ನರಗುಂದ: ಮಹಾಮಹಿಮರ ಈ ನಾಡು ಪುಣ್ಯದ ಬೀಡಾಗಿದೆ.ನಾವೆಲ್ಲ ಭಕ್ತಿಯ ಸಂಪ್ರದಾಯದಲ್ಲಿ ಜೀವನ ನಡೆಸಬೇಕು. ಭಾರತೀಯ ಸಂಸ್ಕೃತಿಯ ಪ್ರತಿಬಿಂಬ ನಾವಾಗಬೇಕು ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಡಾ| ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಜಾಗೃತ ಕೇಂದ್ರ ಸುಕ್ಷೇತ್ರ ವಿರಕ್ತಮಠದ ಚನ್ನಬಸವ ಶಿವಯೋಗಿಗಳ 153ನೇ ಸ್ಮರಣೋತ್ಸವ ಹಾಗೂ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯರು ಮಾತನಾಡಿ,ಧರ್ಮಸೇವೆ ಕಾಯಕ ಸೇವೆ ಇವೆರಡು ಭಕ್ತರ ಪ್ರಮುಖ ಸಾಧನೆಗಳೆಂದು ತಿಳಿಸಿದರು.
ಮಾಜಿ ಸಚಿವ ಬಿ.ಆರ್. ಯಾವಗಲ್ಲ ಮಾತನಾಡಿ, ಮಠಾಧೀಶರು ಧಾರ್ಮಿಕ, ವೈಚಾರಿಕತೆ ಪ್ರಚಲಿತಗೊಳಿಸುವ ಮೂಲಕ ಸದಾ ಭಕ್ತರಲ್ಲಿ ಧರ್ಮದ ಅರಿವು ನೀಡುತ್ತಾರೆ. ಸಾಮಾಜಿಕ ಸಮಾನತೆ ಮತ್ತು ಧರ್ಮದ ಪರಂಪರೆಯನ್ನು ನಾವೆಲ್ಲ ಉಳಿಸಿ ಬೆಳೆಸಿ ನಮ್ಮ ನಾಡಿನ ವಿಶೇಷತೆ ಮುಂದುವರೆಸಬೇಕಿದೆ ಎಂದು ಹೇಳಿದರು.
ಕೆಪಿಸಿಸಿ ಸಂಯೋಜಕ ಹಾಗೂ ಮಾಧ್ಯಮ ವಿಶ್ಲೇಷಕ ಡಾ| ಸಂಗಮೇಶ ಕೊಳ್ಳಿಯವರ ಮಾತನಾಡಿ, ಕಾಯಕ ಮತ್ತು ಧರ್ಮ ಕಾರ್ಯಗಳ ಮೂಲಕ ವಿರಕ್ತಮಠ ಶಿವಕುಮಾರ ಸ್ವಾಮಿಗಳು ಧರ್ಮ ಪರಂಪರೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ತಿಳಿಸಿದರು.
ಶಿವಯೋಗಿ ಶಿವಾಚಾರ್ಯರು, ಪ್ರವಚನಕಾರರಾದ ಅಂತೂರ ಬೆಂತೂರ ಕುಮಾರ ದೇವರು ಮಾತನಾಡಿದರು. ಕೊರೊನಾ ವಾರಿಯರ್ಸ್ ಪುರಸಭೆ ಪೌರ ಕಾರ್ಮಿಕರನ್ನು ಹಾಗೂ ಅನ್ನಪ್ರಸಾದ ಸೇವಾ ದಾನಿಗಳನ್ನು ಸತ್ಕರಿಸಲಾಯಿತು. ಸಾವಿರಾರು ಭಕ್ತ ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ನೆರವೇರಿತು. ವಿರಕ್ತಮಠದ ಶಿವಕುಮಾರ ಸ್ವಾಮಿಗಳು, ಈಶ್ವರಯ್ಯ ಹಿರೇಮಠ ಮುಂತಾದವರು ವೇದಿಕೆಯಲ್ಲಿದ್ದರು. ಶ್ರೀಮಠದ ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.
ಆರ್.ಬಿ. ಚಿನಿವಾಲರ ಹಾಗೂ ಚನ್ನು ನೀಲಗುಂದ ಕಾರ್ಯಕ್ರಮ ನಿರ್ವಹಿಸಿದರು.