Advertisement

ಸಾಹಿತಿ, ಜಾನಪದ ತಜ್ಞ ಏರ್ಯ ಲಕ್ಷ್ಮೀನಾರಾಯಣ ಆಳ್ವ ಇನ್ನಿಲ್ಲ

10:36 PM Jul 27, 2019 | sudhir |

ಬಂಟ್ವಾಳ: ಶ್ರೇಷ್ಠ ಸಾಹಿತಿ, ಜಾನಪದ ತಜ್ಞ, ಧಾರ್ಮಿಕ, ಸಾಮಾಜಿಕ ಧುರೀಣ, ಸಹಕಾರಿ ರಂಗದ ನೇತಾರ, ಅಸಾಮಾನ್ಯ ಸಂಘಟಕ, ನಿತ್ಯ ಕಾರ್ಯಶೀಲ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ (94) ಶನಿವಾರ ಬಂಟ್ವಾಳ ಮೊಡಂಕಾಪುವಿನ ಸಾಕೇತ ಸ್ವಗೃಹದಲ್ಲಿ ನಿಧನ ಹೊಂದಿದರು.
ಕೆಲವು ಕಾಲದಿಂದ ಅವರಿಗೆ ಅನಾರೋಗ್ಯವಿತ್ತು. ಆಳ್ವರು ಪತ್ನಿ, ಪುತ್ರಿ ಮತ್ತು ಮೂವರು ಸೋದರಿಯರು ಹಾಗೂ ಅಸಂಖ್ಯಾತ ಬಂಧು ಮಿತ್ರರನ್ನು ಅಗಲಿದ್ದಾರೆ.

Advertisement

1926ರ ಮಾರ್ಚ್‌ ತಿಂಗಳಲ್ಲಿ ಜನಿಸಿದ ಏರ್ಯ ಅವರು ಹೈಸ್ಕೂಲ್‌ ಶಿಕ್ಷಣ ಮುಗಿಸುವ ಮೊದಲೇ ಗಾಂಧೀಜಿ ಮತ್ತು ಕಾರ್ನಾಡು ಸದಾಶಿವ ರಾವ್‌ ಅವರಿಂದ ಪ್ರೇರಿತರಾಗಿ ರಾಷ್ಟ್ರಸೇವಾ ರಂಗಕ್ಕೆ ಧುಮುಕಿದರು. ಇನ್ನೂ ಎಳೆಯ ಪ್ರಾಯದಲ್ಲೆ ಹರಿಜನರ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅವರಿಗೆ ಸಮಾಜದಲ್ಲಿ ಸ್ಥಾನಮಾನ ದೊರಕಿಸಿಕೊಡುವಲ್ಲಿ ಹೋರಾಡಿದವರು.

ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರಿಂದ ಪ್ರಭಾವಿತರಾದ ಆಳ್ವರು ಆ ಕ್ಷೇತ್ರದಲ್ಲೂ ಅಸಾಮಾನ್ಯವಾದ ಕಾರ್ಯ ನಿರ್ವಹಿಸಿದ್ದಾರೆ. ಅವರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿಯೂ ಕ್ಷಮತೆಯಿಂದ ಕಾರ್ಯ ನಿರ್ವಹಿಸಿದ್ದಾರೆ.

ಧಾರ್ಮಿಕ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದ ಆಳ್ವರು ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಖೀಲ ಕರ್ನಾಟಕ ಜಾನಪದ ಪರಿಷತ್‌ನ ವಿಶ್ವಸ್ತರಲ್ಲಿ ಒಬ್ಬರಾಗಿದ್ದಾರೆ. ಇನ್ನೂ ಇತರ ಅನೇಕ ಸಾಂಸ್ಕೃತಿಕ, ಸಾಹಿತ್ಯಿಕ, ಸಾಮಾಜಿಕ ಸಂಘಟನೆಗಳಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಈ ಎಲ್ಲ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಜಿಲ್ಲೆ. ರಾಜ್ಯದ ಅನೇಕ ಸಂಸ್ಥೆಗಳು ಅವರನ್ನು ಸಮ್ಮಾನಿಸಿವೆ. ಕೆಲವು ವರ್ಷಗಳ ಹಿಂದೆ ಅವರ ಅಭಿಮಾನಿಗಳು ಸೇರಿ “ಏರ್ಯ’ ಎಂಬ ಅಭಿನಂದನ ಗ್ರಂಥವನ್ನು ಮಂಗಳೂರು ಪುರಭವನದಲ್ಲಿ ನಡೆದ ಸಾರ್ವಜನಿಕ ಅಭಿನಂದನೆ ಸಮಾರಂಭದಲ್ಲಿ ನೀಡಿ ಸಮ್ಮಾನಿಸಿದ್ದರು.

ಜಾನಪದ ಪ್ರೇಮಿ ಎಚ್‌. ಎಲ್‌. ನಾಗೇಗೌಡರು ದ.ಕ. ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ 1969ರ ಜನವರಿಯಲ್ಲಿ ಏರ್ಯ ಲಕ್ಷ್ಮೀನಾರಾಯಣ ಅವರು 2ನೇ ಅಖೀಲ ಕರ್ನಾಟಕ ಜಾನಪದ ಸಮ್ಮೇಳನದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದ.ಕ. ಜಿಲ್ಲಾ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

Advertisement

ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡಿದ ಆಳ್ವರು ಹತ್ತಾರು ಕೃತಿಗಳನ್ನು ರಚಿಸಿದ್ದು ಅವುಗಳಲ್ಲಿ “ಶ್ರೀ ರಾಮಾಶ್ವಮೇದದ ರಸತರಂಗಗಳು’ ಎಂಬ ಗ್ರಂಥ ಅಪಾರವಾದ ಜನಪ್ರೀಯತೆ ಗಳಿಸಿದೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್‌ ಪ್ರಶಸ್ತಿಗೆ ಅವರು ಬಾಜನರಾಗಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಅನನ್ಯ ಅಭಿಮಾನಿಯಾಗಿದ್ದ ಆಳ್ವರು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗೆಡೆ ಅವರ ಅತ್ಯಂತ ಆತ್ಮೀಯರಾಗಿದ್ದು ಅಲ್ಲಿಯ ಧಾರ್ಮಿಕ, ಸಾಹಿತ್ಯಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಚಟುವಟಿಕೆಯಲ್ಲಿ ಪ್ರಮುಖ ಭಾಗಿದಾರರಾಗಿದ್ದಾರೆ.

ಅವರ ಅಂತ್ಯಕ್ರಿಯೆ ರವಿವಾರ ಸಂಜೆ 4 ಗಂಟೆಗೆ ಬಂಟ್ವಾಳದ ಏರ್ಯ ಬೀಡಿನಲ್ಲಿ ನೆರವೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next