ಹೂ ಕೋಸಿನ ಪರಿಚಯವಿಲ್ಲದ ಜನರೇ ಇಲ್ಲ ಅನ್ನಬಹುದು. ಇದು ರಾಜ್ಯದ ಸಾವಿರಾರು ರೈತರ ಪಾಲಿಗೆ ಕಾಸು ನೀಡುವ ತರಕಾರಿ. ಈ ಬೆಳೆಯ ಬಗ್ಗೆ ಸರಿಯಾದ ಮಾಹಿತಿ ಇದ್ದರಷ್ಟೇ ಬೆಳೆಯುವತ್ತಾ ಒಲವು ತೋರಬಹುದಾಗಿದೆ. ಒಂಚೂರು ಅನುಭವದ ಕೊರತೆಯಾದರೂ ನಷ್ಟ ಕಟ್ಟಿಟ್ಟ ಬುತ್ತಿ. ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಹುಬೇಡಿಕೆ ಗಳಿಸಿರುವ ಕೋಸನ್ನು ಬೆಳೆದೇ ಸುಂದರ ಬದುಕನ್ನು ಕಟ್ಟಿಕೊಂಡ ಬ್ಯಾಟಪ್ಪ ಬಂಗಾರಪೇಟೆಯವರು ಕಥೆ ಕೇಳಿ.
ಬ್ಯಾಟಪ್ಪ ಬಂಗಾರುಪೇಟೆ ತಾಲೂಕಿನ ಸಿದ್ದರಹಳ್ಳಿಯವರು. ಇವರು ಒಂದು ಎಕರೆಯಲ್ಲಿ ಬೆಳೆದಿರುವ ಇಪ್ಪತ್ತು ಸಾವಿರ ಬುಡಗಳು ಪ್ರತಿ ವರ್ಷ ಒಂದೂವರೆ ಲಕ್ಷ ರೂಪಾಯಿ ಆದಾಯವನ್ನು ನೀಡುತ್ತಿವೆ. ಇವರ ನಾಟಿ ವಿಧಾನ ಇತರರಿಗಿಂತ ಭಿನ್ನ. ಉಳುಮೆ ಮಾಡಿ ನಂತರ ಗದ್ದೆಗೆ ಸಾವಯವ ಗೊಬ್ಬರವನ್ನು ಬೆರೆಸುತ್ತಾರೆ. ಒಂದು ವಾರಗಳ ಕಾಲ ಭೂಮಿಗೆ ಹನಿ ನೀರಾವರಿಯನ್ನು ನೀಡಿ ಭೂಮಿಯಲ್ಲಿ ತೇವಾಂಶವನ್ನು ಉಳಿಸಿಕೊಳ್ಳುತ್ತಾರೆ. ನಂತರ, ಸಸಿಯೊಂದಕ್ಕೆ ಅರವತ್ತು ಪೈಸೆಯಂತೆ ನೀಡಿ ಪಕ್ಕದ ಬೆಳೆಗಾರನೋರ್ವ ಸೂಚಿಸಿದ ನರ್ಸರಿಯೊಂದರಿಂದ ಸ್ಥಳೀಯ ತಳಿಯ ಖರೀದಿಸಿ ತಂದಿದ್ದಾರೆ. ಬೆಳಗ್ಗೆ ಬೇಗ ಎದ್ದು ಸೂರ್ಯನ ಕಿರಣ ಸೋಕುವ ಮುನ್ನ ಎರಡು ಅಡಿ ಅಂತರ ಬಿಟ್ಟು ಸಾಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಸಸಿಯಿಂದ ಸಸಿಗೆ ಒಂದು ಅಡಿ ಅಂತರ ಬಿಟ್ಟು ಜೂನ್‌ನಲ್ಲಿ ನಾಟಿ ಮಾಡಿದ್ದಾರೆ.
