Advertisement

ಸಾಹಿತಿ ಪ್ರೊ|ಎಂ.ರಾಮಚಂದ್ರ ವಿಧಿವಶ

11:13 PM Dec 20, 2019 | Lakshmi GovindaRaj |

ಕಾರ್ಕಳ: ಸಾಹಿತಿ, ಸಂಘಟಕ, ಕನ್ನಡ ಸಾಹಿತ್ಯ ಪರಿಚಾರಕ ಪ್ರೊ|ಎಂ.ರಾಮಚಂದ್ರ (80) ಅವರು ಶುಕ್ರವಾರ ಬೆಳಗಿನ ಜಾವ ಕಾರ್ಕಳದ ತಮ್ಮ ತೆಳ್ಳಾರು ಮನೆಯಲ್ಲಿ ಹೃದಯಾಘಾತ ದಿಂದ ವಿಧಿವಶರಾದರು. ಕಾರ್ಕಳ ಸಾಹಿತ್ಯ ಸಂಘದ ಸಂಸ್ಥಾಪಕರಾಗಿ, ಸಾಹಿತ್ಯ, ಕಲೆಗೆ ಸಂಬಂಧಿಸಿದ ಸುಮಾರು 500ಕ್ಕಿಂತಲೂ ಅಧಿಕ ಕಾರ್ಯಕ್ರಮ ಆಯೋಜಿಸಿರುವ ಎಂ.ರಾಮಚಂದ್ರ ಅವರು, ಸಾಹಿತ್ಯ ಲೋಕದಲ್ಲಿ ಎಂ.ಆರ್‌.ಎಂದೇ ಚಿರಪರಿಚಿತರು. ಮೃತರು ಪತ್ನಿ ಶಾರದಾ, ಪುತ್ರ ಕೃಷ್ಣರಾಜ್‌, ರಾಜುಮೋಹನ್‌ ಅವರನ್ನು ಅಗಲಿದ್ದಾರೆ.

Advertisement

ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಪ್ರೊ|ಎಂ.ರಾಮಚಂದ್ರ ಅವರ ಹೆಸರನ್ನು ಪರಿಗಣಿಸಲಾಗಿತ್ತು. ಜ.8ರಂದು ರಾಜ್ಯ ಸರಕಾರದ ವತಿಯಿಂದ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭ ದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಬೇಕಿತ್ತು. 1939ರಲ್ಲಿ ಸುಳ್ಯ ತಾಲೂಕಿನ ಮಂಡೇಕೋಲಿನಲ್ಲಿ ಜನಿಸಿದ ಎಂ.ರಾಮಚಂದ್ರ ಅವರು, 1962ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾ ನಿಲಯದಲ್ಲಿ ಕನ್ನಡ ಎಂ.ಎ.ಪದವಿ ಪಡೆದರು. ಬಳಿಕ, ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ 35 ವರ್ಷ ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ 1997ರಲ್ಲಿ ನಿವೃತ್ತರಾದರು.

ಲೇಖಕರಾಗಿಯೂ ಗುರುತಿಸಿಕೊಂಡಿರುವ ಎಂ.ಆರ್‌.ಅವರ ಅನೇಕ ಲೇಖನಗಳು “ಉದಯವಾಣಿ’ ದಿನಪತ್ರಿಕೆ, ತರಂಗ, ತುಷಾರದಲ್ಲಿ ಪ್ರಕಟಗೊಂಡಿವೆ. ಸುಮಾರು 20 ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಮಣಿಪಾಲ ಅಕಾಡೆಮಿಯ ಸುವರ್ಣ ಮಹೋತ್ಸವ ಪುರಸ್ಕಾರ, ಪೇಜಾವರ ಮಠದ ರಾಮಸೇವಾ ವಿಠಲ ಪ್ರಶಸ್ತಿ, ಎಸ್‌.ವಿ. ಪರಮೇಶ್ವರ ಭಟ್‌ ಪ್ರಶಸ್ತಿ, ಆಳ್ವಾ ನುಡಿಸಿರಿ ಪ್ರಶಸ್ತಿ, ಏರ್ಯ ಬೀಡು ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next