Advertisement

ಹಾಡೂ ಕೇಳಿ,  ಫೋನ್‌ ಕೂಡ ರಿಸೀವ್‌ ಮಾಡಿ

04:03 PM May 25, 2018 | |

ಒಂದೊಳ್ಳೆ ಹಾಡು ಕೇಳಬೇಕು ಅಂದರೆ ಇಯರ್‌ ಫೋನ್‌ ವಯರ್‌ ಬಿಚ್ಚಿಕೊಂಡು, ಫೋನ್‌ಗೆ ಸಿಕ್ಕಿಸಿಕೊಳ್ಳಲು ತಡಕಾಡಬೇಕು. ಆದರೆ ಬ್ಲೂಟೂತ್‌ ಹೆಡ್‌ ಸೆಟ್‌ ಇದ್ದರೆ ಹಾಗಲ್ಲ, ಫೋನ್‌-ಹೆಡ್‌ ಸೆಟ್‌ ಕನೆಕ್ಷನ್‌ ಫ‌ಟಾಫ‌ಟ್‌. ವಯರ್‌ಗಳ ಕಿರಿಕ್‌ ಇಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಕರೆ ಸ್ವೀಕರಿಸಬಹುದಾದ ಹೆಡ್‌ಸೆಟ್‌ಗಳು ಸಾಕಷ್ಟು ಜನಪ್ರಿಯವಾಗಿವೆ. ಅದಕ್ಕೂ ಮಿಕ್ಕು ಈಗ ಎರಡೂ ಕಿವಿಗೆ ಇಯರ್‌ಫೋನ್‌ ರೀತಿ ಹಾಕಿಕೊಳ್ಳಬಹುದಾದ ಬ್ಲೂಟೂತ್‌ ಹೆಡ್‌ ಸೆಟ್‌ಗಳಿದ್ದು, ಇವುಗಳು ಫೋನ್‌ಗೂ ಕನೆಕ್ಟ್ ಆಗುವುದಲ್ಲದೇ, ಸ್ವಂತವಾಗಿ ಹಾಡುಗಳನ್ನು ಕೂಡ ಪ್ಲೇ ಮಾಡಬಲ್ಲವು. ಇದರೊಂದಿಗೆ ಸ್ಮಾರ್ಟ್‌ ಬ್ಲೂಟೂತ್‌ ಹೆಡ್‌ಸೆಟ್‌ಗಳೂ ಲಗ್ಗೆ ಇಡಲು ತಯಾರಾಗಿದ್ದು, ಜನರನ್ನು ಬ್ಲೂಟೂತ್‌ ಯುಗಕ್ಕೆ ಕರೆದೊಯ್ಯಲು ಸಿದ್ಧವಾಗಿವೆ.

Advertisement

ಫೋನ್‌, ಕಂಪ್ಯೂಟರ್‌ ಗೆ ಕನೆಕ್ಟ್ ಮಾಡಿ!
ಬ್ಲೂಟೂತ್‌ ಹೆಡ್‌ಸೆಟ್‌ ಗಳನ್ನು ಜನರು ಇಷ್ಟಪಡಲು ಕಾರಣ ಇವುಗಳನ್ನು ಫೋನ್‌, ಕಂಪ್ಯೂಟರ್‌ ಗೆ ತತ್‌ಕ್ಷಣ ಕನೆಕ್ಟ್ ಮಾಡಬಹುದು. ಒಂದು ಬಾರಿ ಚಾನೆಲ್‌ ಪೇರಿಂಗ್‌ ಆದರೆ ಸಾಕು. ವಯರ್‌ ಗಳ ಕಿರಿಕ್‌ ಇಲ್ಲ. ಧ್ವನಿ ಕೂಡ ಅತ್ಯಂತ ಸುಸ್ಪಷ್ಟ. ಇನ್ನು ಕೆಲವು ಬ್ಲೂಟೂತ್‌ ಸೆಟ್‌ಗಳು ಕಿರಿದಾಗಿದ್ದು, ತೆಗೆದುಕೊಂಡು ಹೋಗಲೂ ಅತ್ಯಂತ ಸುಲಭ.

