ಹಾಸನ: ಜಿಲ್ಲೆಯಲ್ಲಿ ಕಳೆದ ಸೋಮವಾರದಿಂದ ಸುರಿಯುತ್ತಿರುವ ಮುಂಗಾರು ಮಳೆಯ ಆರ್ಭಟಕ್ಕೆ ಒಬ್ಬ ರೈತ ಮತ್ತು ಎರಡು ಜಾನುವಾರು ಬಲಿಯಾಗಿದ್ದು, 2100 ಹೆಕ್ಟೇರ್ ಮೆಕ್ಕೆ ಜೋಳ, 779 ಹೆಕ್ಟೇರ್ ಭತ್ತದ ಬೆಳೆ ನಾಶವಾಗಿದೆ. 196 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಹಾಸನ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಅತಿವೃಷ್ಟಿ ಹಾನಿ ಪರಿಶೀಲನಾ ಸಭೆಗೆ ಈ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು, ಸಕಲೇಶಪುರ ತಾಲೂಕು ಹಾನ ಬಾಳು ಸಮೀಪದ ನಡಬೆಟ್ಟ ಗ್ರಾಮದ ಸಿದ್ಧಯ್ಯ (60) ಜಾನುವಾರುಗಳೊಂದಿಗೆ ಬರುತ್ತಿದ್ದಾಗ ಹಳ್ಳದಲ್ಲಿ ನೀರಿಗೆ ಸಿಕ್ಕಿ ಕೊಚ್ಚಿ ಹೋಗಿದ್ದಾರೆ ಎಂದು ತಿಳಿಸಿದರು.
ವಾಡಿಕೆಗಿಂತ ಹೆಚ್ಚು ಮಳೆ: ಆ.1 ರಿಂದ 6 ರವರೆಗೆ ವಾಡಿಕೆ ಮಳೆ ಜಿಲ್ಲೆಯಲ್ಲಿ 48 ಮಿ. ಮೀ. ಆಗಬೇಕಾಗಿತ್ತು. ಆದರೆ 135 ಮಿ, ಮೀ. ಮಳೆ ಸುರಿದಿದ್ದು, ವಾಡಿಕೆಗಿಂತ ಶೇ.184 ರಷ್ಟು ಹೆಚ್ಚು ಮಳೆ ಸುರಿದಿದೆ. ಸಕಲೇಶಪುರ ತಾಲೂಕಿನಲ್ಲಿ 112 ವಾಡಿಕೆ ಮಳೆಗೆ ಬದಲಾಗಿ 484 ಮಿ.ಮೀ.ಮಳೆಯಾಗಿದ್ದು, ವಾಡಿಕೆಗಿಂತ ಶೇ.345 ರಷ್ಟು ಮಳೆಯಾಗಿದೆ ಎಂದು ವಿವರ ನೀಡಿದರು
771 ಹೆಕ್ಟೇರ್ ಬೆಳೆ ಹಾನಿ: ಮಳೆ ಮತ್ತು ಗಾಳಿ ಹೊಡೆತದಿಂದ 2100 ಹೆಕ್ಟೇರ್ ಮೆಕ್ಕೆ ಜೋಳ ನಾಶವಾಗಿದೆ. ಹಾಸನ ತಾಲೂಕಿನಲ್ಲಿ 350 ಹೆಕ್ಟೇರ್, ಆಲೂರು ತಾಲೂಕಿನಲ್ಲಿ 785 ಹೆಕ್ಟೇರ್, ಅರಕಲಗೂಡು ತಾಲೂಕಿನಲ್ಲಿ 570 ಹೆಕ್ಟೇರ್, ಬೇಲೂರು ತಾಲೂಕಿನಲ್ಲಿ 322 ಹೆಕ್ಟೇರ್ ಜೋಳದ ಬೆಳೆಗೆ ಹಾನಿಯಾಗಿದೆ. ಸಕಲೇಶಪುರ ತಾಲೂಕಿನಲ್ಲಿ 771 ಹೆಕ್ಟೇರ್ ಭತ್ತದ ಬೆಳೆಗೆ ಹಾನಿಯಾಗಿದೆ ಎಂದು ತಿಳಿಸಿದರು.
13 ಮನೆ ಕುಸಿತ: 191 ಮನೆಗಳ ಹಾನಿಯ ಪೈಕಿ ಸಕಲೇಶಪುರ ತಾಲೂಕಿನಲ್ಲಿ 135 ಮನೆ ಗಳು, ಬೇಲೂರು ತಾಲೂಕಿನಲ್ಲಿ 11, ಅರಕಲಗೂಡು ತಾಲೂಕಿನಲ್ಲಿ 17, ಹಾಸನ ತಾಲೂಕಿನಲ್ಲಿ 132, ಅರಸೀಕೆರೆ -2, ಹೊಳೆನರಸೀಪುರ – 3 ಮತ್ತು ಚನ್ನರಾಯ ಪಟ್ಟಣ ತಾಲೂಕಿನಲ್ಲಿ 13 ಮನೆಗಳು ಕುಸಿ ದಿವೆ ಎಂದು ಮಾಹಿತಿ ನೀಡಿದರು.
ಶಾಸಕ ಪ್ರೀತಂ ಜೆ.ಗೌಡ ಅವರು ಸಭೆಯಲ್ಲಿ ಹಾಜರಿದ್ದರೆ, ಅರಸೀಕೆರೆ ಶಾಸಕ ಕೆ. ಎಂ.ಶಿವಲಿಂಗೇಗೌಡ, ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ, ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್.ಲಿಂಗೇಶ್ ಅವರು ವೀಡಿಯೋ ಸಂವಾದದ ಮೂಲಕ ಮಳೆಹಾನಿಯ ಬಗ್ಗೆ ಸಚಿವರ ಗಮನ ಸೆಳೆದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್‌ಸಿಂಗ್, ಜಿಪಂ ಸಿಇಒ ಪರ ಮೇಶ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು