Advertisement

ಸಾರ್ವಜನಿಕ ಶೌಚಾಲಯದಲ್ಲೇ ಬದುಕು

09:09 AM Aug 05, 2018 | Team Udayavani |

ಶಿರ್ವ: ಇಲ್ಲೊಂದು ಶೌಚಾಲಯ. ಅದರೊಳಗೆ ಹೋಗುತ್ತಿದ್ದಂತೆ ಅಕ್ಕಪಕ್ಕದಲ್ಲಿ ದಿನಸಿ ಸಾಮಾನು, ಪಾತ್ರೆಪಗಡಿ, ಗೋಡೆಯಲ್ಲಿ ದೇವರ ಫೊಟೋ, ಉರಿಯುತ್ತಿರುವ ಅಗರಬತ್ತಿ! ಆಕಡೆ ಚಾಪೆ, ತಲೆದಿಂಬು, ತಿರುಗುವ ಟೇಬಲ್‌
ಫ್ಯಾನು. ಆದರೆ ಇದು ವಾಸದ ಮನೆಯಲ್ಲ, ನಿಜಕ್ಕೂ ಶೌಚಾಲಯ. 

Advertisement

ಬಹಿರ್ದೆಸೆಗೆ ಹೋಗಬೇಕಾದ ಜಾಗದಲ್ಲೇ ವ್ಯಕ್ತಿ ಅಡುಗೆ, ಊಟ, ನಿದ್ದೆ ಮಾಡುತ್ತ ವಾಸಿಸುತ್ತಿದ್ದರೆ ಹೇಗಿರಬೇಡ? ಇಂತಹ ವಿದ್ಯಮಾನ ಶಿರ್ವ ಗ್ರಾಪಂ ಕಚೇರಿ ಮತ್ತು ಬಸ್ಸು ನಿಲ್ದಾಣದ ಸನಿಹದ ಸಾರ್ವಜನಿಕ ಶೌಚಾಲಯದಲ್ಲಿ ಬೆಳಕಿಗೆ ಬಂದಿದೆ.   

ಬಿಹಾರಿ ವ್ಯಕ್ತಿಯ ಕಷ್ಟ
ಹೀಗೆ ಶೌಚಾಲಯದಲ್ಲೇ ಬದುಕು ಸಾಗಿಸುತ್ತಿರುವ ವ್ಯಕ್ತಿ ಬಿಹಾರ ಮೂಲದ ರಜಪೂತ ಕುಟುಂಬದ ದಿವಾಕರ್‌ ಸಿಂಗ್‌ (24). ಉದ್ಯೋಗ ಅರಸಿ ಇಲ್ಲಿಗೆ ಬಂದಿದ್ದ. ಆತನಿಗೆ 3 ವರ್ಷಗಳ ಹಿಂದೆ ಶೌಚಾಲಯ ಹೊರಗುತ್ತಿಗೆ ಪಡೆದುಕೊಂಡಿದ್ದ ವ್ಯಕ್ತಿಯೊಬ್ಬರು ನಿರ್ವಹಣೆಯ ಕೆಲಸ ನೀಡಿದ್ದರು. ಆತ ಆ ವ್ಯಕ್ತಿಯೊಂದಿಗೆ ನ್ಯಾರ್ಮದ ಬಳಿಯ ಮನೆಯೊಂದರಲ್ಲಿ ವಾಸವಾಗಿದ್ದರು. ಆದರೆ ನಷ್ಟ ಹೊಂದಿದ್ದರಿಂದ ದಿವಾಕರ್‌ಗೆ ಜವಾಬ್ದಾರಿ ವಹಿಸಿ ತೆರಳಿದ್ದರು. ಬಳಿಕ ಮನೆ ಬಾಡಿಗೆ 3 ಸಾವಿರ ರೂ. ಕಟ್ಟಲಾಗದೇ ಮನೆ ಖಾಲಿ ಮಾಡಬೇಕಾಯಿತು. ಎಲ್ಲಿಯೂ ಕಡಿಮೆ ಬಾಡಿಗೆ ಮನೆ ದೊರೆಯದೆ,  ಅಪರಿಚಿತ ವ್ಯಕ್ತಿಗೆ ಮನೆ ಕೊಡಲು ಯಾರೂ ಒಪ್ಪದ್ದರಿಂದ ಕಳೆದ 5 ತಿಂಗಳಿಂದ ಶೌಚಾಲಯದಲ್ಲೇ ವಾಸಿಸುವಂತಾಗಿದೆ.  

