Advertisement

ಸಾಹಿತ್ಯ ಚರ್ಚೆ-ಪುಸ್ತಕ ಸಂತೆಗೆ ಆದ್ಯತೆ: ನಿರಗುಡಿ

11:18 AM Oct 28, 2021 | Team Udayavani |

ವಾಡಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷನಾಗಿ ಚುನಾಯಿತನಾದರೆ ಕನ್ನಡ ಭವನವನ್ನು ಬಟ್ಟೆ ವ್ಯಾಪಾರದಿಂದ ಮುಕ್ತಗೊಳಿಸಿ ಸಾಹಿತ್ಯ ಚರ್ಚೆ ಮತ್ತು ಪುಸ್ತಕ ಸಂತೆ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಪ್ರೊ| ಬಿ.ಎಚ್‌.ನಿರುಗುಡಿ ಭರವಸೆ ನೀಡಿದರು.

Advertisement

ಬುಧವಾರ ಪಟ್ಟಣದ ಅಂಬೇಡ್ಕರ್‌ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಕಸಾಪ ಸದಸ್ಯರ ಸಭೆಯಲ್ಲಿ ಮತಯಾಚಿಸಿ ಮಾತನಾಡಿ ಅವರು, ಸಾಹಿತ್ಯ ಪರಿಷತ್‌ಗೆ ಸಾಹಿತಿಯೇ ಅಧ್ಯಕ್ಷನಾಗಬೇಕು ಎನ್ನುವ ಕೂಗು ಈಬಾರಿ ಎಲ್ಲೆಡೆ ಕೇಳಿಬರುತ್ತಿದೆ. ಜಿಲ್ಲೆಯ ಹಿರಿಯ ಕಿರಿಯ ಬರಹಗಾರರನ್ನು ಸಂಘಟಿಸಿ ಕಸಾಪವನ್ನು ಕ್ರಿಯಶೀಲವಾಗಿ ಮಾಡಬೇಕು ಎನ್ನುವ ಮಹದಾಸೆ ಹೊಂದಿದ್ದೇನೆ. ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗಾಗಿ ಜಿಲ್ಲಾ ಕನ್ನಡ ಭವನವನ್ನು ಉಚಿತವಾಗಿ ನೀಡಲು ಬದ್ಧನಾಗಿದ್ದೇನೆ. ಪ್ರತಿಯೊಂದು ತಾಲೂಕಿನಲ್ಲೂ ಕನ್ನಡ ಭವನಗಳ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡುತ್ತೇನೆ. ಸಾಹಿತ್ಯಾಸಕ್ತರನ್ನು ಕನ್ನಡ ಭವನದತ್ತ ಸೆಳೆಯಲು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಾಲೂಕು ಸಾಹಿತ್ಯ ಸಮ್ಮೇಳನಗಳನ್ನು ಅರ್ಥಪೂರ್ಣವಾಗಿ ಸಂಘಟಿಸಲು ಆಸಕ್ತಿ ಹೊಂದಿದ್ದೇನೆ ಎಂದರು.

ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆ ಯಲ್ಲಿ ರಂಗ ಕಲಾವಿದರಿದ್ದಾರೆ. ಇವರ ಕಲೆ ಪ್ರದರ್ಶನಕ್ಕಾಗಿ ವೇದಿಕೆ ಕೊರತೆ ಎದ್ದುಕಾಣುತ್ತಿದೆ. ಬಯಲು ರಂಗಮಂದಿರಗಳ ನಿರ್ಮಾಣಕ್ಕೂ ಸರಕಾರದ ಮೇಲೆ ಒತ್ತಡ ಹೇರಲಾಗುವುದು. ಶಿಕ್ಷಕರ ಮತ್ತು ಮಕ್ಕಳ ಸಮ್ಮೇಳನಗಳ ಜತೆಗೆ ವೈದ್ಯ-ಕೃಷಿ ಸಮ್ಮೇಳನಗಳತ್ತಲೂ ಗಮನ ಹರಿಸಲಾಗುವುದು. ಶಾಲೆ ಕಾಲೇಜುಗಳಲ್ಲಿ ಕನ್ನಡದ ವಾತಾವರಣ ಸೃಷ್ಠಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಹಲವು ವಿಶಿಷ್ಟ ಸಾಹಿತ್ಯ ಚಟುವಟಿಕೆಗಳ ಕನಸು ಹೊತ್ತು ಕಸಾಪ ಚುನಾವಣೆಗೆ ಸ್ಪ ರ್ಧಿಸಿದ್ದೇನೆ. ನನ್ನ ಪರವಾಗಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬರಹಗಾರರು ಬದಲಾವಣೆ ಬಯಸುತ್ತಿದ್ದಾರೆ. ಒಮ್ಮೆ ಅಧ್ಯಕ್ಷನಾಗಿ ಆಯ್ಕೆಯಾದರೆ ಮತ್ತೂಮ್ಮೆ ಸ್ಪರ್ಧೆ ಮಾಡುವುದಿಲ್ಲ ಎಂಬುದು ನನ್ನ ದೃಢ ನಿರ್ಧಾರವಾಗಿದೆ. ಕಸಾಪ ಸದಸ್ಯರು ನನಗೆ ಆರ್ಶೀವಾದ ಮಾಡುವ ಮೂಲಕ ಸಾಹಿತ್ಯ ತೇರು ಎಳೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಕಸಾಪ ಕಲಬುರಗಿ ತಾಲೂಕು ಉಪಾಧ್ಯಕ್ಷ ಭೀಮಾಶಂಕರ ಎಳ ಮೇಲೆ, ಅಂಬಾರಾಯ ಕೋಣೆ, ಶರಣಗೌಡ ಪಾಟೀಲ ಪಾಳಾ, ಸಂಚಲನ ಸಾಹಿತ್ಯ ವೇದಿಕೆ ಅಧ್ಯಕ್ಷ ಕಾಶೀನಾಥ ಹಿಂದಿನಕೇರಿ, ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ, ಸಿದ್ಧಯ್ಯಶಾಸ್ತ್ರೀ ನಂದೂರಮಠ, ಕಸಾಪ ಅಧ್ಯಕ್ಷ ಖೇಮಲಿಂಗ ಬೆಳಮಗಿ, ಮಲ್ಲೇಶ ನಾಟೇಕರ, ವಿಕ್ರಮ ನಿಂಬರ್ಗಾ, ರವಿ ಕೋಳಕೂರ, ಶ್ರೀಶೈಲ ಪುರಾಣಿಕ, ನೂರೊಂದಯ್ಯಸ್ವಾಮಿ ಮಠಪತಿ, ಯಶ್ವಂತ ಧನ್ನೇಕರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next