ಕಾಸರಗೋಡಿನ ಸಾಹಿತ್ಯ ಪರಂಪರೆಗೆ ನೀರ್ಚಾಲಿನ ಕುಳಮರ್ವ ಮನೆತನದ ಕೊಡುಗೆಯು ಮಹತ್ವದ್ದಾಗಿದೆ. ಕವಿ ಪರಂಪರೆಯ ಈ ಮನೆತನದಲ್ಲಿ ಇದೀಗ ಶಂಕರ ಶರ್ಮರು ಖಂಡ ಕಾವ್ಯವೊಂದನ್ನು ರಚಿಸಿ ಹೆಸರು ಮಾಡಿದ ಕವಿಯಾಗಿದ್ದಾರೆ.
ಬಾಲ್ಯ ಬದುಕು: ಕಾಸರಗೋಡು ತಾಲೂಕಿನ ನೀರ್ಚಾಲು ಸಮೀಪದ ವಿದ್ವಾಂಸ-ಕೃಷಿಕ ಕುಳಮರ್ವ ಅಬ್ಬಿಮೂಲೆ ಶಂಕರ ನಾರಾಯಣ ಭಟ್ – ಶಂಕರಿ ಅಮ್ಮ ದಂಪತಿಯರ ದ್ವಿತೀಯ ಪುತ್ರರಾಗಿ ಶಂಕರ ಶರ್ಮ ಅವರು 1952 ಜುಲೈ ತಿಂಗಳ 17ರಂದು ಜನಿಸಿದರು. ಕೇಶವ ಭಟ್ಟ (ನಿವೃತ್ತ ಉಪನ್ಯಾಸಕರು) ವೆಂಕಟಕೃಷ್ಣ (ಕೃಷಿಕರು), ಶ್ಯಾಮ ಭಟ್ (ಕೃಷಿಕರು) ಅವರು ಸಹೋದರರು. ತಿರುಮಲೇಶ್ವರಿ, ಸರಸ್ವತಿ, ಶಾಂತಾ ಕುಮಾರಿ ಸಹೋದರಿಯರು.
ಶಂಕರ ಶರ್ಮ ಅವರು ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಕುಂಟಿಕ್ಕಾನ ಹಿರಿಯ ಬುನಾದಿ ಶಾಲೆಯಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್‌ನಲ್ಲಿ ಪೂರೈಸಿದರು. ನಂತರ ಕೃಷಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಸಾಹಿತ್ಯ ಸೇವೆ: ಶಂಕರ ಶರ್ಮರಿಗೆ ಪ್ರಾಥಮಿಕ ವಿದ್ಯಾಭ್ಯಾಸ ಕಾಲದಲ್ಲಿಯೇ ಕಾವ್ಯ ಪ್ರೀತಿಯು ಇತ್ತು. ಅವರ ಅಮ್ಮ ಹಾಡುತ್ತಿದ್ದ ಜೋಗುಳ ಹಾಡುಗಳು ಮತ್ತು ತಂದೆಯವರು ಪಾರಾಯಣ ಮಾಡುತ್ತಿದ್ದ ಕುಮಾರವ್ಯಾಸ ಮಹಾಕವಿಯ ಕರ್ಣಾಟಕ ಮಹಾಭಾರತ, ತೊರವೆ ರಾಮಾಯಣ, ಭಾಗವತ ಮೊದಲಾದವುಗಳಿಂದ ಪ್ರೇರಣೆ ಪಡೆದರು. ಮನೆಯಲ್ಲಿ ತಾಳೆಗರಿಯಲ್ಲಿದ್ದ ಶಿವಪುರಾಣ ಮತ್ತು ತೊರವೆ ರಾಮಾಯಣಗಳನ್ನು ಪ್ರತಿಮಾಡಿ ಓದಲು ತೊಡಗಿದರು. ತೊರವೆ ರಾಮಾಯಣದಲ್ಲಿ ಉತ್ತರಕಾಂಡವಿಲ್ಲದಿರುವುದನ್ನು ಮನಗಂಡು ಆ ಕಥೆಯನ್ನು ಭಾಮಿನಿ ಷಟ³ದಿಯಲ್ಲಿ ಬರೆಯಬೇಕೆಂಬ ತುಡಿತದಿಂದ ರಚಿಸಲು ತೊಡಗಿ ಎರಡು ವರ್ಷಗಳಲ್ಲಿ ಸುಮಾರು 1600 ಪದ್ಯಗಳಿರುವ ‘ಉತ್ತರ ರಾಮ ಚರಿತೆ’ ಎಂಬ ಖಂಡ ಕಾವ್ಯವನ್ನು ರಚಿಸಿದರು.
ಶಂಕರ ಶರ್ಮ ಅವರು ಈ ಕೃತಿಯನ್ನಲ್ಲದೆ ಭಾಮಿನಿ ಸುಮಾರು 20 ಸಂಧಿಗಳಲ್ಲಾಗಿ 1128 ಪದ್ಯಗಳಲ್ಲಿ ಸ್ಕಾಂದ ಪುರಾಣದ ಆಧಾರಿತ “ಕುಮಾರೇಶ್ವರ ಚರಿತ್ರೆ’ ಎಂಬ ಕೃತಿಯನ್ನು ರಚಿಸಿದ್ದು ಅದು ಲೋಕಾರ್ಪಣೆಗೊಂಡಿದೆ. ಅಲ್ಲದೆ 18 ಭಾಗಗಳಲ್ಲಾಗಿ 201 ಪದ್ಯಗಳಿರುವ “ಚೆನ್ನವೀರ ಶರಣರ ಶ್ರೀ ನುಡಿಗಳು’ ಎಂಬ ಕೃತಿಯನ್ನು ರಚಿಸಿದ್ದು ಇದು ಕಾಸರಗೋಡಿನ ಕನ್ನಡ ದೈನಿಕವೊಂದರಲ್ಲಿ ಪ್ರಕಟವಾಗಿದೆ.
ಕಾಸರಗೋಡು ತಾಲೂಕಿನ ಉಪ್ಪಂಗಳ ತಲೇಕದ ಕೃಷಿಕ ವೆಂಕಪ್ಪ ಭಟ್ – ಸರಸ್ವತಿ ದಂಪತಿಯರ ಪುತ್ರಿ ಸರೋಜಿನಿ ಅವರನ್ನು ವಿವಾಹವಾದ ಶಂಕರ ಶರ್ಮ ಅವರಿಗೆ ಶಂಕರ ನಾರಾಯಣ ಪ್ರಕಾಶ (ಅಧ್ಯಾಪಕ), ಶೀಲಾ ಶಂಕರಿ (ಶಿಕ್ಷಕಿ) ಎಂಬಿಬ್ಬರು ಮಕ್ಕಳು.
ಬಹುದೊಡ್ಡ ಸಾಧನೆ ಮಾಡಿ ಕಾಸರಗೋಡಿನ ಸಾಹಿತ್ಯಲೋಕಕ್ಕೆ ಕೀರ್ತಿ ಯನ್ನು ತಂದಂತಹ ಕುಳಮರ್ವ ಶಂಕರ ಶರ್ಮರಿಂದ ಇನ್ನಷ್ಟು ಸಾಹಿತ್ಯ ಕೃತಿಗಳು ಹೊರಬರಲೆಂದು ಹಾರೈಸುವ.
– ಕೇಳು ಮಾಸ್ತರ್, ಅಗಲ್ಪಾಡಿ