ಥೇಟ್‌ ಮನೆಯ ಲುಕ್‌! 
ದಿವಾಕರ್‌ ಶೌಚಾಲಯದಲ್ಲಿ ವಾಸಿಸುತ್ತಿರುವುದರಿಂದ ಒಳಗೆಲ್ಲ ಥೇಟ್‌ ಮನೆಯಂತೆ ವ್ಯವಸ್ಥೆ ಇದೆ. ದಿನಸಿ
ಸಾಮಾನು, ಪಾತ್ರೆಗಳು, ಅಡುಗೆಗೆ ಬೇಕಾದ ವಸ್ತುಗಳನ್ನು ಪೇರಿಸಿಟ್ಟಿದ್ದಾರೆ. 

ಮಲಗಲೂ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸಾಮಾನ್ಯರಿಗೆ ಇದು ಮನೆಯೋ? ಶೌಚಾಲಯವೋ ಎಂಬಂತೆ ಇದೆ. ಬೆಳಗ್ಗೆದ್ದು ಶೌಚಾಲಯ ಶುಚಿಗೊಳಿಸಿ, ತಿಂಡಿ ಮುಗಿಸಿ ಕುಳಿತರೆ, ರಾತ್ರಿಯಾಗುತ್ತಲೇ ಶೌಚಾಲಯ ತೊಳೆವ ದಿವಾಕರ್‌ ಅಡುಗೆ ತಯಾರಿ ಶುರು ಮಾಡುತ್ತಾರೆ. ಬಳಿಕ ಅಲ್ಲೇ ಮಲಗುವುದು ಆತರಿಗೆ ಅಭ್ಯಾಸವಾಗಿದ್ದು ಅದೇ ಮೆಚ್ಚುಗೆಯಾಗಿದೆ ಕೂಡ! 

Advertisement

ಅಡುಗೆ-ಊಟ-ನಿದ್ದೆ ಅಲ್ಲೇ!
ರಾತ್ರಿ ಶೌಚಾಲಯ ತೊಳೆದ ಬಳಿಕ ಅಲ್ಲಿಯೇ ಅಡುಗೆ ತಯಾರಿಸಿ, ಊಟ ಮಾಡಿ ಮಲಗುತ್ತಿರುವ ದಿವಾಕರ್‌ ಬದುಕು ತೀರ ದಯನೀಯವಾಗಿದೆ. ಹಗಲಿಡೀ ವಾಸನೆ ನಡುವೆ ಇದ್ದು, ರಾತ್ರಿ ಶುಚಿಗೊಳಿಸಲು ಹಾಕಿದ ರಾಸಾ ಯನಿಕದ ಘಾಟಿನಲ್ಲೇ ಮಲಗಬೇಕಾದ ಕಷ್ಟ ಆತನದ್ದು. 

