರಿಂದ ಎಂಎಸ್‌ಎಂಇ ಪ್ರಮೋಶನ್‌ಗೂ ಇದರ ಅನುಕೂಲವಾಗಿದೆ. ಎಂಎಸ್‌ಎಂಇಗಳಿಗೆ ನೇರ ಮಾರುಕಟ್ಟೆಗೂ ಅವಕಾಶ ಮಾಡಿಕೊಟ್ಟಿದ್ದೇವೆ ಹಾಗೂ ಕಾರ್ಯಕ್ಷಮತೆ ಗುಣಮಟ್ಟ ಸಂಬಂಧ ಪಾವತಿಸುವ ಶುಲ್ಕವನ್ನು ಹಿಂದಿರುಗಿಸುವ ವ್ಯವಸ್ಥೆಯಾಗಿದೆ ಎಂದು ವಿವರಿಸಿದರು.

Advertisement

2013-14ರಲ್ಲಿ ಈ ಕ್ಷೇತ್ರಕ್ಕೆ 2,385 ಕೋಟಿ ನೀಡಲಾಗಿತ್ತು. 2023-24ರಲ್ಲಿ 22,138 ಕೋಟಿ ನೀಡಿದ್ದೇವೆ. ಎಂಎಸ್‌ಎಂಇಗಳು ಇದರ ಸದ್ಭಳಕೆ ಮಾಡಿಕೊಳ್ಳಬೇಕು. ಭಾರತದ ಉತ್ಪಾದನೆಯ ಶಕ್ತಿ ಹಾಗೂ ಬೆನ್ನೆಲುಬು ಎಂಎಸ್‌ಎಂಇ ಎಂದು ನಾವು ನಂಬಿದ್ದೇವೆ. ಹೀಗಾಗಿಯೇ ಉತ್ಪಾಾದನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಕ್ರೆಡಿಟ್ ಗ್ಯಾರಂಟಿ ಸ್ಕೀಂ, ಮನ್‌ಧನ್ ಯೋಜನೆಯು ಸಣ್ಣ ಉದ್ಯಮಿಗಳಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು.

ಶಾಸಕರಾದ ಯಶ್‌ಪಾಲ್ ಎ. ಸುವರ್ಣ, ಕಿರಣ್ ಕೊಡ್ಗಿ, ಮಾಜಿ ಶಾಸಕ ರಘುಪತಿ ಭಟ್, ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಜಿಲ್ಲಾ ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಪ್ರಬುದ್ಧರ ಗೋಷ್ಠಿಯ ಸಂಚಾಲಕ ಪಾಂಡುರಂಗ ಉಪಸ್ಥಿತರಿದ್ದರು.

ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಾಗತಿಸಿ, ಪ್ರಸ್ತಾವನೆಗೈದರು.  ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ವಂದಿಸಿದರು. ಎಂಐಟಿ ಪ್ರಾಧ್ಯಾಪಕ ಡಾ ಬಾಲಕೃಷ್ಣ ಮದ್ದೋಡಿ ನಿರೂಪಿಸಿದರು.

ಲೆಕ್ಕ ಪರಿಶೋಧನೆಗೆ ಆದ್ಯತೆ

ಲೆಕ್ಕ ಪರಿಶೋಧನೆ ವಿಭಾಗದಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದೇವೆ. ಪ್ರಧಾನ ನರೇಂದ್ರ ಮೋದಿಯವರು ವಿದೇಶ ಪ್ರವಾಸದ ಸಂದರ್ಭದಲ್ಲಿ ಆ ದೇಶ ಮತ್ತು ಭಾರತದೊಂದಿಗೆ ಲೆಕ್ಕ ಪರಿಶೋಧನೆ ವಿಷಯದ ಕಲಿಕೆ ಮತ್ತು ಪ್ರೊಫೆಶನಲ್ ಕೋರ್ಸ್ ಎಕ್‌ಸ್‌‌ಚೇಂಜ್ ಸಂಬಂಧಿಸಿದ ಯೋಚನೆ ನಡೆಯುತ್ತಿದೆ. ಆನ್‌ಲೈನ್ ಕೋರ್ಸ್‌ಗಳು ಆರಂಭವಾಗಿದೆ ಮತ್ತು ತಂತ್ರಜ್ಞಾನದ ಜತೆಗೆ ನೈತಿಕಯನ್ನು ಸೇರಿಸುವ ವ್ಯವಸ್ಥೆಯೂ ಆಗುತ್ತಿದೆ. ಅಕೌಂಟಿಂಗ್ ಸಿಸ್ಟಮ್ ಕೂಡ ವ್ಯವಸ್ಥಿತಗೊಳಿಸಿದ್ದೇವೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ತೆರಿಗೆ ಸುಧಾರಣೆ

