Advertisement

ಅನಕ್ಷರಸ್ಥ ಮಹಿಳೆಯರಿಗಾಗಿ ಸಾಕ್ಷರತಾ ಕಾರ್ಯಕ್ರಮ

09:57 PM May 25, 2019 | Lakshmi GovindaRaj |

ದೇವನಹಳ್ಳಿ: ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ ಸಾಕ್ಷರತಾ ಪ್ರಮಾಣ ಶೇ.75.60ಇದ್ದು, ಇದರಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಶೇ.68.10 ಹಾಗೂ ಪುರುಷರ ಸಾಕ್ಷರತಾ ಪ್ರಮಾಣ ಶೇ.82.80ಇದೆ ಎಂದು ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಚಂದ್ರಶೇಖರ್‌ ಹಡಪದ್‌ ತಿಳಿಸಿದರು. ತಾಲೂಕಿನ ವಿಶ್ವನಾಥಪುರ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನದ ಲೋಕ ಶಿಕ್ಷಣ ಸಮಿತಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

Advertisement

“ಬಾಳಿಗೆ ಬೆಳಕು’ ಕಾರ್ಯಾಗಾರ: ಮಹಿಳೆಯರು ಮತ್ತು ಪುರುಷರ ಸಾಕ್ಷರತಾ ಪ್ರಮಾಣದಲ್ಲಿ ಶೇ.14.70ಅಂತರವಿದ್ದು, ಈ ಅಂತರವನ್ನು ಹೋಗಲಾಡಿಸಲು ಹಾಗೂ ಸಾಕ್ಷರತೆಯಲ್ಲಿ ಹಿಂದುಳಿದ ಮಹಿಳೆಯರನ್ನು ಗುರುತಿಸಿ ಗ್ರಾಮ ಮಟ್ಟದಲ್ಲಿ ಅವರನ್ನು ಸಬಲೀಕರಣಗೊಳಿಸಲು ಸರಕಾರ 2018-19ನೇ ಸಾಲಿನಲ್ಲಿ ಜಿಲ್ಲಾ ವತಿಯಿಂದ “ಬಾಳಿಗೆ ಬೆಳಕು’ ಕಾರ್ಯಕ್ರಮದಡಿ ಪ್ರತಿ ಮಹಿಳೆಯರಿಗೆ ಕಲಿಕೆ ಕಲಿಸಲಾಗುತ್ತಿದೆ. ಅಕ್ಷರಸ್ಥ ಮಹಿಳೆಯರು ಅನಕ್ಷರಸ್ಥ ಮಹಿಳೆಯರನ್ನು ಅಕ್ಷರಸ್ಥರನ್ನಾಗಿಸಲು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ನಾಲ್ಕು ದಿನಗಳ ತರಬೇತಿ: ಪ್ರತಿ ಗ್ರಾಮದಲ್ಲಿ ಸ್ತ್ರೀ ಶಕ್ತಿ ಗುಂಪುಗಳಿದ್ದು, ಅವುಗಳಲ್ಲಿರುವ ವಿದ್ಯಾವಂತರಿಗೆ “ಬಾಳಿಗೆ ಬೆಳಕು’ ಕಾರ್ಯಕ್ರಮದಡಿ ನಾಲ್ಕು ದಿನಗಳ ತರಬೇತಿ ಹಮ್ಮಿಕೊಂಡಿದ್ದು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರಸ್ಥರನ್ನಾಗಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದರು.

ವಿಶ್ವನಾಥಪುರ ಗ್ರಾಮ ಪಂಚಾಯಿತಿ ಪಿಡಿಒ ಕವಿತಾ ಮಾತನಾಡಿ, ಬಾಳಿನ ಬೆಳಕು ಪುಸ್ತಕ ನೀಡಿ ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿಸಲು ಪ್ರತಿ ಗ್ರಾಪಂ ಮಟ್ಟದಲ್ಲಿ ಈ ಕಾರ್ಯ ನಡೆಯುತ್ತಿದೆ. ವಿಶ್ವನಾಥಪುರ ಕೇಂದ್ರ ಸ್ಥಾನವನ್ನಾಗಿಸಿಕೊಂಡು ವಿಶ್ವನಾಥಪುರ, ಕೊಯಿರಾ, ಆಲೂರು ದುದ್ದನಹಳ್ಳಿ, ಕಾರಹಳ್ಳಿ, ಜಾಲಿಗೆ, ಬಿದಲೂರು, ಕುಂದಾಣ ಗ್ರಾಪಂನಲ್ಲಿರುವ ಸ್ತ್ರೀ ಶಕ್ತಿ ಗುಂಪುಗಳಲ್ಲಿನ ವಿದ್ಯಾವಂತರಿಗೆ ಮೇ 20ರಿಂದ 24ರವರೆಗೆ ತರಬೇತಿ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಾಕ್ಷರತಾ ಕಾರ್ಯಕ್ರಮ ಶ್ಲಾಘನೀಯ: ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಇಂತಹ ಸಾಕ್ಷರತಾ ಕಾರ್ಯಕ್ರಮ ಕೈಗೊಂಡಿರುವುದು ಶ್ಲಾಘನೀಯ. ಎಲ್ಲೆಲ್ಲಿ ಸ್ತ್ರೀ ಶಕ್ತಿ ಗುಂಪುಗಳಿರುತ್ತವೆಯೋ ಅಲ್ಲೆಲ್ಲಾ ಇದನ್ನು ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ವತಿಯಿಂದ ಅಕ್ಷರಾಭ್ಯಾಸಕ್ಕೆ ಬೇಕಾಗುವ ಗಾಳಿ, ಬೆಳಕು, ಸುಚಿತ್ವ, ಪ್ರಾಥಮಿಕ ಪುಸ್ತಿಕೆ, ಕಪ್ಪು ಹಲಗೆ, ದಿನಚರಿ, ಹಾಜರಾತಿ ಪುಸ್ತಕ, ನೋಟ್‌ ಪುಸ್ತಕ ಹಾಗೂ ಕಲಿಕಾ ಮತ್ತು ಬೋಧನಾ ಸಾಮಗ್ರಿಗಳನ್ನು ಒದಗಿಸಿಕೊಡಲಾಗುತ್ತದೆ ಎಂದು ಹೇಳಿದರು.

Advertisement

ಈ ಸಂದರ್ಭದಲ್ಲಿ ದೇವನಹಳ್ಳಿ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ(ಸಿಆರ್‌ಪಿ)ಮಂಜುನಾಥ್‌, ಸ್ತ್ರೀ ಶಕ್ತಿ ಗುಂಪಿನ ವಿದ್ಯಾವಂತ ಮಹಿಳೆಯರು ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next