ಶಿರಸಿ: ಸ್ಮಶಾನ ಭೂಮಿಯಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ನಡೆಸುವ, ರಾಜ್ಯದಲ್ಲೇ ಹೆಸರಾಗಿರುವ ನಗರದ ನೆಮ್ಮದಿ ಕುಟೀರ ಈಗ ಇನ್ನಷ್ಟು ಹೊಸತನಕ್ಕೆ ತೆರೆದುಕೊಂಡಿದೆ. ಸರ್ಕಾರದ ಅನುದಾನ ಮತ್ತು ಸಾರ್ವಜನಿಕರ ದೇಣಿಗೆ ಮೂಲಕ ನೆಮ್ಮದಿ ಆವರಣದಲ್ಲಿ ನಿರ್ಮಿಸಿರುವ ರಂಗಧಾಮದ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಊರಿಗೆ ಒಪ್ಪಿಸುವ ಹಾಗೂ ಸಹಕರಿಸಿದ ಸರ್ವರನ್ನೂ ಸ್ಮರಿಸುವ ಧನ್ಯವಾದ ಕಾರ್ಯಕ್ರಮ ನ.11ಶನಿವಾರ ಸಂಜೆ 4 ಗಂಟೆಗೆ ನೆಮ್ಮದಿಯ ರಂಗಧಾಮದಲ್ಲಿ ಆಯೋಜಿಸಲಾಗಿದೆ.
ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿ.ಪಿ ಹೆಗಡೆ ವೈಶಾಲಿ ಅವರು ಮಾಹಿತಿ ನೀಡಿ, ಪ್ರತಿ ಬೆಳಗನ್ನೂ ಸಾವಿನ ಸುದ್ದಿಯಿಂದಲೇ ಪ್ರಾರಂಭಿಸುವ ವಿಶಿಷ್ಟ ಸಂಸ್ಥೆ ನಮ್ಮದು. ಸ್ಮಶಾನವೆಂದರೆ ಭಯ ಅಸಹ್ಯಗಳೇ ತುಂಬಿಕೊಂಡಿರುವ ತಾಣವೆಂಬ ಸಿದ್ದ ಕಲ್ಪನೆಯನ್ನು ಹೋಗಲಾಡಿಸುವ ದಿಕ್ಕಿನಲ್ಲಿ ನಮ್ಮ ಪ್ರಯತ್ನವಾಗಿದೆ.
ಅಂತ್ಯಕ್ರಿಯೆಗಷ್ಟೇ ಸೀಮಿತವಾಗದೇ ನಮ್ಮ ಎರಡುವರೆ ಎಕರೆ ಜಾಗವನ್ನು ಎರಡು ವಿಭಾಗವನ್ನಾಗಿ ಮಾಡಿ ಒಂದಕ್ಕೆ ಸದ್ಗತಿ ಮತ್ತೊಂದಕ್ಕೆ ನೆಮ್ಮದಿ ಎಂದು ಹೆಸರಿಟ್ಟಿದ್ದೇವೆ. ನೆಮ್ಮದಿ ವಿಭಾಗದಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಿಸಬೇಕು ಎಂಬ ಕನಸು ನಮ್ಮದಾಗಿತ್ತು. ಒಂಭತ್ತು ವರ್ಷಗಳ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಉಮಾಶ್ರೀ ರಂಗಮಂದಿರಕ್ಕೆ 60 ಲಕ್ಷ ರೂ. ಬಿಡುಗಡೆಗೊಳಿಸಿದ್ದರು. ಈ ಹಣ ಪಡೆಯುವಲ್ಲಿ ಹಲವು ತೊಡಕುಗಳುಂದ್ಗಿದ್ದರೂ ಅಂತಿಮವಾಗಿ ಬಿಡುಗಡೆಯಾಗಿತ್ತು. ಆದರೆ, ಆ ವೇಳೆ ಕಟ್ಟಡ ನಿರ್ಮಾಣಕ್ಕೆ ಹಾಕಿಕೊಂಡಿದ್ದ ಬಜೆಟ್ ಸಾಕಾಗದೇ ಟಿಎಸ್‌ಎಸ್, ಡಾ. ವಿಜಯ ಸಂಕೇಶ್ವರ ಸೇರಿದಂತೆ ಹಲವು ಮಹನೀಯರು ದೇಣಿಗೆ ನೀಡಿದ್ದರಿಂದ ಇಂದು ಸುಸಜ್ಜಿತ ರಂಗಮಂದಿರ ನಿರ್ಮಾಣ ಸಾಧ್ಯವಾಗಿದೆ.
ನೆಮ್ಮದಿ ಕುಟೀರವು ಮರಣಕ್ಕೆ ಮುನ್ನ ಬದುಕಿಗೆ ಹುರುಪು ತುಂಬುವ ಸ್ಥಳ. ನಾಡಿನಲ್ಲೇ ಅತಿ ಹೆಚ್ಚು ಪುಸ್ತಕಗಳು ಲೋಕಾರ್ಪಣೆ ಗೊಂಡ ದಾಖಲೆ ಈ ಕುಟೀರದ ಹೆಮ್ಮೆ ಯಾಗಿದೆ.ಸದ್ಗತಿಯಲ್ಲಿ ಆತಂಕಕ್ಕೆ ಆಸ್ಪದವಿಲ್ಲದ ರೀತಿಯಲ್ಲಿ ಗೌರವ ಪೂರ್ವಕವಾಗಿ ಅಂತ್ಯಕ್ರಿಯೆ ಜರುಗುತ್ತದೆ.ಜಾತಿ,ಮತ, ಬಡವ, ಶ್ರೀಮಂತ ಎಂಬ ಯಾವುದೇ ಭೇದ ಭಾವ ವಿಲ್ಲದೇ ಸಮಾನತೆ ಇಲ್ಲಿ ಅಕ್ಷರಶಃ ಜೀವಂತವಾಗಿದೆ. ದಾನಿಗಳ ಪ್ರತಿನಿಧಿಯಾಗಿ ವಿ ಆರ್ ಎಲ್ ಸಂಸ್ಥೆ ಯ ಚೇರ್ಮನ್ ಆದ ಡಾ. ವಿಜಯ ಸಂಕೇಶ್ವರ ಅವರಿಗೆ ಹಾಗೂ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಅವರಿಗೆ ಸನ್ಮಾನ ಆಯೋಜಿಸಲಾಗಿದೆ ಎಂದೂ ಹೇಳಿದರು.
ವಿದ್ಯಾ ನಗರ ರುದ್ರ ಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಾಶಿನಾಥ್ ಮೂಡಿ, ಸದಸ್ಯ ರಾದ ನಾಗರಾಜ ಗಂಗೊಳ್ಳಿ, ಪಿ ವಿ ಹೆಗಡೆ ಬೆಳ್ಳೇಕೇರಿ ಇದ್ದರು.
-ರಾಘವೇಂದ್ರ ಬೆಟ್ಟಕೊಪ್ಪ