ಬಾಲ್ಯದಿಂದಲೂ ನನಗೆ ದೂರದ ಹಳ್ಳಿಗೆ ಹೋಗಿ ಕೆಲಸ ಮಾಡುವ ಆಸೆ. ಜನರ ಜತೆ ಬೆರೆಯಬೇಕು, ಸಮಾಜವನ್ನು ತಿದ್ದಬೇಕು. ಎಲ್ಲವನ್ನೂ ಪ್ರಶ್ನಿಸಬೇಕು. ಯಾರೂ ಪ್ರಶ್ನಾತೀತರಲ್ಲ ಎನ್ನುವ ನನ್ನದೇ ಹತ್ತಾರು ಸಿದ್ಧಾಂತಗಳು. ಟೀಚರ್ ಕೆಲಸದ ಮೇಲೆ ಸ್ವಲ್ಪ ಜಾಸ್ತಿನೇ ಮೋಹ. ಆದರೆ ನನ್ನ ತಂದೆಗೆ ನಾನು ಐಪಿಎಸ್ ಆಗಬೇಕೆನ್ನುವ ಆಸೆ. ನನಗೋ ಪೊಲೀಸ್ ಎಂದರೆ ಒಂದು ರೀತಿಯ ಭಯ. ಅಪ್ಪನ ಹತ್ತಿರ ನಾನು ಐಪಿಎಸ್ ಆಗಲ್ಲ ಐಎಎಸ್ ಆಗ್ತೀನೆ ಅಂದೆ. ಅದರ ವಿಸ್ತೃತ ರೂಪವೇ ಗೊತ್ತಿಲ್ಲದ ವಯಸ್ಸು. ಊರೆಲ್ಲ ನಾನು ಡಿಸಿ ಆಗ್ತೀನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದೆ.
ನನಗೆ ಚಿಕ್ಕಂದಿನಿಂದಲೂ ಸಮಾಜ ವಿಜ್ಞಾನ ಇಷ್ಟದ ವಿಷಯ. ಅದರಲ್ಲೂ ರಾಜಕೀಯ ಶಾಸ್ತ್ರ ಅಂದರೆ ತುಸು ಹೆಚ್ಚು. ಇವನ್ನೆಲ್ಲ ನೋಡುತ್ತಿದ್ದವರು ನೀನು ರಾಜಕಾರಣಿ ಆಗು ಎಂಬ ಒತ್ತಾಯಕ್ಕೆ ನಾನು ಎರಡು ಕೈ ಮುಂದೆ ಮಾಡಿ ಕೈ ಮುಗಿದು ಹೂಂ ಅಂದೆ. ನಾನು ರಾಜಕಾರಣಿಯಾದರೆ ಸಾಮಾನ್ಯ ರಾಜಕಾರಣಿಯಾಗಿರದೇ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಆಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದೆ. ಅಲ್ಲಿಗೆ ಟೀಚರ್, ಐಎಎಸ್ ಆಗುವ ಕನಸಿನ ಪಟ್ಟಿಗೆ ರಾಜಕಾರಣಿ ಕೂಡ ಹೊಸದಾಗಿ ಸೇರ್ಪಡೆಯಾಯಿತು.
ಜೀವನದ ಬಗ್ಗೆ ಹೆಚ್ಚೇನೂ ಕನಸು ಕಾಣುವ ವಯಸ್ಸಲ್ಲವಾದರೂ ವಯಸ್ಸಿಗೆ ಮೀರಿದ ಕನಸು ಕಾಣುತ್ತಿದ್ದೆ. ದಿನ ಕಳೆದಂತೆ ಟೀಚರ್ ಆಗುವ ಕನಸು ನನ್ನ ಆಸೆಗಳ ಪಟ್ಟಿಗಳಿಂದ ದೂರವೇ ಹೋಗಿತ್ತು. ಐಎಎಸ್, ಮುಖ್ಯಮಂತ್ರಿ ಜತೆಗೆ ಹತ್ತಾರು ಆಸೆಗಳು ಸೇರಿ ಪಟ್ಟಿ ಬೆಳೆಯುತ್ತಾ ಹೋಯಿತು.
