ಮೈಸೂರು: ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಉತ್ಪನ್ನಗಳ ತಯಾರಿಕೆ ಬಗ್ಗೆ ಹಾಗೂ ಉದ್ಯಮದ ಬಗ್ಗೆ ವಿಶೇಷಚೇತನರಿಗೆ ತರಬೇತಿ ನೀಡಿ ಎಂದು ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಕೆ.ಜ್ಯೋತಿ ಹೇಳಿದರು. ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿದಾರರ ಸಂಘದಿಂದ ನಗರದ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಚೇತನರಿಗೆ ಕೈಗಾರಿಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾರುಕಟ್ಟೆಯಲ್ಲಿ ಎಂದೂ ನಷ್ಟಕ್ಕೆ ಒಳಗಾಗದ ಉತ್ಪನ್ನ ಅಥವಾ ಉದ್ಯಮದ ಬಗ್ಗೆ ವಿಶೇಷಚೇತನರಿಗೆ ತರಬೇತಿ ನೀಡಬೇಕು. ನಷ್ಟ ಆಗದೆ ನಿರಂತರ ಲಾಭಗಳಿಸುವ ಉತ್ಪನ್ನ ತಯಾರಿಕೆ ಮತ್ತು ಉದ್ಯಮ ಬಗ್ಗೆ ತರಬೇತಿ ನೀಡುವುದು ಅಗತ್ಯವಿದೆ. ವಿಶೇಷಚೇತನರಿಗೆ ಇಂಥ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಇಂಥ ಕಾರ್ಯಕ್ರಮ ಪುನರಾವರ್ತನೆ ಆಗಬೇಕು ಎಂದರು.
ಉದ್ಯಮ ಮತ್ತು ತರಬೇತಿ ಪಡೆದುಕೊಂಡು ವಿಶೇಷಚೇತನ ಉದ್ಯಮಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಭವಾಗುತ್ತಿದಿಯೇ, ಅಡೆತಡೆಗಳು, ಸವಾಲಗಳೇನು? ಎಂದು ವಿಚಾರಿಸಲು ಆಗಾಗ ಇಂಥ ಕಾರ್ಯಕ್ರಮ ಆಯೋಜಿಸಿ, ಅವುಗಳನ್ನು ನಿವಾರಿಸಲು ಸಲಹೆ ನೀಡಬೇಕು ಎಂದು ತಿಳಿಸಿದರು.
ಮೈಸೂರು ವಿವಿ ಪ್ರಾಧ್ಯಪಕ ಪ್ರೊ.ದಯಾನಂದ ಮಾನೆ ಮಾತನಾಡಿ, ಶಕ್ತಿವಂತರು ಮಾತ್ರ ಬದಕುಲು ಸಾಧ್ಯ ಎಂದು ಹೇಳುವ ಡಾರ್ವಿನ್ ಸಿದ್ಧಾಂತವನ್ನು ವಿಶೇಷಚೇತನರು ಸುಳ್ಳು ಮಾಡಬೇಕು. ಶಕ್ತಿಯಿಂದಲ್ಲ ಯುಕ್ತಿಯಿಂದ ಗೆಲ್ಲುತ್ತೇವೆ, ಸಾಧಿಸುತ್ತೇವೆ ಎಂದು ತೋರಿಸಬೇಕಿದೆ.
ಈಗ ಜಾಗತಿಕ ಮಟ್ಟದಲ್ಲಿ ಪದವಿ ಮತ್ತು ವೃತ್ತ ಸಂಬಂಧವಿಲ್ಲದ ಕಾರ್ಯನಿರ್ವಹಿಸುವ ವ್ಯವಸ್ಥೆ ಜಾರಿಯಲ್ಲಿದೆ. ಯಾರು ಬೇಕಾದರೂ ದುಡಿಯಬಹುದು. ಇದನ್ನು ವಿಶೇಷಚೇತನರು ಸದಪಯೋಗ ಪಡೆದುಕೊಳ್ಳಬೇಕು. ಇದಕ್ಕಾಗಿ ಕೌಶಲ್ಯ ಮೈಗೂಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜ ಗಾಂಧಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಸ್.ಜಿ.ಹರೀಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಎಚ್.ಎಸ್.ಬಿಂದ್ಯಾ, ಸಿಡಾಕ್ ಜಂಟಿ ನಿರ್ದೇಶಕ ಮಂಜುನಾಥಸ್ವಾಮಿ, ಕರ್ನಾಟಕ ರಾಜ್ಯ ಎಸ್ಸಿ-ಎಸ್‌ಟಿ ಎಂಟರ್‌ಪ್ರೈನರ್ ಇಂಡಸ್ಟ್ರೀಯಲಿಸ್ಟ್ ಅಸೋಸಿಯೇಷನ್ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸನ್, ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿದಾರ ಸಂಘದ ಆರ್.ಮಂಜುನಾಥ್ ಮತ್ತಿತರಿದ್ದರು.