Advertisement

ಸಾಮಾಜಿಕ ಸ್ವಾಸ್ಥ್ಯಕ್ಕೆ ಸಾಹಿತ್ಯ ಪೂರಕ; ಡಾ|ಗೊ.ರು.ಚನ್ನಬಸಪ್ಪ

06:43 PM Mar 29, 2022 | Team Udayavani |

ಅಜ್ಜಂಪುರ: ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವ ಶಕ್ತಿ ಸಾಹಿತ್ಯಕ್ಕೆ ಮಾತ್ರ ಇದೆ ಎಂದು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತ ಡಾ| ಗೊ.ರು.ಚನ್ನಬಸಪ್ಪ ತಿಳಿಸಿದರು.

Advertisement

ಸೋಮವಾರ ಅಜ್ಜಂಪುರದ ಸಿದ್ದರಾಮೇಶ್ವರ ಸಮುದಾಯ ಭವನದ ಆವರಣದಲ್ಲಿ ನಡೆಯುತ್ತಿರುವ ಚಿಕ್ಕಮಗಳೂರು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಪರಿಷತ್‌ ಯಾವುದೇ ರಾಜಕೀಯ ಜನಾಂಗೀಯ ಸಂಸ್ಥೆಯಲ್ಲ. ಸಾಹಿತ್ಯಾಸಕ್ತರು ಮಾತ್ರ ಸದಸ್ಯರಾದರೆ ಸಾಕು. ಇಂದು 3 ಲಕ್ಷ 50 ಸಾವಿರ ಸದಸ್ಯರನ್ನು ಸಾಹಿತ್ಯ ಪರಿಷತ್‌ ಹೊಂದಿರುವುದು ವಿಶೇಷ. ಸಾಹಿತ್ಯ, ಸಂಸ್ಕೃತಿಯ ಪೋಷಣೆಗೆ ಸರ್ಕಾರ ವಿಶೇಷ ಕಾಳಜಿ ವಹಿಸುತ್ತಿರುವುದು ಅಭಿನಂದನಾರ್ಹ ಎಂದರು. ಸಾಹಿತ್ಯ, ಕಲೆ, ಸಂಸ್ಕೃತಿಯ ತವರೂರಾದ ಅಜ್ಜಂಪುರ ಗ್ರಾಮದಲ್ಲಿ ಸಮ್ಮೇಳನ ನಡೆಯುತ್ತಿರುವುದು ನಿಜಕ್ಕೂ ಅರ್ಥಪೂರ್ಣ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸೂರಿ ಶ್ರೀನಿವಾಸ್‌, ಕೇವಲ 7 ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯ. ಇದಕ್ಕೆ ಸಹಕರಿಸಿದ ಎಲ್ಲ ಅಜ್ಜಂಪುರ ನಾಗರಿಕರಿಗೂ ಕನ್ನಡಪರ ಸಂಘಟನೆಗಳು ಅಭಿನಂದನೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಅಖೀಲ ಭಾರತ ಸಾಹಿತ್ಯ ಸಮ್ಮೇಳನವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಸಲಾಗುವುದು.

ಜಿಲ್ಲೆಯ ಪ್ರತಿ ಗ್ರಾಪಂ ಮಟ್ಟದಲ್ಲಿ ಕನ್ನಡ ಭವನ ನಿರ್ಮಾಣದ ಗುರಿ, ಅಜ್ಜಂಪುರದಲ್ಲಿ ಶೀಘ್ರದಲ್ಲಿ ಕನ್ನಡ ಭವನ ನಿರ್ಮಾಣದ ಗುರಿ ಹೊಂದಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಅಂತರ್‌ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಣೇಹಳ್ಳಿಯಲ್ಲಿ ನಡೆಸಲಾಗುವುದು ಎಂದರು.

