ಮಹಾನಗರ: ಮಂಗಳೂರು ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಮದ್ಯದ ನಶೆಯಿಂದ ಕ್ಷುಲ್ಲಕವೆನಿಸುವಂಥ ಕಾರಣಕ್ಕೆ ಮತ್ತೂಂದು ಹೆಣ ಬಿದ್ದಿದೆ. ಮುಲ್ಕಿಯಲ್ಲಿ ಶನಿವಾರ ತಡರಾತ್ರಿ ಕಟ್ಟಡ ಕಾರ್ಮಿಕ ಹರೀಶ್ ಸಾಲ್ಯಾನ್ ಆತನ ಜತೆ ಕೆಲಸ ಮಾಡಿಕೊಂಡಿದ್ದವನಿಂದಲೇ ಹತ್ಯೆಯಾಗಿದ್ದಾರೆ.
ಮದ್ಯದ ನಶೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಈ ಕೊಲೆ ನಡೆದಿರುವುದನ್ನು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಮಂಗಳೂರು ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಇದೇ ರೀತಿಯ ಹಲವು ಕೊಲೆಗಳು ನಡೆದಿವೆ.
ಸಾಮಾಜಿಕ ಬದಲಾವಣೆಯ ಕಾಲಘಟ್ಟದಲ್ಲಿ ಇಂಥ ಕೊಲೆಗಳು ಮರುಕಳಿಸುತ್ತಿರುವುದು ವಿಪರ್ಯಾಸ. ಅ. 5ರಂದು ಉದ್ಯಮಿ ರಾಜೇಶ್ ತಮ್ಮ ಕಚೇರಿಯ ಎದುರು ಪಿಸ್ತೂಲ್‌ನಿಂದ ಕೆಲಸಗಾರರತ್ತ ಹಾರಿಸಿದ್ದರು ಎನ್ನಲಾದ ಗುಂಡು ತಗಲಿ ಅವರ ಪುತ್ರ ಸುಧೀಂದ್ರ (16) ಗಂಭೀರ ಗಾಯಗೊಂಡು ಮೂರು ದಿನಗಳ ಅನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಅ.16ರಂದು ನಗರದ ಪಂಪ್‌ವೆಲ್ ಬಳಿ ಲಾಡ್ಜ್ ವೊಂದರಲ್ಲಿ ಪಾರ್ಟಿ ನಡೆಸಿದ್ದ ಯುವಕರು ಧನುಷ್ ಎಂಬಾತನನ್ನು ಚೂರಿಯಿಂದ ಇರಿದು ಕೊಲೆಗೈದಿದ್ದರು. ತಮ್ಮ ಮನೆಯವರ ಬಗ್ಗೆ ಕೀಳಾಗಿ ಮಾತನಾಡುತ್ತಾನೆ ಎಂಬ ಕೋಪದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದು ವಿಚಾರಣೆ ವೇಳೆ ತಿಳಿದುಬಂದಿತ್ತು.
ಪಟಾಕಿ ಸಿಡಿಸುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾದ ಘಟನೆ ನ. 3ರಂದು ನಗರದ ಕಾರ್ ಸ್ಟ್ರೀಟ್ ಬಳಿ ನಡೆದಿತ್ತು. ಅಪಾರ್ಟ್‌ಮೆಂಟ್ ನಿವಾಸಿ ವಿನಾಯಕ ಕಾಮತ್ (35) ಚೂರಿ ಇರಿತದಿಂದ ಕೊಲೆಯಾಗಿದ್ದರು. ಅದೇ ಅಪಾರ್ಟ್‌ಮೆಂಟ್‌ನ ನಿವಾಸಿಗಳಿಬ್ಬರು ಪ್ರಕರಣದ ಆರೋಪಿಗಳಾಗಿದ್ದರು. ಕಾರ್ಮಿಕನ ಹತ್ಯೆ ಮಿಲಾಗ್ರಿಸ್ ಸಮೀಪದ ಫಳ್ನೀರ್ ರಸ್ತೆಯ ಕಟ್ಟಡವೊಂದರಲ್ಲಿ ಕಳೆದ ವರ್ಷ ಜ. 24ರ ರಾತ್ರಿಯಿಂದ ಜ. 25ರ ಬೆಳಗ್ಗಿನ ನಡುವಿನ ಅವಧಿಯಲ್ಲಿ ಝಾರ್ಖಂಡ್ ಮೂಲದ ಕೂಲಿ ಕಾರ್ಮಿಕ ರಾಮಚಂದ್ರ ಭುಯ್ನಾನ್ (48) ಅವರನ್ನು ಕೊಲೆ ಮಾಡಲಾಗಿತ್ತು.