ಹುಮನಾಬಾದ: ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಸಮಸ್ಯೆ ಕುರಿತು ಬೆಳಗಾವಿ ಅಧಿವೇಶನದಲ್ಲಿ ಶಾಸಕರಾದ ರಾಜಶೇಖರ ಪಾಟೀಲ, ಬಂಡೆಪ್ಪ ಖಾಶೆಂಪೂರ ತಿಳಿಸಿ ಸಿಎಂ ಮೇಲೆ ಒತ್ತಡ ಹಾಕಿದ್ದಾರೆ. ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಕೇಂದ್ರ ಸಚಿವ ಭಗವಂತ ಖೂಬಾ ಕೂಡ ವಿಶೇಷ ಅನುದಾನ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಎಸ್‌ಎಸ್‌ಕೆ ರೈತರ ಜೀವನಾಡಿಯಾಗಿದೆ ಎಂದು ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಭಾಷ ಕಲ್ಲೂರ ಹೇಳಿದರು.
ಹಳ್ಳಿಖೇಡ (ಬಿ) ಹೊರವಲಯದಲ್ಲಿನ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ 2018-19, 2019-20, 2020-21ನೇ ಸಾಲಿನ 45, 46, 47ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಬಿಎಸ್‌ಎಸ್‌ಕೆ ರೈತರ ಜೀವನಾಡಿಯಾಗಿದೆ. ರೈತರ ಹಿತದೃಷ್ಟಿಯಿಂದ ಸಮಸ್ಯೆಗಳ ಸುಳಿಯಲ್ಲಿ ಬಂದ್ ಆಗಿದ್ದ ಕಾರ್ಖಾನೆ ಪುನಾರಂಭಿಸಲಾಗಿದೆ. ಈ ಹಿಂದೆ ಕಾರ್ಖಾನೆ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು ಸ್ವಾರ್ಥ ಆಡಳಿತ ನೀತಿಯಿಂದ ಕಾರ್ಖಾನೆ ಅವನತಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಸದ್ಯದ ಆಡಳಿತ ಮಂಡಳಿಯವರು ಕಾರ್ಖಾನೆ ಪುನಾರಂಭಿಸುವ ನಿಟ್ಟಿನಲ್ಲಿ ಅನೇಕ ಮೂಲಗಳಿಂದ ಸಾಲ ಪಡೆದಿದ್ದಾರೆ. ಅಲ್ಲದೇ ಸ್ವತಃ ಆಸ್ತಿಗಳನ್ನು ಅಡವಿಟ್ಟು ಕಾರ್ಖಾನೆ ಪ್ರಾರಂಭಕ್ಕೆ ಸಹಕಾರ ನೀಡಿದ್ದಾರೆ. ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಮೂಲಕ ರೈತರು ಸಹಕಾರ ನೀಡಬೇಕು. ಸೂಕ್ತ ಸಮಯಕ್ಕೆ ಕಬ್ಬಿನ ಹಣ ಪಾವತಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಉಪಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿದರು. ಈ ವೇಳೆ ನಿರ್ದೇಶಕ ಮಾಣಿಕಪ್ಪ ಖಾಶೇಂಪೂರ, ವಿಶ್ವನಾಥ ಪಾಟೀಲ್ ಮಾಡಗೂಳ, ಅಪ್ಪಣ್ಣ, ಶ್ರೀನಿವಾಸ ಪೊದ್ದಾರ್, ಅಶೋಕ ಪಾಟೀಲ್, ಕಲಾವತಿ ತಬ್ಬಶಟ್ಟಿ, ಶೋಭಾ ಮಚ್ಚೇಂದ್ರ, ರಾಜಪ್ಪ, ಸೈಯದ್ ತಾಹೇರ ಅಲಿ, ಮಹ್ಮದ್ ಗೌಸ್ ಇದ್ದರು.