Advertisement

ಕಾರ್ಯಕ್ರಮದಲ್ಲಿ ಡಾ| ರವಿ ದಳವಾಯಿ ಅವರ ಮೊದಲ ಮಳೆ, ಗೀತಾ ಅನುವನಹಳ್ಳಿ ಅವರ ಹೆಸರಿಲ್ಲದ ಹಕ್ಕಿಗಳು, ಕಡ್ಮಪರ ಬಸಪ್ಪ ಅವರ ಹೊರಮಠದ ಅಡವಿಸಿದ್ದೇಶ್ವರನ ಮಹಿಮಾಮೃತ, ಅಪೂರ್ವ ಅಜ್ಜಂಪುರ ಅವರ ಕಥಾಗುಚ್ಚ ಮತ್ತು ಕವನ ಸಂಕಲನಗಳ ಕೃತಿ ಬಿಡುಗಡೆಗೊಳಿಸಲಾಯಿತು. ತರಳಬಾಳು ಶಾಖಾಮಠ ಸಾಣೇಹಳ್ಳಿಯ ಪಟ್ಟಾಧ್ಯಕ್ಷರಾದ ಡಾ| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಇಂದು ಸಮಾಜದಲ್ಲಿ ವಿಷಮ ವಾತಾವರಣ ಸೃಷ್ಟಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮನುಷ್ಯನಲ್ಲಿ ಆಧ್ಯಾತ್ಮದ ಕೊರತೆಯಿದೆ.

ಇಂತಹ ಆಧ್ಯಾತ್ಮದ ಕೊರತೆ ನೀಗಿಸುವ ಕಾರ್ಯವಾಗಬೇಕಿದೆ. ವ್ಯಕ್ತಿ ಬದಲಾದರೆ ಜಗತ್ತು ಬದಲಾಗುತ್ತದೆ. ಸಮಾಜದಲ್ಲಿ ಪ್ರತಿಭೆಗೆ ಪ್ರೋತ್ಸಾಹ ನೀಡಿದರೆ ಸುಸಂಸ್ಕೃತ ಸಮಾಜ ನಿರ್ಮಾಣವಾಗಲಿದೆ. ನಿರಂತರ ಕಲಿಕೆ ಮನುಷ್ಯನನ್ನು ಉತ್ತಮ ವ್ಯಕ್ತಿಯಾಗಿಸಬಲ್ಲದು ಎಂದರು. ಸಮಾಜದ ಅನಿಷ್ಠಗಳನ್ನು ಹೊಡೆದೊಡಿಸುವ ಕೆಲಸವಾಗಬೇಕು. ಬಹುತೇಕ ಸಮ್ಮೇಳನಗಳಲ್ಲಿ ಸಾಹಿತ್ಯದ ಬಗ್ಗೆ ಚರ್ಚೆಯಾಗದಿರುವುದು ವಿಷಾದನೀಯ. ಆದರೆ ಈ ಸಮ್ಮೇಳನದಲ್ಲಿ ಹೊಟ್ಟೆ ಹಸಿವು ಹಾಗೂ ಜ್ಞಾನದ ಹಸಿವು ನೀಗಿಸುವ ಕಾರ್ಯವಾಗಿದೆ ಎಂದರು.

ಸಾಹಿತ್ಯದ ಒಲವು ಹೊಂದಿರುವವರು ಮಾತ್ರ ಸದಸ್ಯರಾಗಲಿ. ಸಮ್ಮೇಳನಗಳು ಪುಸ್ತಕಗಳನ್ನು ಕೊಳ್ಳುವ ಅವುಗಳ ಬಗ್ಗೆ ಚಿಂತನ- ಮಂಥನ ಮಾಡುವ ಸಮ್ಮೇಳನವಾದಾಗ ಮಾತ್ರ ನಿಜವಾದ ಅರ್ಥ ಬರಲಿದೆ ಎಂದರು.

ಸರ್ವಾಧ್ಯಕ್ಷರಾದ ಡಾ| ರಾಜಪ್ಪ ದಳವಾಯಿ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ. ಚಂದ್ರಪ್ಪ, ಶಿವಾಮೃತ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮಾಜಿ ಶಾಸಕ ಎಸ್‌.ಎಂ. ನಾಗರಾಜು, ದತ್ತಿ ಸ್ವೀಕಾರ ಕಾರ್ಯಕ್ರಮ ನೆರವೇರಿಸಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಪ್ರಧಾನ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ, ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ಡಾ| ಎಸ್‌. ಬಾಲಾಜಿ, ಕನ್ನಡ ಅಧ್ಯಯನ ಸಂಸ್ಥೆ ಬೆಂಗಳೂರು ವಿ.ವಿ. ಪ್ರಧ್ಯಾಪಕ ಡಾ| ನಟರಾಜ್‌ ಹುಳಿಯಾರ್‌ ಸೇರಿದಂತೆ ಕನ್ನಡಪರ ಸಂಘಟನೆಗಳು, ಸಾಹಿತ್ಯಾಸಕ್ತರು, ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next