ಸಾಮಾನ್ಯವಾಗಿ ಸಿನಿಮಾ ಪತ್ರಿಕಾಗೋಷ್ಠಿ ಅಂದಾಗ ಆ ಚಿತ್ರದ ನಾಯಕ,ನಾಯಕಿ ಮತ್ತು ಚಿತ್ರದಲ್ಲಿ ನಟಿಸಿರುವ ಕಲಾವಿದರು, ತಂತ್ರಜ್ಞರು ವೇದಿಕೆ ಮೇಲೆ ಕಾಣಿಸಿಕೊಳ್ಳೋದು ವಾಡಿಕೆ. ಆದರೆ, ತಂತ್ರಜ್ಞರಿಗಾಗಿಯೇ ಒಂದು ಪತ್ರಿಕಾಗೋಷ್ಠಿ ನಡೆಸಿ, ಸಿನಿಮಾ ಬಗ್ಗೆ ಹೇಳಿಕೊಳ್ಳುವ ಚಿತ್ರತಂಡ ವಿರಳ. ಹಾಗೆ ತಂತ್ರಜ್ಞರನ್ನೇ ಸೇರಿಸಿ ಮಾಧ್ಯಮ ಮುಂದೆ ಬಂದಿದ್ದು “ರಣಭೂಮಿ’ ಚಿತ್ರತಂಡ. ಒಂದು ಚಿತ್ರ ಶುರುವಿಗೆ ಮುನ್ನ, ಮೊದಲು ಸೇರಿಕೊಳ್ಳೋದು ತಂತ್ರಜ್ಞರು. ಅವರೆಲ್ಲಾ ಸೇರಿ ಕಥೆ, ಚಿತ್ರಕಥೆ ಇತ್ಯಾದಿ ಬಗ್ಗೆ ಚರ್ಚಿಸಿ, ಅಂತಿಮಗೊಳಿಸಿದ ಬಳಿಕ ನಾಯಕ, ನಾಯಕಿ ಇತರೆ ಕಲಾವಿದರು ಎಂಟ್ರಿಯಾಗುತ್ತಾರೆ. ಅದನ್ನು ಗಟ್ಟಿಯಾಗಿ ನಂಬಿರುವ ನಿರ್ದೇಶಕ ಚಿರಂಜೀವಿ ದೀಪಕ್, ತಮ್ಮ “ರಣಭೂಮಿ’ ಚಿತ್ರಕ್ಕೆ ಕೆಲಸ ಮಾಡಿದ ತಂತ್ರಜ್ಞರನ್ನು ಆಹ್ವಾನಿಸಿ, ಚಿತ್ರದ ಬಗ್ಗೆ ಹೇಳಿಕೊಂಡಿದ್ದು ವಿಶೇಷ.
ಇತ್ತೀಚೆಗೆ ಚಿತ್ರದ “ರಣಭೂಮಿ’ ಶೀರ್ಷಿಕೆಯ ಹಾಡಿನ ಜೊತೆಗೆ ಮೇಕಿಂಗ್ ತೋರಿಸುವ ಮೂಲಕ ಮಾತಿಗಿಳಿದರು ನಿರ್ದೇಶಕ ಚಿರಂಜೀವಿ ದೀಪಕ್. “ಇದು ನನ್ನ ಎರಡನೇ ಚಿತ್ರ. ಹಿಂದೆ “ಜೋಕಾಲಿ’ ಮಾಡಿದ್ದೆ. ಅದು ಹೆಚ್ಚು ಜನರಿಗೆ ತಲುಪಲಿಲ್ಲ. ಹಾಗಂತ ಬೇಸರಿಸಿಕೊಳ್ಳದೆ, ಮತ್ತೂಂದು ಹೊಸ ಪ್ರಯತ್ನ ಮಾಡಬೇಕು. ಈ ಚಿತ್ರರಂಗದಲ್ಲಿ ಗುರುತಿಸಿಕೊಂಡು ಗೆಲ್ಲಬೇಕು ಅಂದುಕೊಂಡಾಗ ಹುಟ್ಟುಕೊಂಡಿದ್ದೇ “ರಣಭೂಮಿ’ ಕಥೆ. ಈ ಕಥೆ ಹಿಡಿದು ನಿರ್ಮಾಪಕರಿಗೆ ಹುಡುಕಾಡಿದ್ದು