ಬೆಂಗಳೂರು:ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸುವ ಹೈಡ್ರಾಮಾ ಸೋಮವಾರ 12ಗಂಟೆವರೆಗೆ ಮುಂದುವರಿದು, ಕಾಂಗ್ರೆಸ್, ಜೆಡಿಎಸ್ ಶಾಸಕರ ಗದ್ದಲ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ಮನವಿ ಮೇರೆಗೆ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದ್ದರು. ಇಂದು 6ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಸ್ಪೀಕರ್ ಅಂತಿಮ ಗಡುವು ನೀಡಿದ್ದರು.
ಶುಕ್ರವಾರ ಕಲಾಪ ಮುಗಿಸುವ ವೇಳೆ ಸೋಮವಾರವೇ ವಿಶ್ವಾಸಮತ ಯಾಚಿಸುವುದಾಗಿ ಸ್ಪೀಕರ್ ಹಾಗೂ ಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದರು. ಆದರೆ ಇದೇನು ಅನಾವಶ್ಯಕವಾಗಿ ಕಾಲಹರಣ ಮಾಡಿ, ವಿಶ್ವಾಸಮತ ಯಾಚನೆ ಮುಂದೂಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸಂಜೆ 7ಗಂಟೆಗೆ ನಡೆದ ವಿಶ್ವಾಸಮತ ಯಾಚನೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಸೋಲನ್ನನುಭವಿಸಿದೆ. ಮೈತ್ರಿ ಪಕ್ಷ 99 ಸದಸ್ಯರ ಬೆಂಬಲ ಹೊಂದಿದ್ದು, ಬಿಜೆಪಿ 105 ಸದಸ್ಯರ ಬೆಂಬಲದೊಂದಿಗೆ ಬಹುಮತ ಪಡೆದಿದೆ. ಈ ಮೂಲಕ ಮೈತ್ರಿ ಸರ್ಕಾರ ಪತನಗೊಂಡಿದ್ದು, ಬಿಎಸ್ ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿಯಾಗಲು ಹಾದಿ ಸುಗಮವಾದಂತಾಗಿದೆ.