Advertisement
ಮೈಸೂರಿನಲ್ಲಿ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ನಡೆದು ವಿವಿಧ ಗೋಷ್ಠಿಗಳ ವರದಿಗಳು ಬಂದಿವೆ. ಸಮ್ಮೇಳನದ ಸರ್ವಾಧ್ಯಕ್ಷ ಚಂದ್ರಶೇಖರ ಪಾಟೀಲರು ಕನ್ನಡದ ಒಂದು ಪತ್ರಿಕೆಯ ಸುದ್ದಿ ತಲೆಬರಹವನ್ನೇ ಬಳಸಿ ಹೇಳುವುದಾದರೆ ಈ ಸಾಹಿತ್ಯ ಸಮ್ಮೇಳನದ ವೇದಿಕೆಯಿಂದ “ರಾಜಕೀಯ ಕಹಳೆ’ ಊದಿದ್ದಾರೆ. ಸಾಹಿತ್ಯ ಸಮ್ಮೇಳನಗಳ ವೇದಿಕೆ ರಾಜಕೀಯ ವೇದಿಕೆಯಾಗಿ ಪರಿವರ್ತಿತ ವಾಗಿರುವುದು ಇದು ಮೊದಲೇನಲ್ಲ. ಈ ಹಿಂದಿನ ಸಮ್ಮೇಳನಗಳ ಅನೇಕ ಗೋಷ್ಠಿಗಳ ಭಾಷಣಗಳು ರಾಜಕೀಯ ಗಮಲುಗಳಿಂದಲೇ ಕೂಡಿ ಜುಗುಪ್ಸೆ ಮೂಡಿಸುತ್ತಿದ್ದುದನ್ನು ನಾವೆಲ್ಲ ಗಮನಿಸಿದ್ದೇವೆ. ಆದರೆ ಸಮ್ಮೇಳನದ ಸರ್ವಾಧ್ಯಕ್ಷರೇ ಈ ಸಮ್ಮೇಳನದಲ್ಲಿ ಈ ಪ್ರವೃತ್ತಿಗೆ ರಾಜಾರೋಷವಾದ “ಕಹಳೆ ನಾಂದಿ’ಯ ಮರ್ಯಾದೆ ನೀಡಿರುವುದು ಇದೇ ಮೊದಲು.
Related Articles
Advertisement
ಆದರೆ ದಲಿತ- ಬಂಡಾಯಗಳೆಂಬವು ಬಂದ ಮೇಲೆ ನುಡಿಯ ಕಳಕಳಿ ಹಿನ್ನೆಲೆಗೆ ಸರಿದು, ನಾಡಿನ ಹಿತದ ಹೆಸರಿನಲ್ಲಿ ನೆಲ-ಜಲ- ಸಮಾಜ-ಇತಿಹಾಸಗಳ ಹೆಸರಲ್ಲಿ ಸಾಹಿತ್ಯೇತರ ಗೋಷ್ಠಿಗಳು ಆರಂಭವಾದವು. ಇಂತಹ ಗೋಷ್ಠಿಗಳಿಗೆ ವೇದಿಕೆ ಗಿರಾಕಿಗಳು ಜಾಸ್ತಿಯಾದುದರಿಂದ ಸಮಾನಾಂತರ ವೇದಿಕೆ ಎಂಬ ಹೆಸರಿನಲ್ಲಿ ಮತ್ತಷ್ಟು “ಸಾಮಾಜಿಕ ಕಳಕಳಿ’ಯ ಗೋಷ್ಠಿಗಳು ಆರಂಭವಾದವು. ಇದರ ಜತೆಗೇ ಒಂದು-ಎರಡು- ಮೂರು-ನಾಲ್ಕು ಕವಿಗೋಷ್ಠಿ ಗಳೂ ಆರಂಭವಾದವು. ಇದರ ಪರಿಣಾಮ ಸಾಹಿತ್ಯ ಸಮ್ಮೇಳನವೆಂಬುದು ಒಳ್ಳೆಯ ಅರ್ಥದಲ್ಲಿ ಜಾತ್ರೆ ಎಂಬಂತಿದ್ದುದು ಈಗ ಕೆಟ್ಟ ಅರ್ಥದ ಸಂತೆಯಾಗಿ ಹೋಗಿ, ಸಾಹಿತ್ಯ ಹಿನ್ನೆಲೆಗೆ ಸರಿಯಿತು. ಸಾಹಿತ್ಯ ಹಿನ್ನೆಲೆಗೆ ಸರಿದಂತೆ ಗೋಷ್ಠಿಗಳ ಮರ್ಯಾದೆಯೂ ಇಲ್ಲವಾಯಿತು. ರಾಜಕೀಯ ಪುಢಾರಿಗಳೆಲ್ಲ ಸಾಹಿತ್ಯ ಸಮ್ಮೇಳನಗಳಿಗೆ ಬಂದು ತಮ್ಮ ಬಡಾಯಿ ಭಾಷಣಗಳನ್ನೂ, ದಂಡಿ ದಂಡಿಯಾಗಿ ರಾಜಕೀಯ ಕ್ಲೀಷೆಗಳ ಕವಿತಾ ವಾಚನಗಳನ್ನೂ ಆರಂಭಿಸುವಂತಾಯಿತು.
