Advertisement

ಸ್ಮಾರ್ಟ್‌ಸಿಟಿಗೆ‌ ಪಟ್ಟಿ ಸಿದ್ಧ

11:40 AM Jan 16, 2018 | |

ಬೆಂಗಳೂರು: ಬೆಂಗಳೂರು ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನಕ್ಕೆ ರಚನೆಯಾಗಿರುವ “ವಿಶೇಷ ಉದ್ದೇಶಿತ ವಾಹಕ’ (ಎಸ್‌ಪಿವಿ) ಮಂಗಳವಾರ (ಜ.16) ಮೊದಲ ಸಭೆ ನಡೆಸಲಿದ್ದು, ಸ್ಮಾರ್ಟ್‌ಸಿಟಿ ಅಡಿ ನಗರದಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆಗಳನ್ನು ಅಂತಿಮಗೊಳಿಸಲಿದೆ.

Advertisement

ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಸ್ಮಾರ್ಟ್‌ ಸಿಟಿ ಯೋಜನೆಯ ಮೂರನೇ ಹಂತದಲ್ಲಿ ಬೆಂಗಳೂರು ನಗರ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಕ್ಕಾಗಿ ಎಸ್‌ಪಿವಿ ರಚಿಸಿ, ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ರನ್ನು ಎಂಡಿ ಆಗಿ ಆಯ್ಕೆ ಮಾಡಿದೆ. 

ಶಿವಾಜಿನಗರ, ಮಲ್ಲೇಶ್ವರ, ಗಾಂಧಿನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 16 ವಾರ್ಡ್‌ಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಒಳಪಡಲಿದ್ದು, 20.37 (5,050 ಎಕರೆ) ಚದರ ಕಿ.ಮೀ ಪ್ರದೇಶ ಯೋಜನೆಯಡಿ ಅಭಿವೃದ್ಧಿಯಾಗಲಿದೆ.

ಸ್ಮಾರ್ಟ್‌ಸಿಟಿ ನಿರ್ಮಾಣಕ್ಕೆ ಒಟ್ಟು 1,592.4 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಆ ಪೈಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ 500 ಕೋಟಿ ರೂ. ನೀಡಲಿದ್ದು, ಉಳಿದ ಯೋಜನೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತದೆ.

ಆಯ್ಕೆಯಾಗಿರುವ ಪ್ರದೇಶದಲ್ಲಿನ 51.6 ಕಿ.ಮೀ. ಉದ್ದದ 50 ರಸ್ತೆಗಳ ಟೆಂಡರ್‌ಶ್ಯೂರ್‌ ಮಾದರಿ ಅಭಿವೃದ್ಧಿ, ಕೃಷ್ಣರಾಜ ಮಾರುಕಟ್ಟೆ, ಶಿವಾಜಿನಗರ ಬಸ್‌ ನಿಲ್ದಾಣ ಹಾಗೂ ಸ್ವಾತಂತ್ರಪಾಳ್ಯ ಕೊಳೆಗೇರಿಗಳ ಅಭಿವೃದ್ಧಿಗೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಅದರಂತೆ ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ. 

Advertisement

ಸ್ಮಾರ್ಟ್‌ಸಿಟಿ ಅನುಷ್ಠಾನದ ಕುರಿತು ಮಂಗಳವಾರ ಎಸ್‌ಪಿವಿಯ ವ್ಯವಸ್ಥಾಪಕ ನಿರ್ದೇಶಕ ಎನ್‌.ಮಂಜುನಾಥ ಪ್ರಸಾದ್‌ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಯೋಜನೆಗಳ ಕುರಿತು ಚರ್ಚೆಯಾಗಲಿದೆ.

ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನ ಸಂಬಂಧ ಸಚಿವರು, ಸ್ಥಳೀಯ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ. ಈ ಸಂಬಂಧ ರಚಿಸಿರುವ ಎಸ್‌ಪಿವಿಯ ಮೊದಲ ಸಭೆ ಮಂಗಳವಾರ ನಡೆಯಲಿದ್ದು, ಜಾರಿಗೊಳಿಸಬೇಕಾದ ಯೋಜನೆಗಳನ್ನು ಅಂತಿಗೊಳಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಎಸ್‌ಪಿವಿ ವ್ಯವಸ್ಥಾಪಕ ನಿರ್ದೇಶಕ 

ಪ್ರದೇಶವಾರು ಅಭಿವೃದ್ಧಿ ಯೋಜನೆಗಳು
ಯೋಜನೆ-1:
ಪಾರಂಪರಿಕ ಮಾರುಕಟ್ಟೆಗಳ ನವೀಕರಣ 
ಯೋಜನೆ-2: ಶಿವಾಜಿನಗರ ಬಸ್‌ ನಿಲ್ದಾಣ, ರಸಲ್‌ ಮಾರ್ಕೆಟ್‌, ಕೆಂಪೇಗೌಡ ಬಸ್‌ ನಿಲ್ದಾಣಗಳ ನಡುವೆ ಸಮೂಹ ಸಾರಿಗೆ ವ್ಯವಸ್ಥೆ
ಯೋಜನೆ-3: ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆಗಳ ಅಭಿವೃದ್ಧಿ
ಯೋಜನೆ-4: ಹಲಸೂರು ಕೆರೆ ಹಾಗೂ ಸ್ಯಾಂಕಿ ಟ್ಯಾಂಕ್‌ಗಳ ಶುದ್ಧೀಕರಣ
ಯೋಜನೆ-5: ಕಬ್ಬನ್‌ ಉದ್ಯಾನ ಪ್ರದೇಶ ಸಂರಕ್ಷಣೆ ಹಾಗೂ ಅಭಿವೃದ್ಧಿ
ಯೋಜನೆ-6: ಗಾಂಧಿನಗರದ ಸ್ವಾತಂತ್ರ ಪಾಳ್ಯ ಕೊಳೆಗೇರಿ ಅಭಿವೃದ್ಧಿ
ಯೋಜನೆ-7: ಸುಧಾರಿತ ಆರೋಗ್ಯ ಸೇವೆಗಳಿಗಾಗಿ ಕೆ.ಸಿ.ಜನರಲ್‌ ಆಸ್ಪತ್ರೆ ಮೇಲ್ದರ್ಜೆ

* ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next