ಮುಂಬೈ: ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಬಿಸಿಸಿಐ ಸಿದ್ದತೆ ಆರಂಭಿಸಿದೆ. ಮುಂದಿನ ಆವೃತ್ತಿಯಿಂದ ಎರಡು ಹೊಸ ತಂಡಗಳು ಸೇರ್ಪಡೆಯಾಗುವ ಕಾರಣದಿಂದ ಈ ಬಾರಿ ಮೆಗಾ ಹರಾಜು ನಡೆಯಲಿದೆ. ಪ್ರತಿ ಫ್ರಾಂಚೈಸಿಗೂ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು (ರಿಟೆನ್ಶನ್) ಅವಕಾಶ ನೀಡಲಾಗಿದೆ. ನವೆಂಬರ್ 30ರೊಳಗೆ ಈ ಆಟಗಾರರ ಪಟ್ಟಿಯನ್ನು ನೀಡಲು ಬಿಸಿಸಿಐ ಗಡುವು ನೀಡಿದೆ.
ಸದ್ಯ ಫ್ರಾಂಚೈಸಿ ಮೂಲಗಳಿಂದ ಹಲವು ಸುದ್ದಿಗಳು ಹರಿದಾಡುತ್ತಿದೆ. ಒಂದು ವರದಿಯ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಉಳಿಸಿಕೊಳ್ಳಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನನ್ನು ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಳ್ಳುತ್ತಿಲ್ಲ ಎಂದು ಅಶ್ವಿನ್ ಕೆಲ ದಿನಗಳ ಹಿಂದೆ ಹೇಳಿದ್ದರು.
ರಿಟೆನ್ಶನ್ ಆಟಗಾರರ ಪಟ್ಟಿ
ಆರ್ ಸಿಬಿ: ಕಳೆದ ಸೀಸನ್ ನಲ್ಲಿ ಕಪ್ ಗೆಲ್ಲುವ ಭರವಸೆ ಮೂಡಿಸಿದ್ದ ಆರ್ ಸಿಬಿ ಹೊಸತನದ ಹುಡುಕಾಟದಲ್ಲಿದೆ. ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿರುವ ಕಾರಣ ಹೊಸ ನಾಯಕನ ಶೋಧದಲ್ಲಿದೆ. ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ತಂಡದಲ್ಲಿ ಉಳಿಯುವುದು ಖಚಿತವಾಗಿದೆ. ಮೂಲಗಳ ಪ್ರಕಾರ ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಮತ್ತು ಯುಜಿ ಚಾಹಲ್ ರನ್ನು ಆರ್ ಸಿಬಿ ಉಳಿಸಿಕೊಳ್ಳಲಿದೆ.
ಸಿಎಸ್ ಕೆ: ಹಾಲಿ ಚಾಂಪಿಯನ್ ತಂಡವು ನಾಯಕ ಧೋನಿಯನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತ. ವಿಂಡೀಸ್ ನ ಡ್ವೇನ್ ಬ್ರಾವೋ ಅವರನ್ನು ಉಳಿಸಿಕೊಳ್ಳುವುದಿಲ್ಲ ಎಂದು ಫ್ರಾಂಚೈಸಿ ಖಚಿತಪಡಿಸಿದೆ. ಉಳಿದಂತೆ ರವೀಂದ್ರ ಜಡೇಜಾ, ಫಾಫ್ ಡುಪ್ಲೆಸಿಸ್ ಉಳಿಸಿಕೊಳ್ಳಲಿದ್ದು, ಋತುರಾಜ್ ಗಾಯಕ್ವಾಡ್ ಅಥವಾ ಮೋಯಿನ್ ಅಲಿ ಇಬ್ಬರಲ್ಲಿ ಒಬ್ಬರನ್ನು ಸಿಎಸ್ ಕೆ ರಿಟೆನ್ಶನ್ ಮಾಡಲಿದೆ.
ಡೆಲ್ಲಿ ಕ್ಯಾಪಿಟಲ್ಸ್: ಡಿಸಿ ತಂಡವು ಅಶ್ವಿನ್ ಮತ್ತು ಅಯ್ಯರ್ ರನ್ನು ಬಿಡುವುದು ಖಚಿತವಾಗಿದೆ. ಮೂಲಗಳ ಪ್ರಕಾರ ಡಿಸಿ ಫ್ರಾಂಚೈಸಿ ನಾಲ್ಕು ಆಟಗಾರರನ್ನು ರಿಟೆನ್ಶನ್ ಮಾಡಲಿದ್ದು, ರಿಷಬ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ ಈ ಆಟಗಾರರು.
ಇದನ್ನೂ ಓದಿ:ಕಾನ್ಪುರದಲ್ಲಿ ಕೇನ್ ಪಡೆ ಸವಾಲು: ಟಾಸ್ ಗೆದ್ದ ಭಾರತ; ಶ್ರೇಯಸ್ ಅಯ್ಯರ್ ಪದಾರ್ಪಣೆ
ಮುಂಬೈ: ಐಪಿಎಲ್ ನ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ ಈ ಬಾರಿ ನಾಯಕ ರೋಹಿತ್ ಶರ್ಮಾ, ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಕೈರನ್ ಪೊಲಾರ್ಡ್ ರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ಇಶಾನ್ ಕಿಶಾನ್ ಅಥವಾ ಸೂರ್ಯಕುಮಾರ್ ಯಾದವ್ ರನ್ನು ರಿಟೆನ್ಶನ್ ಮಾಡಿಕೊಳ್ಳಲಿದೆ. ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯರನ್ನು ಕೈಬಿಡಲಿದೆ.