ಇದೆಲ್ಲ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲೇ ಏಕೆ ಎಂದು ಈಗ ಯಾರೂ ಕೇಳುವುದಿಲ್ಲ! ಕೇಳಿದರೆ ಅಪ್ಪಟ ಸಾಹಿತ್ಯವೆಂಬುದು ಎಲ್ಲೂ ಇಲ್ಲ ಎಂಬ ಅಸಂಬದ್ಧ ಉತ್ತರ ಬರುತ್ತದೆ. ಆದರೆ ಈ ಪ್ರಶ್ನೆಯನ್ನು ಏಕೆ ಕೇಳಬೇಕಾಗಿದೆ ಎಂಬುದನ್ನು ಚಂಪಾ ಅವರ ಅಧ್ಯಕ್ಷ ಭಾಷಣ ಸ್ಪಷ್ಟಪಡಿಸುವಂತಿದೆ. ಅಪ್ಪಟ ಸಾಹಿತ್ಯವೆಂಬುದಿಲ್ಲ ನಿಜ. ಹಾಗೆಂದು ಅದರ ಅರ್ಥವನ್ನು ಅಸಂಬದ್ಧವಾಗಿ ವಿಸ್ತರಿಸುತ್ತಾ ಹೋದರೆ, ಅದರ ಅರ್ಥ ಔಚಿತ್ಯ ಮೀರಿ ಹೀಗೆ ಅಶ್ಲೀಲವಾಗುತ್ತಾ ಹೋಗುತ್ತದೆ. ಸಾಹಿತ್ಯ ಎಂಬುದು ಸಂಸ್ಕೃತಿ ಎಂಬ ಪರಿಕಲ್ಪನೆಯ ವ್ಯಾಪ್ತಿಗೆ ಬರುವಂತಹದ್ದು. ಹಾಗಾಗಿ ಅದು ಸಾಹಿತ್ಯದ ಅರ್ಥವನ್ನು ಎಷ್ಟರವರೆಗೆ ವಿಸ್ತರಿಸಬಹುದು ಎಂಬುದನ್ನು ಸೂಚಿಸುತ್ತದೆ. ಕುವೆಂಪು-ಕಾರಂತ-ಅಡಿಗ-ಅನಂತಮೂರ್ತಿ-ತೇಜಸ್ವಿ-ಲಂಕೇಶ್-ದೇವನೂರ ಮಹಾದೇವ ಅವರ ವರೆಗೆ ಸಾಹಿತ್ಯದಲ್ಲಿ ರಾಜಕೀಯ ಪ್ರಜ್ಞೆ ಇಣುಕುವ ಪರಿಯನ್ನು ಕನ್ನಡಿಗರು ಗಮನಿಸಿದ್ದಾರೆ; ಮೆಚ್ಚಿದ್ದಾರೆ. ಅಲ್ಲಿ ಅದು ಸಾಹಿತ್ಯದ ಮರ್ಯಾದೆಯನ್ನು ಮೀರದೆ, ಸಗಟು ರಾಜಕೀಯ ಪರಿಭಾಷೆಗೆ ಹೊರಳದೆ ತನ್ನ ಸಾಂಸ್ಕೃತಿಕ ಘನತೆಯನ್ನು ಕಾಪಾಡಿಕೊಂಡಿದೆ. ಚಂಪಾ ಅವರ ಭಾಷಣವೋ ನೇರವಾಗಿ ಚುನಾವಣಾ ರಾಜಕೀಯ ಪರಿಭಾಷೆಗೇ ಇಳಿದುಬಿಟ್ಟಿದೆ.
