ಬೀದರ: ಜಿಲ್ಲೆಯ ಹತ್ತಾರು ಕವಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದು, ವಿಶ್ವಕ್ಕೆ ಸತ್ವಯುತವಾದ ಸಾಹಿತ್ಯ ಕೊಡುಗೆಯಾಗಿ ನೀಡಿದ್ದಾರೆ ಎಂದು ಜಿಪಂ ಸದಸ್ಯ ಅನೀಲ ಬಿರಾದಾರ ಹೇಳಿದರು.
ನಗರದ ಲಕ್ಷ್ಮೀಬಾಯಿ ಕಮಠಾಣೆ ಶಾಲೆ ಸಭಾಂಗಣದಲ್ಲಿ ಧರಿನಾಡು ಕನ್ನಡ ಸಂಘ ಕೇಂದ್ರ ಸಮಿತಿ ಹಮ್ಮಿಕೊಂಡಿದ್ದ
ಪಾಂಡುರಂಗ ಕೋರೆ ವಿರಚಿತ ಶ್ರೀ ಮೈಲಾರ ಮಲ್ಲಣ್ಣ- ಶಿವ ಮಲ್ಹಾರ ಹಾಗೂ ಹನ್ನೆರಡು ಜ್ಯೋತಿರ್ಲಿಂಗಗಳ ಚರಿತ್ರೆ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಬೀದರ ಹಿಂದುಳಿದ ಜಿಲ್ಲೆಯಲ್ಲ. ಅನೇಕ ಪ್ರತಿಭೆ ನೀಡಿದೆ ಎಂದು ಹೇಳಿದರು. ಕೃತಿ ಪರಿಚಯ ಮಾಡಿ ಮಾತನಾಡಿದ ಸಾಹಿತಿ ಶಿವಕುಮಾರ ಕಟ್ಟೆ, ಭಾರತ ಸಂಸ್ಕೃತಿಗೆ ಜಗತ್ತಿನಲ್ಲಿ ವಿಶೇಷ ಮನ್ನಣೆ ಇದೆ. ಮೈಲಾರ ಮಲ್ಲಣ್ಣ ಅವರ ಕುರಿತು ರಚಿಸಿದ ಈ ಕೃತಿ ಅಧ್ಯಾತ್ಮದ ಮೇಲೆ ಬೆಳಕು ಚೆಲ್ಲುತ್ತದೆ. ಮಣಿಚೂಲ ಪ್ರದೇಶದಲ್ಲಿ ಇರುವ ಮೈಲಾರ ಭಕ್ತಿಯ ಬೀಡಾಗಿದೆ. ರಾಕ್ಷಸರನ್ನು ವಧೆ ಮಾಡಿ ಸತ್ಯ ಎತ್ತಿ ಹಿಡಿದ ಕೀರ್ತಿ ಮೈಲಾರ ಮಲ್ಲಣ್ಣ ಅವರಿಗೆ ಸಲ್ಲುತ್ತದೆ. ಪೌರಾಣಿಕತೆ ಹಿನ್ನೆಲೆಯಲ್ಲಿ ರಚನೆಯಾದ ಈ ಕೃತಿ ಕಣ್ಣಿಗೆ ಕಟ್ಟುವಂತಿದೆ. 12 ಜ್ಯೋತಿರ್ಲಿಂಗಗಳ ಕುರಿತು ಮಾರ್ಮಿಕವಾಗಿ ವಿವರಣೆ ನೀಡುತ್ತಾರೆ. ಓದುತ್ತ ಹೋದಾಗ ದರ್ಶನ ಮಾಡಿಕೊಂಡು ಬಂದಷ್ಟೇ ಅನುಭವ ಆಗುತ್ತದೆ ಎಂದು ಹೇಳಿದರು.
ಹಿರಿಯ ಸಾಹಿತಿ ದೇಶಾಂಶ ಹುಡಗಿ ಮಾತನಾಡಿ, ಮೈಲಾರ ಮಲ್ಲಣ್ಣ ಅವರ ಇನ್ನೂ ಅನೇಕ ಹಾಡುಗಳು, ಕೃತಿಗಳು,
ನುಡಿಗಳು ಲಭ್ಯ ಇವೆ. ಅವುಗಳನ್ನು ಸರಿಯಾಗಿ ಸಂಪಾದನೆ ಮಾಡಿ ಬೆಳಕಿಗೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಕೋರೆ ಅವರು ಇನ್ನೂ ಹೆಚ್ಚಿನ ಪರಿಶ್ರಮಪಡಬೇಕು. ನಾವು ಸ್ವಾರ್ಥದ ಬೆನ್ನು ಹತ್ತಿ ಸಾಹಿತ್ಯ ರಚನೆ ಮಾಡಬಾರದು. ಬದಲಾಗಿ ನೀತಿಗೆ ಬೆನ್ನು ಹತ್ತಿ ಸಾಹಿತ್ಯ ರಚಿಸಬೇಕು. ಅಂದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ಹೇಳಿದರು. ಜಾನಪದ ಸಾಹಿತಿ ಚಂದ್ರಪ್ಪ ಹೆಬ್ಟಾಳಕರ್ ಅಧ್ಯಕ್ಷತೆ ವಹಿಸಿದ್ದರು.
ನರಸಪ್ಪ ಕವಿ, ಉದಯ ಕಮಠಾಣೆ, ಸಂಗೀತಾ ಚಿಮಕೋಡೆ, ದೇವೇಂದ್ರ ವಲ್ಲೇಪುರೆ, ನಾಗಶೆಟ್ಟಿ ಧರಂಪುರ, ರಮೇಶ ಬಿರಾದಾರ, ಗುರುಸಿದ್ದಪ್ಪ ಬಿರಾದಾರ ಇದ್ದರು.