ಬೆಂಗಳೂರು: ಸರಕಾರದ ಬೆಳವಣಿಗೆ, ನಿರ್ಧಾರಗಳು ಹಾಗೂ ಪಕ್ಷದ ಚಟುವಟಿಕೆಗಳ ಬಗ್ಗೆ ತಮ್ಮ ಭಾವನೆ ಮತ್ತು ಸಲಹೆಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಬೇಕಿದೆ. ಆದ್ದರಿಂದ ಕೂಡಲೇ ಶಾಸಕರ ಸಭೆ ಕರೆಯುವಂತೆ ಸರಕಾರದ ಮುಖ್ಯ ಸಚೇತಕ ಹಾಗೂ ಕಾರ್ಕಳದ ಶಾಸಕ ವಿ.ಸುನಿಲ್ ಕುಮಾರ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದಿದ್ದಾರೆ.
ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸಂಬಂಧಿಸಿ ಕೆಲವರು ಪದೇಪದೆ ಬಹಿರಂಗ ಹೇಳಿಕೆ ನೀಡುತ್ತಿರುವುದು, ಪ್ರತ್ಯೇಕ ಸಭೆ ನಡೆಸುತ್ತಿರುವುದು, ವರಿಷ್ಠರನ್ನು ಆಗಿಂದಾಗೇ ಭೇಟಿ ಮಾಡಿ ಒತ್ತಡ ಹೇರುತ್ತಿರುವುದನ್ನು ಗಮನಿಸಿರುವ ಮೂಲ ಬಿಜೆಪಿಯ ಕೆಲವು ಶಾಸಕರು ಈಗಾಗಲೇ ಸಭೆ ನಡೆಸಲು ರಾಜ್ಯಾಧ್ಯಕ್ಷರ ಮೇಲೆ ಒತ್ತಡ ಹೇರಿದ್ದರು. ಗ್ರಾಮ ಸ್ವರಾಜ್ ಸಮಾವೇಶದ ಸರಣಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರು ಸಮಯದ ಅಭಾವದಿಂದ ಸಭೆ ಕರೆದಿರಲಿಲ್ಲ. ಈಗ ವಿಧಾನಸಭೆಯ ಸರಕಾರದ ಮುಖ್ಯ ಸಚೇತಕರಾದ ಶಾಸಕ ವಿ.ಸುನಿಲ್ ಕುಮಾರ್ ಅವರು ಪತ್ರ ಬರೆದು ಸಭೆ ನಡೆಸುವಂತೆ ಮನವಿ ಮಾಡಿಕೊಂಡಿರುವುದು ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ.
ಪತ್ರದ ವಿವರ : ಪಕ್ಷದ ಬೆಳವಣಿಗೆ ದೃಷ್ಟಿಯಿಂದ ನಮ್ಮ ಕಾರ್ಯದ ವಿಸ್ತಾರದ ಕಲ್ಪನೆಯನ್ನು ಮುಂದಿಟ್ಟು ತಾವು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವುದು ಸಹಜವಾಗಿಯೇ ಎಲ್ಲ ಕಾರ್ಯಕರ್ತರನ್ನು ಸಕ್ರಿಯಗೊಳಿಸಿದೆ. ಎಲ್ಲರ ಉತ್ಸಾಹವನ್ನು ಇಮ್ಮುಡಿಗೊಳಿಸಿದೆ. ಇತ್ತೀಚಿನ ಕೆಲವೊಂದು ವಿದ್ಯಾಮಾನಗಳ ಬೆಳವಣಿಗೆಯ ಹಿನ್ನೆಲೆಯಲ್ಲಿ ಪತ್ರ ಬರೆಯುವುದು ಅನಿವಾರ್ಯತೆ ಸೃಷ್ಟಿಯಾಯಿತು. ಕೆಲವು ದಿನಗಳಿಂದ ನಮ್ಮ ಮಂತ್ರಿಗಳು, ಕೆಲವು ಶಾಸಕ ಸ್ನೇಹಿತರು ಮತ್ತು ಪ್ರಮುಖರ ಬಹಿರಂಗ ಹೇಳಿಕೆಗಳು ಸಮಾಧಾನ ತರುವಂತದಲ್ಲ. ಒಂದು ಸಿದ್ಧಾಂತದ ಅಡಿಯಲ್ಲಿ ಕೆಲಸವನ್ನು ಮಾಡುತ್ತಿರುವ ಶಿಸ್ತಿಗೆ ಸ್ವಯಂಅನುಶಾಸನಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಕಾರ್ಯಕರ್ತರ, ಹಿತೃಷಿಗಳ ಮನಸ್ಸಿಗೆ ಈ ರೀತಿಯ ಬಹಿರಂಗ ಹೇಳಿಕೆಗಳು ನೋವುಂಟುಮಾಡುತ್ತಿದೆ.
ಮೂಲ-ಹೊಸಬರು ಎನ್ನುವ ಭಾವನೆಯನ್ನು ವ್ಯಕ್ತ ಮಾಡದೇ ಪಕ್ಷದ ಶಿಸ್ತಿನ ಚೌಕಟ್ಟನ್ನು ಎಲ್ಲರಿಗೂ ಗಟ್ಟಿಯಾಗಿ ಹೇಳಲೇಬೇಕಾಗಿದೆ. ಅದನ್ನು ನೀವು ತಕ್ಷಣ ಮಾಡುವಿರಿ ಎಂದು ಭಾವಿಸಿದ್ದೇನೆ. ನಿಗಮ ಮಂಡಳಿಗಳ ನೇಮಕ, ಮಂತ್ರಿಮಂಡಲದ ರಚನೆ ಈ ಕುರಿತಂತೆ ಪಕ್ಷದ ಚೌಕಟ್ಟಿನಲ್ಲಿ ಅಭಿಪ್ರಾಯಗಳನ್ನು ನಮ್ಮಂತಹ ಶಾಸಕರು ಹಂಚಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಶಾಸಕರ ಅಭಿಪ್ರಾಯಗಳನ್ನು ರಾಜ್ಯಾಧ್ಯರಾಗಿ ತಾವು ಆಲಿಸಬೇಕು.
ಮೋದಿ ಮಾದರಿ ಆಡಳಿತ, ಸೈದ್ಧಾಂತಿಕ ನೆಲೆಗಟ್ಟಿನ ಆಡಳಿತ, ಅಂತ್ಯೋದಯದ ಕಾರ್ಯಕ್ರಮಗಳು, ಜನಮೆಚ್ಚುವ ಯೋಜನೆಗಳು ಈ ಎಲ್ಲವೂ ನಮ್ಮ ಆಡಳಿತದಲ್ಲಿ ಮೂಡಿಬರಬೇಕಾಗಿದೆ. ಇಂದಿನ ಈ ಸರ್ಕಾರದ ಬೆಳವಣಿಗೆಗಳು, ನಿರ್ಧಾರಗಳು ಮತ್ತು ಪಕ್ಷದಲ್ಲಿನ ಚಟುವಟಿಕೆಗಳ ಕುರಿತು ನಮ್ಮ ಭಾವನೆಗಳನ್ನು -ಸಲಹೆಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಬೇಕಾಗಿದೆ. ನಾವು ನೀಡುವ ಸಲಹೆಗಳು, ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಮತ್ತು ಸರ್ಕಾರದ ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಶಾಸಕರ ಸಭೆಯನ್ನು ಕರೆದು ತಮ್ಮ ಭಾವನೆಯನ್ನು ವ್ಯಕ್ತಮಾಡಿಕೊಳ್ಳಲು ತಾವು ಅನುವು ಮಾಡಿಕೊಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.