ಅದು ಹೈಸ್ಕೂಲ್ ಓದುತ್ತಿದ್ದ ಸಮಯ. ನಮ್ಮ ಶಾಲೆಯ ಆಂಗ್ಲ ಭಾಷೆ ಶಿಕ್ಷಕಿ ಒಮ್ಮೆ ಶಾಲೆಯಲ್ಲಿ ನಾನು ವಾರ್ತೆ ಓದುವುದನ್ನು ನೋಡಿ ಚೆನ್ನಾಗಿ ಓದುತ್ತೀಯಾ ಅಂತ ಹೊಗಳಿದ್ದರು. ಆವಾಗಲೇ ಆಸೆಗಳ ಪಟ್ಟಿಗೆ ಹೊಸದೊಂದು ಆಸೆ ಸೇರಿದ್ದು. ಪಿಯುಸಿ ಮುಗಿದ ಅನಂತರ ಪತ್ರಿಕೋದ್ಯಮ ಪದವಿ ಪಡೆಯುವ ಆಸೆ. ಆದರೆ ಕೆಲವರ ವಿರೋಧ. ಆದರೂ ನನ್ನ ಒತ್ತಾಯಕ್ಕೆ ಅಪ್ಪ-ಅಮ್ಮ ಕೂಡ ಒಪ್ಪಿಕೊಂಡರು. ಕಾಲೇಜು ಸೇರುವ ತನಕ ಪತ್ರಿಕೋದ್ಯಮ ಎಂದರೆ ಟಿವಿಯಲ್ಲಿ ನ್ಯೂಸ್ ಓದುವುದು ಮಾತ್ರ ಎಂದು ತಿಳಿದಿದ್ದ ನನಗೆ ಸೇರಿದ ಬಳಿಕ ತಿಳಿಯಿತು ಇದು ಸಮುದ್ರದಂತೆ ವಿಶಾಲವಾದುದು ಅಂತ.
ಬರವಣಿಗೆ, ವಾಕ್‌ಚಾತುರ್ಯ, ವಿಚಾರಜ್ಞಾನ ಒಬ್ಬ ಪತ್ರಕರ್ತನಿಗೆ ಇರಬೇಕಾದ ಪ್ರಾಥಮಿಕ ಅರ್ಹತೆಗಳು. ಸಾಮಾಜಿಕ ಬದ್ಧತೆಯೂ ಕೂಡ ಮುಖ್ಯ. ಹೀಗಾಗಿ ಸಮಾಜವನ್ನು ತಿದ್ದುವ ಪತ್ರಿಕೋದ್ಯಮ ಬಿಟ್ಟು ಬೇರೆ ಯಾವುದೇ ಆಯ್ಕೆಗಳು ಅಷ್ಟಾಗಿ ತೋಚುತ್ತಿಲ್ಲ. ಪ್ರೋತ್ಸಾಹ, ಅಪ್ಪನ ಕನಸು ಇಂದು ಪತ್ರಕರ್ತಳಾಗಿ ಕಾರ್ಯ ನಿರ್ವಹಿಸಬೇಕು ಎಂಬ ಘನ ಆಕಾಂಕ್ಷೆ ನನ್ನಲ್ಲಿ ಬೇರೂರಿದೆ. ಇದು ಜೀವನ ಸಾಧನೆ ಎಂದು ಭಾವಿಸಿರುವೆ.
ಯಾರಿಂದಲೋ ಪ್ರೇರಣೆಯಾಗಿ, ಇನ್ಯಾರಧ್ದೋ ಅನುಕರಣೆಯ ಮಧ್ಯೆ ಎಲ್ಲರ ಜೀವನದಲ್ಲಿ ಕೂಡ ಮುಂದೆ ಏನಾಗಬೇಕು ಎನ್ನುವ ಆಸೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಬಾಲ್ಯದಿಂದ ಹುಟ್ಟುವ ಆಸೆ ಜೀವನದ ಒಂದು ಹಂತಕ್ಕೆ ಬಂದ ಮೇಲೆ ಖಚಿತ ಪಡೆದುಕೊಳ್ಳುತ್ತದೆ. ಎಷ್ಟೇ ಆಯ್ಕೆಗಳಿದ್ದರೂ ಕೂಡ ಕೊನೆಗೆ ಒಂದೇ ಆಯ್ಕೆ ಅಂತಿಮವಾಗಬೇಕು.
ನವ್ಯಶ್ರೀ ಶೆಟ್ಟಿ ಎಂ.ಜಿ.ಎಂ. ಕಾಲೇಜು, ಉಡುಪಿ