ವಾರ್ಷಿಕ 7 ಲಕ್ಷದ ವರೆಗೂ ಆದಾಯ ಇರುವವರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. 7,27,000 ವರೆಗೂ ಅದನ್ನು ವಿಸ್ತರಿಸಿದ್ದೇವೆ. ಅಲ್ಲದೆ 50 ಸಾವಿರದವರೆಗೂ ಸ್ಟ್ಯಾಂಡರ್ಡ್ ಡಿಡಕ್ಷನ್ ಇದೆ.  ಡಾಕ್ಯೂಮೆಂಟ್ ಪ್ರೊಸೆಸಿಂಗ್ ವಿಧಾನವನ್ನು ಸರಳೀಕರಿಸಿದ್ದೇವೆ. ಮನವಿಗಳನ್ನು ಆಗಿಂದಾಗಲೇ ಇತ್ಯಾರ್ಥಪಡಿಸುವ ವ್ಯವಸ್ಥೆಯೂ ಇದೆ. ಆದಾಯ ತೆರಿಗೆ ಸಾಮಾನ್ಯ ಕುಟುಂಬಕ್ಕೆ ಹೊರೆಯಾಗುತ್ತಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಗಮನಾರ್ಹ ಸಾಧನೆ ಮಾಡಿದೆ. ಉಡುಪಿಯ ಯು.ಆರ್. ರಾವ್ ಸಹಿತವಾಗಿ ಅನೇಕರು ಇಸ್ರೊ ಕಟ್ಟಿ ಬೆಳೆಸಲು ತಮ್ಮದೆ ಕೊಡುಗೆ ನೀಡಿದ್ದಾರೆ. ವಿಜ್ಞಾಾನ ಮತ್ತು ಬಾಹ್ಯಾಾಕಾಶ ಕ್ಷೇತ್ರಕ್ಕೆ ಯಾವುದೇ ರೀತಿಯಲ್ಲೂ ಅನುದಾನ ಕಡಿಮೆ ಮಾಡಿಲ್ಲ. ಪ್ರಗತಿಯಲ್ಲಿರುವ ಯೋಜನೆಗಳಿಗೆ ಅನುದಾನ ಒದಗಿಸಿದ್ದೇವೆ. ಆದರೆ, ಈಗಾಗಲೇ ಪೂರ್ಣಗೊಂಡಿರುವ ಯೋಜನೆಗೆ ಪುನರ್ ಅನುದಾನ ನೀಡಿಲ್ಲ. ಹೊಸ ಯೋಜನೆಗಳಿಗೆ ಅನುದಾನ ನೀಡುತ್ತಿದ್ದೇವೆ ಮತ್ತು ಎಲ್ಲರ ಒಗ್ಗೂಡಿಕೆಯಲ್ಲಿ ಭಾರತ ವಿಶ್ವಗುರುವಾಗಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಸಂವಾದ

ಪ್ರಬುದ್ಧರ ಗೋಷ್ಠಿಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲಹೊತ್ತು ಸಂವಾದ ನಡೆಸಿದರು. ವಿದ್ಯಾರ್ಥಿಗಳು ಸಹಿತವಾಗಿ ಕೈಗಾರಿಕೆ, ಲೆಕ್ಕಪರಿಶೋಧನೆ, ಮಹಿಳಾ ಉದ್ಯಮೆ ಮೊದಲಾದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅನಂತರ ವಿವಿಧ ಸಂಘಟನೆಗಳಿಂದ ಮನವಿ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next