ನಿಜ. ಕೊನೆಗೆ, ನಾನೇ ಯಾಕೆ ನಿರ್ಮಾಣಕ್ಕಿಳಿಯಬಾರದು ಅಂತ ನಿರ್ಧರಿಸಿದೆ. ನನ್ನೊಂದಿಗೆ ಮಂಜುನಾಥ ಪ್ರಭು, ಹೇಮಂತ್ ಸಾಥ್ ಕೊಟ್ಟರು. ಚಿತ್ರವನ್ನು ಯಶಸ್ವಿಯಾಗಿ ಮುಗಿಸಿ, ಈಗ ಡಿಟಿಎಸ್ ಹಂತದಲ್ಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿದೆ. ಮನುಷ್ಯ ಹುಟ್ಟು ಸಾವಿನ ನಡುವೆ ಏನೆಲ್ಲಾ ಮಾಡ್ತಾನೆ. ಸಾಧನೆ ಇಲ್ಲದೆ ಸತ್ತರ ಅವನ ಬದುಕು ವ್ಯರ್ಥ ಎಂಬ ಪರಿಕಲ್ಪನೆಯ ಚಿತ್ರಣ ಇಲ್ಲಿದೆ. ಒಟ್ಟಾರೆ ಹುಟ್ಟು ಅನಿವಾರ್ಯವಾದರೂ ಸಾವು ಚರಿತ್ರೆಯಾಗಬೇಕು ಅದೇ ಅಂಶ ಚಿತ್ರದಲ್ಲಿದೆ. ಚಿತ್ರದಲ್ಲಿ ಒಂದೇ ಹಾಡಿತ್ತು. ಚಿತ್ರಕ್ಕೆ ಹಿನ್ನೆಲೆ ಸಂಗೀತ ಕೊಡುವಾಗ ಪ್ರದೀಪ್ ವರ್ಮ, ಇಲ್ಲೊಂದು ಸಾಂಗ್ ಬೇಕೆನಿಸುತ್ತೆ, ಕಥೆಗೆ ತಕ್ಕ ಒಂದು ಶೀರ್ಷಿಕೆ ಗೀತೆ ಇದ್ದರೆ ಚೆನ್ನಾಗಿರುತ್ತೆ ಅಂದರು. ಒಳ್ಳೆಯ ಹಾಡು ಹುಟ್ಟುಕೊಂಡಿತು. ಪ್ರದೀಪ್ ವರ್ಮ ಅವರೇ ಹಾಡಿದ್ದಾರೆ. ಬಹುತೇಕ ಬೆಂಗಳೂರಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸ್ಮಶಾನದಲ್ಲೂ ರಾತ್ರಿ ವೇಳೆ ಶೂಟಿಂಗ್ ಮಾಡಿದ್ದು ವಿಶೇಷ ಅನುಭವ ಕಟ್ಟಿಕೊಟ್ಟಿದೆ. ಚಿತ್ರದಲ್ಲಿ ನಿರಂಜನ್ ಒಡೆಯರ್ ನಾಯಕರಾದರೆ, ಕಾರುಣ್ಯ ರಾಮ್ ನಾಯಕಿ. ಉಳಿದಂತೆ ಶೀತಲ್‌ಶೆಟ್ಟಿ, “ಭಜರಂಗಿ’ ಲೋಕಿ, ಡ್ಯಾನಿ ಕುಟ್ಟಪ್ಪ, ರಮೇಶ್‌ಭಟ್, ಮುನಿ ಇತರರು ನಟಿಸಿದ್ದಾರೆ. “ಭಜರಂಗಿ’ ಲೋಕಿ ಅವರಿಗೆ ಇಲ್ಲಿ ಪಾಸಿಟಿವ್ ಪಾತ್ರವಿದೆ’ ಎಂದು ವಿವರ ಕೊಟ್ಟರು ನಿರ್ದೇಶಕ ಚಿರಂಜೀವಿ ದೀಪಕ್.