ಮ್ಯೂಸಿಕ್‌ ಪ್ರಿಯರಿಗೆ ಬೆಸ್ಟ್‌
ಈಗಿನ ಕಾಲದ ಯುವಕ-ಯುವತಿಯರಿಗಂತೂ ಸದಾ ಮ್ಯೂಸಿಕ್‌ ಕೇಳುತ್ತಲೇ ಇರಬೇಕು. ಅಥವಾ ಸಿನೆಮಾ ಅದೂ ಇದೂ ಅಂತ ನೋಡುತ್ತಲೇ ಇರಬೇಕು. ಇಂತಹವರಿಗಾಗಿಯೇ ಇರುವುದು ಡಬಲ್‌ ಇಯರ್‌ ಬ್ಲೂಟೂತ್‌ ಹೆಡ್‌ ಸೆಟ್‌. ಇದರಲ್ಲಿ ಮೆಮೊರಿ ಕಾರ್ಡ್‌ ಹಾಕುವ ಸೌಲಭ್ಯವೂ ಇದೆ. ಈ ಮಾದರಿಯ ಹೆಡ್‌ ಸೆಟ್‌ಗಳು ಎಂಪಿತ್ರೀ ಪ್ಲೇಯರ್‌ ರೀತಿಯೂ ಕಾರ್ಯ ನಿರ್ವಹಿಸುತ್ತವೆ. ಕರೆ ಸ್ವೀಕರಿಸಿ ಮಾತನಾಡಲೂ ಸಾಧ್ಯ. ಇವುಗಳು ಹೆಚ್ಚು ಪ್ರಚಲಿತದಲ್ಲಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಸಿವೆ. ವಾಕಿಂಗ್‌, ಜಾಗಿಂಗ್‌, ಕಾರು ಚಾಲನೆಯಂತಹ ಸಂದರ್ಭ, ಕೆಲಸದ
ಸಂದರ್ಭಗಳಲ್ಲಿ, ಪ್ರವಾಸದ ವೇಳೆಗೆ ಹೆಚ್ಚಾಗಿ ಬ್ಲೂಟೂತ್‌ ವಿತ್‌ ಎಂಪಿತ್ರೀ ಮಾದರಿಗಳನ್ನು ಬಳಸಲಾಗುತ್ತದೆ. ಇವುಗಳ ಬೆಲೆ ಸುಮಾರು 2 ಸಾವಿರ ರೂ.ಗಳಿಂದ ಆರಂಭವಾಗುತ್ತದೆ.

ಯಾವುದು ಬೆಸ್ಟ್‌?
ಮಾರುಕಟ್ಟೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಖರೀದಿಗೆ ವಿವಿಧ ರೀತಿಯ ಹೆಡ್‌ಸೆಟ್‌ಗಳಿವೆ. ಸೋನಿ, ಬೋಶ್‌, ಜಾಯ್‌ಬರ್ಡ್‌, ಪ್ಲಾನ್‌ ಟ್ರೊನಿಕ್ಸ್‌, ಜಾಬ್ರಾ, ಶೆನ್‌ಹೈಸರ್‌, ಜೆಬಿಎಲ್‌, ಎಕೆಜೆ, ಬೀಟ್ಸ್‌, ಫಿಲಿಪಿಕ್ಸ್‌ ಕಂಪೆನಿಗಳ ವಿವಿಧ ಮಾದರಿಯ, ವಿವಿಧ ದರದ ಹೆಡ್‌ಸೆಟ್‌ ಲಭ್ಯ.

ಬ್ಲೂಟೂತ್‌ ಹೇಗೆ ಕನೆಕ್ಟ್ ಆಗುತ್ತೆ?
ಬ್ಲೂಟೂತ್‌ ಹೆಡ್‌ಸೆಟ್‌ಗಳು ತನ್ನದೇ ಒಂದು ನೆಟ್‌ವರ್ಕ್‌ ಸೃಷ್ಟಿಸಿಕೊಂಡು ಅದರ ಮೂಲಕ ಸಂದೇಶ ಹಂಚಿಕೊಳ್ಳುತ್ತದೆ. ಮ್ಯೂಸಿಕ್‌ ಹೆಡ್‌ಸೆಟ್‌ಗಳಲ್ಲಿ ಪ್ರತ್ಯೇಕ ವಾಲ್ಯೂಮ್‌, ಮ್ಯೂಸಿಕ್‌ ಚೇಂಜ್‌, ಕಾಲ್‌ ಪಿಕ್‌ ಮಾಡುವ ಕಂಟ್ರೋಲ್‌ಗ‌ಳನ್ನು ಹೊಂದಿರುತ್ತದೆ. ಸುಮಾರು 10-20 ಗಂಟೆಗಳ ಕಾಲ ಬ್ಯಾಟರಿ ಬ್ಯಾಕ್‌ ಅಪ್‌ ನೀಡುತ್ತದೆ. ಹಾಗೂ ಬ್ಲೂಟೂತ್‌ ವ್ಯಾಪ್ತಿ ಸುಮಾರು 30 ಫೀಟ್‌ಗಿಂತ ಹೆಚ್ಚು ಪ್ರದೇಶಗಳವರೆಗೆ ಲಿಂಕ್‌ ಆಗಿರುತ್ತವೆ.

