ಧಾರವಾಡ: ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಜಾನುವಾರುಗಳ ಸಂಖ್ಯೆ ಕಡಿಮೆ ಇದ್ದು, ವೀಕ್ಷಕರ ಸಂಖ್ಯೆಯೂ ತೀರಾ ಕಡಿಮೆ ಇತ್ತು. ಶನಿವಾರ ದಿನ ಮಾಜಿ ಸಚಿವ ವಿನಯ್ ಕುಲಕರ್ಣಿ ಒಡೆತನದ ವಿನಯ್ ಡೈರಿಯ ಜಾನುವಾರುಗಳು ಮೇಳಕ್ಕೆ ಮೆರಗು ತಂದಿವೆ. ವಿವಿಧ ತಳಿಯ ಹೋರಿಗಳು, ಎಚ್‌ಎಫ್ ತಳಿಯ ಆಕಳು, ಮುರ್ರಾ ತಳಿಯ ಕೋಣ ಮತ್ತು ಎಮ್ಮೆಗಳ ಪ್ರದರ್ಶನ ಆಕರ್ಷಕವಾಗಿದೆ.
ಮೇಳಕ್ಕೆ ವಾಹನದ ಮೂಲಕ ಜಾನುವಾರು ತರುವ ಕೆಲಸ ಶನಿವಾರ ಸಂಜೆವರೆಗೆ ಸಾಗಿತ್ತು. ಹೀಗಾಗಿ ರವಿವಾರ ದಿನದಂದು ಜಾನುವಾರು ಪ್ರದರ್ಶನಕ್ಕೆಪೂರ್ಣ ಪ್ರಮಾಣದಲ್ಲಿ ಜಾನುವಾರು ಲಭ್ಯವಾಗಲಿವೆ. ನಾನಾ ತಳಿಯ ಕುದುರೆ, ಆಕಳು, ಹೋರಿ, ಎತ್ತುಗಳು ಜಾನುವಾರು ಪ್ರದರ್ಶನದಲ್ಲಿ ಗಮನ ಸೆಳೆದವು.
ಆರೋಗ್ಯಕರ ಹಾಲು ನೀಡುವುದರ ಜೊತೆಗೆ ಕಷ್ಟದ ಕೆಲಸಗಳಿಗೆ ಹೆಸರುವಾಸಿ ಆಗಿರುವ ರಾಜಸ್ಥಾನದ ಕಾಂಕ್ರೇಜ್ ತಳಿಯ ಹೋರಿ, ಆಕಳು ಹಾಗೂ ಆಂಧ್ರಪ್ರದೇಶದ ಓಗೋಲ್ ಜಿಲ್ಲೆಯ ಓಗೋಲ್ ತಳಿಯ ಎತ್ತುಗಳು ಈ ಸಲದ ವಿಶೇಷತೆ. ಈ ತಳಿಯ ಆಕಳು ನೋಡಲು ಆಕರ್ಷಕವಾಗಿದ್ದರೆ ಎತ್ತುಗಳಂತೂ ದಷ್ಟ-ಪುಷ್ಟವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ವಿನಯ್ ಡೈರಿಯಲ್ಲಿ ಇರುವ ಓಗೋಲ್ ತಳಿಯ ಎರಡು ಹೋರಿಗಳನ್ನು 3 ವರ್ಷಗಳ ಹಿಂದೆ 4 ಲಕ್ಷ ಕೊಟ್ಟು ತಂದಿದ್ದು, ಈಗಂತೂ ಎಲ್ಲರ ಗಮನ ಸೆಳೆದಿವೆ.
ಮೇಕೆ ತಳಿಗಳ ಹವಾ: ಜಮುನಾಪಾರಿ, ತೋತಾಪುರಿ, ಸಿರೋಹಿ, ಬಿಟಲ್, ಸೋಜತ್ ತಳಿಯ ಮೇಕೆಗಳು ಜಾನುವಾರು ಮೇಳದಲ್ಲಿ ಗಮನ ಸೆಳೆಯುತ್ತಿದ್ದು, ಈ ಪೈಕಿ ಸಿರೋಹಿ ಈ ಸಲದ ವಿಶೇಷತೆ. ರಾಜಸ್ಥಾನದ ಮೂಲದ ಈ ತಳಿ ಹಾಲು ಮತ್ತು ಮಾಂಸದ ಉತ್ಪಾದನೆಗೆ ಹೆಸರುವಾಸಿ. ಮೈಬಣ್ಣ ತಿಳಿ ಕಂದು, ಕಡುಗೆಂಪಾಗಿದ್ದು, ಕಿವಿಗಳು ದೊಡ್ಡದಾಗಿವೆ. ಬಾಲ ಚಿಕ್ಕವಿದ್ದು, ಮೇಲಕ್ಕೆ ತಿರುಗಿಸಿಕೊಂಡಿದೆ. ಒಂದು ಬಾರಿ 2-3 ಮರಿಗಳಿಗೆ ಜನ್ಮ ನೀಡುವ ಸಾಮರ್ಥಯವಿರುವ ಈ ತಳಿಯ ಮೇಕೆಯು ದಿನಕ್ಕೆ 3-4 ಲೀಟರ್ ಹಾಲು ನೀಡುತ್ತದೆ. ಇನ್ನೂ ಮಾಂಸವು 30 ರಿಂದ 50 ಕೆಜಿ ಲಭ್ಯ.