ಪಂಜಾಬ್ ಕಿಂಗ್ಸ್: ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್.ರಾಹುಲ್ ಅವರು ತಂಡ ತೊರೆಯವುದು ಬಹುತೇಕ ಖಚಿತವಾಗಿದೆ. ಉಳಿದಂತೆ ಮಯಾಂಕ್ ಅಗರ್ವಾಲ್, ರವಿ ಬಿಷ್ಣೋಯ್ ಮತ್ತು ಶಾರುಖ್ ಖಾನ್ ಬಗ್ಗೆ ತಂಡ ಒಲವು ಹೊಂದಿದ್ದು, ಆದರೆ ಇವರಿಗೆ ಅಷ್ಟೊಂದು ಹಣ ಖರ್ಚು ಮಾಡಲು ಸಿದ್ದವಿಲ್ಲ ಎನ್ನಲಾಗಿದೆ. ಹೀಗಾಗಿ ಎಲ್ಲಾ ಆಟಗಾರರನ್ನು ಕೈಬಿಟ್ಟು ಸಂಪೂರ್ಣ ತುಂಬಿದ ಪರ್ಸ್ ನೊಂದಿಗೆ ಹರಾಜಿಗೆ ಹೋಗಲು ಪಂಜಾನ್ ಕಿಂಗ್ಸ್ ಸಿದ್ದತೆ ನಡೆಸಿದೆ ಎನ್ನುತ್ತದೆ ವರದಿ.
ಕೆಕೆಆರ್: ಕಳೆದ ಸೀಸನ್ ನ ರನ್ನರ್ ಅಪ್ ತಂಡ ಕೋಲ್ಕತ್ತಾ ಈ ಬಾರಿ ನಾಯಕ ಇಯಾನ್ ಮಾರ್ಗನ್ ರನ್ನು ಕೈಬಿಡುವುದು ಬಹುತೇಕ ಖಚಿತವಾಗಿದೆ. ದಿನೇಶ್ ಕಾರ್ತಿಕ್ ರನ್ನು ಕೂಡಾ ರಿಟೆನ್ಶನ್ ಮಾಡಲಾಗುವುದಿಲ್ಲ ಎನ್ನಲಾಗಿದೆ. ಯುವ ಆಟಗಾರ ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ ರಿಟೆನ್ಶನ್ ಆಗಲಿದ್ದು, ಪ್ಯಾಟ್ ಕಮಿನ್ಸ್ ಅವರು ಲಭ್ಯವಿದ್ದರೆ ರಿಟೈನ್ ಮಾಡಲಿದ್ದಾರೆ. ಉಳಿದಂತೆ ಸುನೀಲ್ ನರೈನ್ ಅಥವಾ ಆಂದ್ರೆ ರಸ್ಸೆಲ್ ರನ್ನು ಉಳಿಸಿಕೊಳ್ಳಲು ಫ್ರಾಂಚೈಸಿ ಮುಂದಾಗಿದೆ ಎನ್ನುತ್ತವೆ ಮೂಲಗಳು.
ಇದನ್ನೂ ಓದಿ:ಐಪಿಎಲ್ ನ ದುಬಾರಿ ತಂಡಕ್ಕೆ ನಾಯಕನಾಗಲು ಒಪ್ಪಿಗೆ ನೀಡಿದ ಕೆ.ಎಲ್.ರಾಹುಲ್
ರಾಜಸ್ಥಾನ್: ಕಳೆದ ಸೀಸನ್ ನಲ್ಲಿ ನಿರಾಸೆ ಅನುಭವಿಸಿದ್ದ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಈ ಬಾರಿ ನಾಯಕ ಸಂಜು ಸ್ಯಾಮ್ಸನ್ ರನ್ನು ಕೈಬಿಡುವ ಸಾಧ್ಯತೆ ದಟ್ಟವಾಗಿದೆ. ಇಂಗ್ಲೆಂಡ್ ಆಟಗಾರರಾದ ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಜೊತೆ ಫ್ರಾಂಚೈಸಿ ಮಾತುಕತೆ ನಡೆಸಿದ್ದು, ಮುಂದಿನ ಆವೃತ್ತಿಗೆ ಲಭ್ಯರಿದ್ದರೆ ಅವರಿಬ್ಬರನ್ನು ಮಾತ್ರ ಉಳಿಸಿಕೊಳ್ಳಲಿದೆ.
ಹೈದರಾಬಾದ್: ಕಳೆದ ಸೀಸನ್ ನ ಕೊನೆಯ ಸ್ಥಾನಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಈ ಬಾರಿ ಹೆಚ್ಚಿನ ರಿಟೆನ್ಶನ್ ಮಾಡುವುದಿಲ್ಲ ಎನ್ನಲಾಗಿದೆ. ಸ್ಪಿನ್ನರ್ ರಶೀದ್ ಖಾನ್ ರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಉಳಿದಂತೆ ಕೇನ್ ವಿಲಿಯಮ್ಸನ್ ಹೆಸರು ಸದ್ಯ ಪಟ್ಟಿಯಲ್ಲಿದೆ.