ಬೆಳ್ತಂಗಡಿ: ಭಾವನೆಗಳಿಲ್ಲದ ಯಂತ್ರಸ್ಥಿತಿಯತ್ತ ನಾವು ಹೊರಳುತ್ತಿದ್ದೇವೆ. ನಮ್ಮ ಒಳಗೆ ಮತ್ತು ಹೊರಗೆ ಸಂಸ್ಕೃತಿಯ ನಾಶ ಆಗುತ್ತಿದೆ. ಇದರಿಂದ ಮುಕ್ತರಾಗಲು ನಮ್ಮೊಳಗಿನ ಯಂತ್ರಗಳನ್ನು ಬದಿಗಿಟ್ಟು ಸಾಹಿತ್ಯದೆಡೆಗೆ ಒಲವು ಹರಿಸಬೇಕು ಎಂದು ಸಾಹಿತಿ, ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ| ನರೇಂದ್ರ ರೈ ದೇರ್ಲ ಅವರು ಹೇಳಿದರು.
ಅವರು ಇಲ್ಲಿನ ಶ್ರೀ ಗುರುನಾರಾಯಣ ಸಭಾಭವನದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕ, ಶೀÅ ಗುರುದೇವ ಎಜುಕೇಶನಲ್ ಟ್ರಸ್ಟ್ ಮತ್ತು ಶೀÅ ಗುರುದೇವ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆದ ಡಾ| ಟಿ. ಎನ್. ತುಳಪುಳೆ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಸಂಗೀತ, ಸಾಹಿತ್ಯ, ಕೃಷಿಗೆ ಮಾತ್ರ ನಮ್ಮನ್ನು ನಾವು ಮರೆಸುವ ಶಕ್ತಿ ಇದೆ. ನಾವು ಅನಗತ್ಯ ವಾಚಾಳಿಗಳಾಗುತ್ತಿದ್ದೇವೆ. ವರ್ತಮಾನಕ್ಕೆ ಬೇಕಾದುದು ಮೌನ ವಿನಾ ವಾಚಾಳಿಯಲ್ಲ. ಈ ಮೌನವು ಸಂಗೀತ, ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದರು.
ಕಲಾಶಿಕ್ಷಕ, ಕರ್ನಾಟಕ ನೃತ್ಯ ಕಲಾ ಪರಿಷತ್‌ನ ಅಧ್ಯಕ್ಷ ಕಮಲಾಕ್ಷ ಆಚಾರ್ ಅವರನ್ನು ಸಮ್ಮಾನಿಸಲಾಯಿತು. ಡಾ| ಟಿ.ಎನ್. ತುಳಪುಳೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಸಮ್ಮಾನಪತ್ರ ವಾಚಿಸಿದರು.
ಗುರುದೇವ ಕಾಲೇಜಿನ ಪ್ರಾಚಾರ್ಯ ಎ. ಕೃಷ್ಣಪ್ಪ ಪೂಜಾರಿ ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್‌ನ ಗೌ| ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ಕಾರ್ಯಕ್ರಮ ನಿರ್ವಹಿಸಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ| ಎಂ. ಪಿ. ಶ್ರೀನಾಥ್ ವಂದಿಸಿದರು.