ಪಟ್ನಾ: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದರೂ ವಿಪಕ್ಷಗಳ “ಇಂಡಿಯಾ’ ಒಕ್ಕೂಟದ ನಡುವೆ ಮತ್ತೆ ಮತ್ತೆ ಒಡಕು ಕಾಣಿಸಿಕೊಳ್ಳುತ್ತಿದೆ. ಬಿಹಾರದಲ್ಲಿ “ಇಂಡಿಯಾ’ ಒಕ್ಕೂಟದ ಪಕ್ಷಗಳ ನಡುವೆ ಸೀಟು ಹಂಚಿಕೆ ಅಂತಿಮ ಗೊಳ್ಳುವ ಮುನ್ನವೇ ಆರ್‌ಜೆಡಿ, ತನ್ನ 12 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಗೊಳಿಸಿದೆ.
ಇದರಿಂದಾಗಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಬಿಹಾರದಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳ ನಡುವೆ ಬಿರುಕು ಮೂಡುವ ಸಾಧ್ಯತೆಗಳು ದಟ್ಟವಾಗಿವೆ. ಸೀಟು ಹಂಚಿಕೆಗೆ ಮೊದಲೇ ಆರ್‌ಜೆಡಿ ಅಭ್ಯರ್ಥಿಗಳ ಪಟ್ಟಿ ಘೋಷಿರುವುದಕ್ಕೆ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿವೆ. ಈ ಪೈಕಿ 12 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳಿಗೆ ಆರ್‌ಜೆಡಿ ಟಿಕೆಟ್ ನೀಡಿದೆ. ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಪುತ್ರಿಯರಾದ ಡಾ| ರೋಹಿಣಿ ಆಚಾರ್ಯ ಸರಣ್ ಕ್ಷೇತ್ರದಿಂದ ಮತ್ತು ಮಿಸಾ ಭಾರತಿ ಪಾಟಲಿಪುತ್ರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದೇ ರೀತಿ ಜೆಹನಾಬಾದ್‌ನಿಂದ ಸುರೇಂದ್ರ ಪ್ರಸಾದ್ ಯಾದವ್, ಬಂಕಾದಿಂದ ಜೈಪ್ರಕಾಶ್ ನಾರಾಯಣ್ ಯಾದವ್, ಮಧುಬನಿಯಿಂದ ಅಲಿ ಅಶ್ರಫ್ ಫಾತ್ಮಿ, ದರ್ಬಾಂಗದಿಂದ ಲಲಿತ್ ಯಾದವ್ ಕಣಕ್ಕಿಳಿಯಲಿದ್ದಾರೆ.
ಬೇಗುಸರಾಯಿ ಕ್ಷೇತ್ರ ಯಾರಿಗೆ?: ಇನ್ನೊಂದಡೆ, ಬೇಗುಸರಾಯಿ ಕ್ಷೇತ್ರದಿಂದ ಮಾಜಿ ಶಾಸಕ ಅವದೇಶ್ ಕುಮಾರ್ ರೈ ಅವರಿಗೆ ಸಿಪಿಐ ಟಿಕೆಟ್ ನೀಡಿದೆ. ಇದನ್ನು ಸ್ವತಃ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಘೋಷಿಸಿದ್ದಾರೆ. ಆದರೆ ಬೇಗುಸರಾಯಿ ಕ್ಷೇತ್ರವನ್ನು ತನಗೆ ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್ ಪಟ್ಟುಹಿಡಿದಿತ್ತು. ಈ ಕ್ಷೇತ್ರದಲ್ಲಿ ಕನ್ಹಯ್ಯ ಕುಮಾರ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ. 2021ರಲ್ಲಿ ಸಿಪಿಐ ತ್ಯಜಿಸಿ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರಿದ್ದರು.