Advertisement

ಬ್ಲೂಟೂತ್‌ 4.0 ಜನರೇಶನ್‌ನ ಸುಧಾರಿತ ಆವೃತ್ತಿಯಲ್ಲಿ ಸ್ಮಾರ್ಟ್‌ ಬ್ಲೂಟೂತ್‌ ಸದ್ದು ಮಾಡಲಿದೆ. ಇದು ಅತ್ಯಾಧುನಿಕವಾಗಿದ್ದು, ಈಗಿನಂತೆ ಸಿಂಗಲ್‌ ಡಿವೈಸ್‌ಗೆ ಪೇರಿಂಗ್‌ ಹೊರತಾಗಿ ಒಂದೇ ಬಾರಿಗೆ 4-5 ಡಿವೈಸ್‌ ಗೆ ಇಂಟರ್‌ಲಿಂಕ್‌ ಅನ್ನು ಕಲ್ಪಿಸುತ್ತದೆ. ಅಂದರೆ ಏಕಕಾಲಕ್ಕೆ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ವಾಚ್‌, ಕಾರ್‌, ಫಿಟ್‌ನೆಸ್‌ ಟ್ರಾಕರ್, ಮೆಡಿಕಲ್‌ ಡಿವೈಸ್‌, ಸ್ಪೀಕರ್‌, ಟಿವಿ ಹೀಗೆ ಎಲ್ಲದಕ್ಕೂ ಪೇರ್‌ ಆಗುತ್ತದೆ. ಐ ಫೋನ್‌ ಮತ್ತು ಮೊಟೋ ರೋಲಾ ಕಂಪೆನಿಗಳು ಸ್ಮಾರ್ಟ್‌ ಬ್ಲೂಟೂತ್‌ ಸಂಪರ್ಕಿಸುವ ರೀತಿಯ ಫೋನ್‌ಗಳು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

ಇನ್‌ ವಿಸಿಬಲ್‌ ಹೆಡ್‌ಸೆಟ್‌
ಕಿವಿಗೆ ಹಾಕ್ಕೊಂಡ್ರೆ ಕಾಣೋದೇ ಇಲ್ಲ. ಹಾಡು ಕೇಳ್ತಾರಾ? ಫೋನಲ್ಲಿ ಮಾತನಾಡ್ತಾರಾ ಒಂದೂ ಗೊತ್ತಾಗಲ್ಲ. ಇದು ಇನ್‌ವಿಸಿಬಲ್‌ ಬ್ಲೂಟೂತ್‌ ಹೆಡ್‌ ಸೆಟ್‌ಗಳ ಕಮಾಲ್‌. ಇವುಗಳು ಅತ್ಯಂತ ಸಣ್ಣದಾಗಿದ್ದು, ಕಿವಿಯ ತೂತಿನಷ್ಟೇ ದೊಡ್ಡದಿರುತ್ತವೆ. ಇನ್‌ವಿಸಿಬಲ್‌ ಹೆಡ್‌ಸೆಟ್‌ಗಳನ್ನು ಕಿವಿಯೊಳಕ್ಕೆ ತೂರಿಸಲಾಗುತ್ತದೆ. ಇವುಗಳ ಮೂಲಕ ಹಾಡೂ ಕೇಳಬಹುದು, ಫೋನ್‌ ಕರೆಯನ್ನೂ ಸ್ವೀಕರಿಸಬಹುದಾಗಿದೆ. 

‌ಸದಾ ಬ್ಯುಸಿ ವ್ಯಕ್ತಿಗಳ ಅಗತ್ಯ
ಒಂದಿಲ್ಲೊಂದು ಕೆಲಸದಲ್ಲಿ ಸದಾ ಬ್ಯುಸಿ. ಎಕ್ಸಿಕ್ಯೂಟೀವ್‌ ಕೆಲಸ ಮಾಡುವವರಾದರೆ, ಅತ್ತಿಂದಿತ್ತ ಓಡಾಟ, ತರಬೇತಿ
ನೀಡುವವರು ಮುಂತಾದವರಿಗೆ ಅಚ್ಚುಮೆಚ್ಚಿನದ್ದು ಸಿಂಗಲ್‌ ಇಯರ್‌ ಬ್ಲೂಟೂತ್‌ ಹೆಡ್‌ಸೆಟ್‌. ಇದರಲ್ಲಿ ಒಂದೇ ಕಿವಿಗೆ ಹೆಡ್‌ಸೆಟ್‌ ಅಳವಡಿಸಿ, ಕರೆ ಸ್ವೀಕರಿಸಿ ಮಾತನಾಡುವ, ಕರೆ ಕಡಿತಗೊಳಿಸುವ ಸೌಕರ್ಯವಿದೆ. ಕೆಲವು ಬ್ಲೂಟೂತ್‌ ಹೆಡ್‌ಸೆಟ್‌ಗಳು ಕರೆ ಸ್ವೀಕರಿಸಲು ಮಾತ್ರ ಶಕ್ತವಾಗುತ್ತವೆ. ಮಾರುಕಟ್ಟೆಯಲ್ಲಿ 800ರಿಂದ 2 ಸಾವಿರ ರೂ. ಬೆಲೆಗೆ ಈ ಮಾದರಿಯ ಹೆಡ್‌ಸೆಟ್‌ಗಳು ಲಭ್ಯವಿವೆ.

ಭರತ್‌ರಾಜ್‌ ಕರ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next