ಸಂಗೀತ ನಿರ್ದೇಶಕ ಪ್ರದೀಪ್‌ವರ್ಮ ಅವರಿಗೆ, ಚಿತ್ರದಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆಯಂತೆ. ಸಿನಿಮಾಗೆ ಹಿನ್ನೆಲೆ ಸಂಗೀತ ಕೊಡಬೇಕು ಅಂದಾಗ, ಮೊದಲು ಚಿತ್ರ ನೋಡಿದೆ. ಅಲ್ಲೊಂದು ಥೀಮ್ ಬೇಕು ಅಂತ ನಿರ್ದೇಶಕರು ಹೇಳಿದಾಗ, ಒಂದು ಹಾಡನ್ನೇ ಮಾಡೋಣ ಅಂತ ಹೇಳಿದೆ. ಎಂಡ್ ಟೈಟಲ್ ಕಾರ್ಡ್‌ನಲ್ಲಿ ಆ ಹಾಡು ಬಳಸಬಹುದು ಅಂತ ಮೊದಲು ಟ್ರಾಕ್ ಹಾಡಿದ್ದೆ. ಕೊನೆಗೆ ನನ್ನ ಬಳಿಯೇ ಆ ಹಾಡನ್ನು ಹಾಡಿಸಿದ್ದಾರೆ. ಹಿನ್ನೆಲೆ ಸಂಗೀತಕ್ಕೆ ಸಮಯ ಕೊಡಬೇಕು ಅಂತ ಕೇಳಿಕೊಂಡೆ, ಸಿನಿಮಾ ಚೆನ್ನಾಗಿ ಬಂದಿದ್ದರಿಂದ ಕೂಲ್ ಆಗಿ ಕೆಲಸ ಮಾಡಬೇಕೆಂಬ ಉದ್ದೇಶ ನನ್ನದು. ಸಿನಿಮಾದಲ್ಲಿ ಎಲ್ಲವೂ ಪ್ಲಸ್ ಆಗಲಿವೆ ಎಂಬುದು ಪ್ರದೀಪ್ ವರ್ಮ ಮಾತು.
ಛಾಯಾಗ್ರಾಹಕ ನಾಗಾರ್ಜುನ್ ಅವರ ಪ್ರಕಾರ, ಶೀರ್ಷಿಕೆಯಷ್ಟೇ ಕಥೆಯೂ ಸ್ಟ್ರಾಂಗ್ ಆಗಿದೆಯಂತೆ. ನಿರ್ದೇಶಕರು ಕಥೆ ಹೇಳುವಾಗಲೇ, ಲೈಟಿಂಗ್ ಹೇಗೆಲ್ಲಾ ಇರಬೇಕು ಎಂಬ ಲೆಕ್ಕಾಚಾರ ಹಾಕಿದ್ದೆ. ಹಾಗೆಯೇ ಕೆಲಸ ಮಾಡಿದ್ದೇನೆ. ರೆಗ್ಯುಲರ್ ಚಿತ್ರಕ್ಕಿಂತ ಕೊಂಚ ಭಿನ್ನವಾಗಿರುವ ಚಿತ್ರವಿದು. ತಂತ್ರಜ್ಞರ ಶ್ರಮ ಇಲ್ಲಿ ಎದ್ದು ಕಾಣಲಿದೆ. ಕರ್ವ ವೆಂಕಿ ಅವರ ಸಂಕಲನ ಚಿತ್ರದ ಇನ್ನೊಂದು ಪ್ಲಸ್. ವಿಕ್ರಮ್ ಮೋರ್ ಸಾಹಸ ಚೆನ್ನಾಗಿದೆ. ಕಂಬಿರಾಜ್ ಅವರ ನೃತ್ಯ ಸಂಯೋಜನೆ ಹೊಸದಾಗಿದೆ ಎಂದು ಹೇಳಿಕೊಂಡರು ನಾಗಾರ್ಜುನ್.
ನಿರ್ಮಾಣದಲ್ಲಿ ಕೈ ಜೋಡಿಸಿರುವ ಮಂಜುನಾಥ್ ಪ್ರಭು ಮತ್ತು ಹೇಮಂತ್, ನಿರ್ದೇಶಕ ಬಾಲ್ಯದ ಗೆಳೆಯ. ಅವನ ಆಸೆಗೆ ನಾವು ಜೊತೆಯಾಗಿದ್ದೇವೆ. ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ ಬೇಕೆಂದರು. ಎಲ್ಲರೂ ಮಾತು ಮುಗಿಸುವ ಹೊತ್ತಿಗೆ ಸಮಯ ಮೀರಿತ್ತು. ಮಾತುಕತೆಗೂ ಬ್ರೇಕ್ ಬಿತ್ತು.