ಎರಡು ದಿನಕ್ಕೊಮ್ಮೆ ಎರಡು ಗಂಟೆಗಳ ಕಾಲ ಹನಿ ನೀರಾವರಿ ವಿಧಾನದ ಮೂಲಕ ಸಸಿಗಳಿಗೆ ನೀರುಣಿಸಿದ್ದಾರೆ. ತಿಂಗಳಿಗೆ ಒಂದು ಬಾರಿ ರಾಸಾಯನಿಕ ಗೊಬ್ಬರ ನೀಡಿದರೆ, ವಾರದಲ್ಲೆರಡು ಬಾರಿ ಹನಿ ನೀರಾವರಿ ಪೈಪ್ ಮೂಲಕ ಸಾವಯವ ಗೊಬ್ಬರವನ್ನು ನೀಡಿದ್ದರಿಂದ ಪಕ್ಕದ ಗದ್ದೆಯಲ್ಲಿರುವ ಕೋಸಿಗಿಂತ ನಾಲ್ಕು ದಿನ ಮುಂಚಿತವಾಗಿಯೇ ಬೆಳೆ ಕೈಗೆ ಬಂದಿದೆ. ಹದಿನೈದು ದಿನದ ಕಾಯಿಯಿಂದ ಆರಂಭವಾಗಿ ಈ ಬೆಳೆ ಮಾರಾಟಕ್ಕೆ ಸಿದ್ಧವಾಗುವ ಎಪ್ಪತ್ತೆ„ದನೇ ದಿನದವರೆಗೂ ಕೋಸಿಗೆ ಕೀಟ, ಹುಳಗಳು ಬಾಧಿಸದಂತೆ ಜಾಗರೂಕತೆ ವಹಿಸಬೇಕಾದುದು ಇಲ್ಲಿ ಮುಖ್ಯ. ವಾರದಲ್ಲೊಂದು ಬಾರಿ ಕೀಟನಾಶಕ ಸಿಂಪಡಿಸುವ ಮೂಲಕ ಹಸಿರು ಹುಳದ ಬಾಧೆ ಬೆಳೆಗೆ ತಾಗದಂತೆ ನೋಡಿಕೊಂಡಿದ್ದಾರೆ. ಎಲೆ ಮತ್ತು ಹೂವನ್ನು ಜೊತೆಗೇ ಕಟಾವು ಮಾಡಲಾಗುತ್ತದೆ. ಕಟಾವಾದ ನಂತರ ಹದಿನೈದು ದಿನಗಳವರೆಗೆ ಹೂವು ಹಾಳಾಗದಿರುವುದು ಇದರ ವಿಶೇಷ. ಒಂದು ಬುಡದಲ್ಲಿ ಒಂದೇ ಹೂವು ಬರುತ್ತದೆ. ಒಂದೊಂದು ಕೋಸು ಒಂದರಿಂದ ಒಂದುವರೆ ಕೆ.ಜಿ. ತೂಗುತ್ತಿದ್ದು ಕೆ.ಜಿ.ಗೆ ಹದಿನೈದರಿಂದ ಇಪ್ಪತ್ತು ರೂ. ಬೆಲೆ ಇದೆ . ಕೋಲಾರದ ವ್ಯಾಪಾರಿಗಳು ಗದ್ದೆಗೆ ಬಂದು ಖರೀದಿ ಮಾಡುತ್ತಾರೆ. ಒಂದು ಎಕರೆಯಲ್ಲಿ ನಾಟಿಗೆ ಎಲ್ಲಾ ಖರ್ಚು ಸೇರಿ ರೂ. 60 ಸಾವಿರ ಖರ್ಚು ತಗಲಿದರೆ ಇವರು ಅದರಿಂದ ಒಂದುವರೆ ಲಕ್ಷ ರೂ. ಆದಾಯವನ್ನು ಪಡೆಯುವ ಮೂಲಕ ಮಾದರಿ ಬೆಳೆಗಾರರೆನಿಸಿಕೊಂಡಿದ್ದಾರೆ.
ಕೋಸು ತೆಗೆದ ನಂತರ ಕೊತ್ತಂಬರಿ, ಕ್ಯಾಬೇಜ್ ಹೀಗೆ ಋತುಗಳಿಗನುಗುಣವಾಗಿ ಬಹು ವಿಧದ ತರಕಾರಿಗಳನ್ನು ಬೆಳೆಯುವುದು ಇವರ ಜಾಣತನ. ಮಾಹಿತಿಗೆ- 8453649944. (ರಾತ್ರಿ 7ರಿಂದ 8 ಮಾತ್ರ)
ಚಂದ್ರಹಾಸ ಚಾರ್ಮಾಡಿ