ಮನವಿ ನೀಡಿದ್ದರೂ ಪ್ರಯೋಜನವಿಲ್ಲ
ವಾಸಕ್ಕೊಂದು ವ್ಯವಸ್ಥೆ ಮಾಡಿಕೊಡಿ ಎಂದು ಈಗಾಗಲೇ ದಿವಾಕರ್‌ ಶಿರ್ವ ಗ್ರಾ.ಪಂ.ಗೆ 2-3 ಬಾರಿ ಮೌಖೀಕವಾಗಿ ಮನವಿ ಮಾಡಿದ್ದಾರೆ. ಆದರೆ ಈತನ ಮನವಿಗೆ ಸ್ಪಂದನೆಯೇ ಇರಲಿಲ್ಲ. ಹೀಗಾಗಿ ಶೌಚಾಲಯದಲ್ಲೇ ಉಳಿಯುವಂತಾಗಿದೆ. ಜತೆಗೆ ವ್ಯಕ್ತಿಯೋರ್ವ ಮಾನವ ಹಕ್ಕುಗಳಿಂದ ವಂಚಿತವಾಗಿ ಹೀನಾಯ ಸ್ಥಿತಿಯಲ್ಲಿ ಬದುಕುವಂತಾಗಿದೆ.  

ಊಟಕ್ಕೂ ತತ್ವಾರ
ಶೌಚಾಲಯಕ್ಕೆ ಬಂದವರಿಂದ ವಸೂಲು ಮಾಡುವ ಶುಲ್ಕದಲ್ಲಿ ದಿನಕ್ಕೆ 250-300 ರೂ. ಸಂಗ್ರಹವಾಗುತ್ತಿದೆ. ಇದರಲ್ಲಿ ಬಹಳಷ್ಟು ನೀರು, ವಿದ್ಯುತ್‌ ಮತ್ತು ಸ್ವತ್ಛತೆಗೆ ಖರ್ಚಾಗುತ್ತಿದೆ. ಉಳಿದ ಚಿಲ್ಲರೆ ಹಣದಲ್ಲಿ ಆತ ಜೀವನ ನಿರ್ವಹಣೆ ಮಾಡಬೇಕಿದೆ. ಕೆಲವೊಮ್ಮೆ ಊಟಕ್ಕೂ ಇಲ್ಲದ ಪರಿಸ್ಥಿತಿ ಇದೆ. ಹೀಗಿರುವಾಗ ಬಾಡಿಗೆ ಮನೆ ಮಾಡುವುದು ಸಾಧ್ಯವೆ? ನಮ್ಮಂಥವರಿಗೆ ಯಾರು ಬಾಡಿಗೆ ಮನೆ ಕೊಡುತ್ತಾರೆ? ಎನ್ನುವುದು ಸಿಂಗ್‌ ಅವರ ಪ್ರಶ್ನೆ.

ಕಿತ್ತು ತಿನ್ನುವ ಬಡತನ 
ದಿವಾಕರ್‌ ಅವರ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮನೆಯಲ್ಲಿ ತಂದೆ-ತಾಯಿ, ಮೂವರು ಸಹೋದರರು ಹಾಗೂ ಓರ್ವ ಸಹೋದರಿ ಇದ್ದಾರೆ. ಸ್ವಲ್ಪ ಭೂಮಿ ಇದ್ದರೂ ತಕರಾರು ಇರುವುದರಿಂದ ಬಳಕೆ ಸಾಧ್ಯವಿಲ್ಲ. ಹಿರಿಯ ಮಗನಾಗಿ ದುಡಿಯಲು ಬಂದಿದ್ದೇನೆ. ಇಲ್ಲಿ ನನ್ನ ಜೀವನ ನಿರ್ವಹಣೆಯೇ ಕಷ್ಟವಾಗಿದೆ.  ಮನೆಗೆ ಎಲ್ಲಿಂದ ಹಣ ಕಳುಹಿಸಲಿ ಎಂಬುದು ದಿವಾಕರ್‌ ಅಳಲು. ಉಳಿಯಲು ಬೇರೆ ಅವಕಾಶವೂ ಇಲ್ಲದಿರುವುದರಿಂದ ಆತ ಬೇರೆ ಕೆಲಸದ ಆಲೋಚನೆ ಮಾಡುವುದೂ ಕಷ್ಟವಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next