Advertisement

ಬಲೂನ್‌ ಸ್ಫೋಟಕ್ಕೆ ಬದುಕು ಬರಡು

06:55 AM Jun 15, 2018 | Team Udayavani |

ಮಂಡ್ಯ/ಶ್ರೀರಂಗಪಟ್ಟಣ: ಕೊಟ್ಟ ಮಾತು ತಪ್ಪುವುದರಲ್ಲಿ, ಅದರಲ್ಲೂ ಚುನಾವಣಾ ವೇಳೆ ನೀಡುವ ಭರವಸೆ ಮರೆಯುವವರಲ್ಲಿ ರಾಜಕಾರಣಿಗಳು ನಿಸ್ಸೀಮರು ಎಂಬುದಕ್ಕೆ ಇಲ್ಲೊಂದು ನೈಜ ಉದಾಹರಣೆ ಇದೆ…!

Advertisement

ಅದು ಮಾ.23. ವಿಧಾನಸಭಾ ಚುನಾವಣೆ ಕಾವೇರಿದ್ದ ಸಮಯ. ಶ್ರೀರಂಗ ಪಟ್ಟಣಕ್ಕೆ ಆಗಮಿಸುತ್ತಿದ್ದ
ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸ್ವಾಗತಕ್ಕೆ ಸಂತೆ ಮೈದಾನದಲ್ಲಿ ನಿರ್ಮಿಸುತ್ತಿದ್ದ ನೈಟ್ರೋಜನ್‌ ಬಲೂನ್‌ವೊಂದು
ಗಾಳಿಯ ಒತ್ತಡಕ್ಕೆ ಸ್ಫೋಟಗೊಂಡು 11 ಮಕ್ಕಳು ಗಾಯಗೊಂಡಿದ್ದರು. ಅಂದು ರಾಹುಲ್‌ ಗಾಂಧಿ ಅವರ
ಮುಂದೆಯೇ ಈ ಎಲ್ಲಾ ಮಕ್ಕಳಿಗೆ ತಲಾ 25 ಸಾವಿರ ಪರಿಹಾರ ನೀಡುವುದಾಗಿ ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಇದುವರೆಗೂ ಇತ್ತ ಸುಳಿದಿಲ್ಲ.

ಪರಿಹಾರದ ಮಾತಂತೂ ಇಲ್ಲವೇ ಇಲ್ಲ!
ಶಾಲೆಗೂ ಹೋಗಿಲ್ಲ: ಗಾಯಗೊಂಡ ಮಕ್ಕಳಲ್ಲಿ 9ನೇ ತರಗತಿ ಓದುತ್ತಿದ್ದ ಮಾದೇಶ್‌ ಎಂಬಾತನಿಗೆ ತೀವ್ರ
ಸುಟ್ಟಗಾಯಗಳಾಗಿತ್ತು. ಹಣೆ, ಕೆನ್ನೆ, ಎರಡೂ ಕೈಗಳು, ಎದೆಯ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿವೆ. 
ಇಂದಿಗೂ ಆತನಿಗೆ ಬಟ್ಟೆ ಹಾಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶಾಲೆಗೂ ಹೋಗಲಾಗದೆ  ಮನೆಯಲ್ಲೇ 
ಉಳಿದುಕೊಂಡಿದ್ದಾನೆ. ಈತನ ಚಿಕಿತ್ಸಾ ವೆಚ್ಚ ಭರಿಸುವ ಶಕ್ತಿಯೂ ಹೆತ್ತವರಿಗಿಲ್ಲ. ಏನೂ ಅರಿಯದ ತನ್ನ
ಕಂದಮ್ಮನಿಗಾದ ಈ ದುಃಸ್ಥಿತಿ ನೆನೆದು ಹೆತ್ತ ತಾಯಿ ಹಿಡಿಶಾಪ ಹಾಕುತ್ತಿದ್ದಾಳೆ.

ತಂದೆಯದ್ದು ಗಾರೆ ಕೆಲಸ: ಪಟ್ಟಣದ ಕಾವೇರಿಪುರ ಬಡಾವಣೆಯಲ್ಲಿ ವಾಸವಾಗಿರುವ ಮಾದೇಶ್‌ ತಂದೆ
ಕುಮಾರ್‌ ಗಾರೆ ಕೆಲಸ ಮಾಡುತ್ತಿದ್ದು, ತಾಯಿ ಭಾಗ್ಯಮ್ಮ ಗೃಹಿಣಿಯಾಗಿದ್ದಾರೆ. ಮಗನಿಗೆ ಚಿಕಿತ್ಸೆ ಕೊಡಿಸಲು ದಂಪತಿ
ಪರದಾಟ ಹೇಳತೀರದಾಗಿದೆ. ಚಿಕಿತ್ಸಾ ವೆಚ್ಚ ದುಬಾರಿಯಾಗಿದ್ದೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಒಂದೆಡೆ ಸುಟ್ಟಗಾಯದಿಂದ ನರಳುತ್ತಿರುವ ಮಗನ ಸಂಕಟ ನೋಡಲಾಗದೆ, ಇನ್ನೊಂದೆಡೆ ಚಿಕಿತ್ಸೆಗೆ ತಗಲುವ
ವೆಚ್ಚವನ್ನೂ ಭರಿಸಲಾಗದೆ ಪರಿತಪಿಸುತ್ತಿದ್ದಾರೆ. ಈ ಕುಟುಂಬಕ್ಕೆ ಆರ್ಥಿಕ ನೆರವು ಬೇಕಾಗಿದೆ.

ನಮ್ಮದು ಕೂಲಿ ಕಾರ್ಮಿಕ ಕುಟುಂಬ. ಮಗ ಸುಟ್ಟ ಗಾಯಗಳಿಂದ ನರಳುತ್ತಿದ್ದಾನೆ. ಅದನ್ನು ನೋಡಲಾಗುತ್ತಿಲ್ಲ. ಚಿಕಿತ್ಸೆ ಕೊಡಿಸುವುದಕ್ಕೂ ನಮ್ಮ ಬಳಿ ಹಣವಿಲ್ಲ. ಪರಿಹಾರ ಕೊಡುವುದಾಗಿ ಹೇಳಿದವರು ಯಾರೂ ನಮ್ಮ ಕಡೆ ತಿರುಗಿ ನೋಡುತ್ತಿಲ್ಲ.
– ಭಾಗ್ಯಮ್ಮ, ಬಾಲಕನ ತಾಯಿ

Advertisement
Advertisement

Udayavani is now on Telegram. Click here to join our channel and stay updated with the latest news.

Next