ಆದರೆ ಚಂಪಾರನ್ನು ಕೇಳಿ ನೋಡಿ. ಜನ ತಮ್ಮ ನಾಡು-ನುಡಿಯ ಹಿತದೃಷ್ಟಿಯಿಂದ ರಾಜಕೀಯವಾಗಿ ಯಾರನ್ನು ಆಯ್ಕೆ ಮಾಡಿ ಕೊಳ್ಳಬೇಕೆಂದು ಸೂಚಿಸುವ ಹಕ್ಕು ಸಮ್ಮೇಳನಾಧ್ಯಕ್ಷರಿಗೆ ಇದೆ ಎಂದು ಘಂಟಾಘೋಷವಾಗಿ ಹೇಳಿಯಾರು! ಆ ಧೈರ್ಯ, ವಿಶ್ವಾಸ ಅವರಿಗೆ ಬಂದಿರುವುದೇ ಅವರೇ ಹೇಳುವಂತೆ, ಬಂಡಾಯ- ದಲಿತ ಚಳವಳಿಗಳು ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ರಾಜಕೀಯ ಸಮ್ಮೇಳನಗಳನ್ನಾಗಿ ಪರಿವರ್ತಿ ಸುತ್ತಾ ಬಂದಿರುವ ಚಾಳಿಯಿಂದಾಗಿ. ಇದಕ್ಕೆ ಕಾರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಗುಣಮಟ್ಟವೂ ಕುಸಿದಿರುವುದೂ ಆಗಿದೆ. ಇದಕ್ಕೆ ಮತ್ತೆ ಕಾರಣ ಈ ಸಂಸ್ಥೆ ಬುಡದಿಂದ ತುದಿಯವರೆಗೆ ಸಾಹಿತ್ಯೇತರ ಶಕ್ತಿಗಳ ಕೈವಶವಾಗಿರುವುದು.
ನಾನು ಬಹಳ ಬಾರಿ ಹೇಳಿರುವಂತೆ ಈ ಬಂಡಾಯ-ದಲಿತ ಎಂಬ ಹಣೆಪಟ್ಟಿಯ ಸಾಹಿತ್ಯ ಚಳವಳಿಗಳು ಎಂದೂ ಸಾಹಿತ್ಯ ಚಳವಳಿಗಳೇ ಆಗಿರಲಿಲ್ಲ. ಅವು ಮೂಲತಃ ಸಾಹಿತ್ಯವನ್ನು “ಬಳಸಿ’ ಕೊಳ್ಳಲು ಬಯಸಿದ ರಾಜಕೀಯ ಚಳವಳಿಗಳು. ಹಾಗಾಗಿಯೇ ಈ ಚಳವಳಿ ಕನ್ನಡದ ಜನ ನೆನಪಿಟ್ಟುಕೊಳ್ಳಬಹುದಾದ ಒಂದು ಕೃತಿಯನ್ನೂ ನೀಡಲಾಗಿಲ್ಲ. (ಈ ಚಳವಳಿ ಆರಂಭವಾಗುವ ಮುನ್ನವೇ ಶ್ರೇಷ್ಠ ಕೃತಿಗಳನ್ನು ಬರೆದ ಕೆಲ ಲೇಖಕರನ್ನು-ಉದಾ: ದೇವನೂರ ಮಹಾದೇವ ಮತ್ತು ಸಿದ್ದಲಿಂಗಯ್ಯ-ಇವುಗಳ ವ್ಯಾಪ್ತಿಗೆ ಸೇರಿಸಿಕೊಂಡು ಇವುಗಳ ಮರ್ಯಾದೆಯನ್ನು ಕಾಪಾಡಿಕೊಳ್ಳುವ ಪ್ರಯತ್ನಗಳೂ ನಡೆದಿವೆಯಾದರೂ!) ಒಂದು ಕಾಲದಲ್ಲಿ ನಾವೆಲ್ಲ ಗೌರವಿಸುತ್ತಿದ್ದ ನಿಜವಾದ ಸಾಹಿತಿಯೇ ಆಗಿದ್ದ ಚಂಪಾ, ಬಂಡಾಯ ಸಾಹಿತ್ಯ “ಸಂಘಟನೆ’ಯ ರಾಜಕಾರಣದಲ್ಲಿ ಜನಪ್ರಿಯ ನಾಯಕತ್ವದ ಹಪಾಹಪಿಗೆ ಬಿದ್ದು ಅಂತಿಮವಾಗಿ ಹೀಗೆ ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅದರ ಮರ್ಯಾದೆಗೆ ಭಂಗ ತರುವ ಹಂತ ತಲುಪಿದ್ದಾರೆ. ಇದು ನಿಜವಾದ ಸಾಹಿತ್ಯದ ದುರಂತ.
