ಮುಂಬೈ: ನ್ಯೂಜಿಲೆಂಡ್ ನ ಮಾಜಿ ಕ್ರಿಕೆಟಿಗ- ವೀಕ್ಷಕ ವಿವರಣೆಗಾರ ಸೈಮನ್ ಡುಲ್ ಅವರು ಪಾಕಿಸ್ತಾನದಲ್ಲಿ ತಾನು ಅನುಭವಿಸಿದ ಸಂಕಷ್ಟದ ಬಗ್ಗೆ ಮಾತನಾಡಿದ್ದಾರೆ. ಪಾಕಿಸ್ತಾನ್ ಸೂಪರ್ ಲೀಗ್ ಕೂಟದ ಸಮಯದಲ್ಲಿ ಬಾಬರ್ ಅಜಮ್ ಅವರ ಸ್ವಾರ್ಥದ ಬಗ್ಗೆ ಮಾತನಾಡಿದ್ದಕ್ಕಾಗಿ ಮಾನಸಿಕವಾಗಿ ಹಿಂಸೆ ಅನುಭವಿಸಿದರು ಎಂದು ಸೈಮನ್ ಹೇಳಿದರು.
“ಪಾಕಿಸ್ತಾನದಲ್ಲಿ ವಾಸಿಸುವುದು ಜೈಲಿನಲ್ಲಿ ವಾಸಿಸುವಂತೆ. ಬಾಬರ್ ಆಜಂ ಅಭಿಮಾನಿಗಳು ನನಗಾಗಿ ಕಾಯುತ್ತಿದ್ದರಿಂದ ನನಗೆ ಹೊರಗೆ ಹೋಗಲು ಬಿಡಲಿಲ್ಲ. ನಾನು ಅನೇಕ ದಿನಗಳವರೆಗೆ ಆಹಾರವಿಲ್ಲದೆ ಪಾಕಿಸ್ತಾನದಲ್ಲಿಯೇ ಇದ್ದೆ. ನಾನು ಮಾನಸಿಕವಾಗಿ ಹಿಂಸೆಗೆ ಒಳಗಾಗಿದ್ದೆ, ಆದರೆ ದೇವರ ದಯೆಯಿಂದ ನಾನು ಪಾಕಿಸ್ತಾನದಿಂದ ಪಾರಾಗಿ ಬಂದೆ” ಎಂದು ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಹೇಳಿದರು.
ಪೇಶಾವರ್ ಝಲ್ಮಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವಿನ ಪಿಎಸ್ಎಲ್ ಪಂದ್ಯದ ವೇಳೆ, ಬಾಬರ್ ಅಜಮ್ ಅವರ ಬ್ಯಾಟಿಂಗ್ ವಿಧಾನವನ್ನು ಡುಲ್ ಟೀಕಿಸಿದ್ದರು. ಆರಂಭದಲ್ಲಿ 46 ಎಸೆತಗಳಲ್ಲಿ 83 ರನ್ ಗಳಿಸಿದ್ದ ಝಲ್ಮಿ ನಾಯಕ ಬಾಬರ್ ಬಳಿಕ ತಮ್ಮ ಶತಕವನ್ನು ಪೂರ್ಣಗೊಳಿಸಲು ಇನ್ನೂ 14 ಎಸೆತಗಳನ್ನು ತೆಗೆದುಕೊಂಡರು. ಬೌಂಡರಿಗಳನ್ನು ಗಳಿಸುವುದರ ಮೇಲೆ ಗಮನ ಹರಿಸುವ ಬದಲು ಬಾಬರ್ ದಾಖಲೆಗಳಿಗಾಗಿ ಆಡುತ್ತಾರೆ ಎಂದು ಡುಲ್ ಟೀಕಿಸಿದ್ದರು.
ವಿಶೇಷವೆಂದರೆ ಈ ಬಾರಿಯ ಐಪಿಎಲ್ ಇದೇ ಕಾರಣಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿಯನ್ನು ಡುಲ್ ಟೀಕಿಸಿದ್ದರು. ಏಪ್ರಿಲ್ 11 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೊಹ್ಲಿ 44 ಎಸೆತಗಳಲ್ಲಿ 61 ರನ್ ಗಳಿಸಿದ ನಂತರ, ಕೊಹ್ಲಿ ತಮ್ಮ ಫಿಫ್ಟಿ ಪೂರ್ಣಗೊಳಿಸಲು ಹೆಚ್ಚು ಎಸೆತಗಳನ್ನು ಬಳಸಿದರು ಎಂದು ಡುಲ್ ಹೇಳಿದರು.