ಚಂಪಾ ಕನ್ನಡಕ್ಕೆ ಸಂಬಂಧಪಟ್ಟ ಜ್ವಲಂತ ಸಮಸ್ಯೆಯಾದ ಕನ್ನಡ ಮಾಧ್ಯಮದ ಬಗ್ಗೆಯೂ ತಮ್ಮ ಭಾಷಣದಲ್ಲಿ ವಿವರವಾಗಿ ಮಾತಾ ಡಿದ್ದಾರೆ. ಇದನ್ನೆಲ್ಲ ಇವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣಕ್ಕೆಂದೇ ಮೀಸಲಾಗಿಟ್ಟುಕೊಂಡು ಈವರೆಗೆ ಅದರ ಬಗ್ಗೆ ಮಾತನಾಡದಿರಲು ನಿರ್ಧರಿಸಿದ್ದರೆ? ಇವರೇಕೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನಂತರದ ದಿನಗಳಲ್ಲಿ ಈ ಬಗ್ಗೆ ಒಂದೂ ಸೊಲ್ಲೆತ್ತಿಲ್ಲ? ಸರಕಾರ ನಾಡು-ನುಡಿಗಳಿಗೆ ಸಂಬಂಧಿಸಿದಂತೆ ಕರೆಯುವ ಸಭೆಗಳಿಗೆ ಸದಾ ಹಾಜರಾಗುವ ಇವರು ಇಂತಹ ಸಭೆಗಳಲ್ಲಿ ಕನ್ನಡ ಮಾಧ್ಯಮ ಜಾರಿಗೆ ತರುವ ತುರ್ತಿನ ಬಗ್ಗೆ ಎಷ್ಟು ಬಾರಿ ಮಾತಾಡಿದ್ದಾರೆ? ಅವರೇ ಒಮ್ಮೆ ಹೇಳಿಕೊಂಡಂತೆ, ಅವರು ಕನ್ನಡದ ನಿರಂತರ ಹೋರಾಟಗಾರರು. ಇವರ ಈ ಹೋರಾಟದ ನಿರಂತರತೆಗೆ ಕನ್ನಡದ ಸಮಸ್ಯೆಗಳು ಉಳಿದು ಬೆಳೆಯಬೇಕಿವೆ!
ಈ ಸಂಬಂಧದಲ್ಲಿ ಇದೆಲ್ಲದಕ್ಕಿಂತ ಕೆಟ್ಟ ಸುದ್ದಿಯೆಂದರೆ, ಸಮ್ಮೇಳನದ ಸಮಾರೋಪದ ಮಾತುಗಳನ್ನಾಡಿದ ಹಿರಿಯ ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಚಂಪಾ ಅವರ ರಾಜಕೀಯ ಭಾಷಣವನ್ನು ಸಮರ್ಥಿಸಿರುವುದು.
(ಮುಕ್ತ ಚರ್ಚೆಗೆ ಆಹ್ವಾನ. ಇತ್ತೀಚೆಗೆ ತೆರೆಕಂಡ 83ನೇ ಕನ್ನಡ ಸಾಹಿತ್ಯ ಸಮ್ಮೇಳನ “ಸಾಹಿತ್ಯ ರಾಜಕಾರಣ’ದ ಮರುಜಿಜ್ಞಾಸೆಗೆ ಕಾರಣವಾಗಿದೆ. ಸಾಹಿತ್ಯಕ್ಕೆ ರಾಜಕಾರಣ ಅನಿವಾರ್ಯವೇ? ಈ ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಿ)
ಡಿ.ಎಸ್. ನಾಗಭೂಷಣ