Advertisement

ಜಯಲಲಿತಾ ಟು ಅಜಂ ಖಾನ್; ಶಿಕ್ಷೆಯ ಕಾರಣದಿಂದ ಅನರ್ಹಗೊಂಡ ಸಂಸದ-ಶಾಸಕರ ಪಟ್ಟಿ ಇಲ್ಲಿದೆ

01:46 PM Mar 24, 2023 | Team Udayavani |

ಹೊಸದಿಲ್ಲಿ: 2019ರ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಕೋರ್ಟ್‌ನಿಂದ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಿಂದ ಅನರ್ಹರಾಗುವ ಸಾಧ್ಯತೆಯಿದೆ.

Advertisement

ಈ ಪ್ರಕರಣದಲ್ಲಿ ಗುರುವಾರ ತಪ್ಪಿತಸ್ಥ ಎಂದು ಸಾಬೀತಾಗಿದ್ದು, ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ತೀರ್ಪಿನ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು ತೀವ್ರ ಪ್ರತಿಭಟನೆ ನಡೆಸಿದರು. ತಮ್ಮ ಲೋಕಸಭಾ ಸದಸ್ಯತ್ವದಿಂದ ಅನರ್ಹರಾಗುವ ಭೀತಿಯ ನಡುವೆ ಅವರು ಇಂದು ಸದನದ ಕಲಾಪದಲ್ಲಿ ಭಾಗವಹಿಸಿದ್ದಾರೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ ನಂತರ ಅನರ್ಹಗೊಂಡ ಇತರ ಕೆಲವು ಸಂಸದರು ಮತ್ತು ಶಾಸಕರ ಪಟ್ಟಿ ಇಲ್ಲಿದೆ.

ರಶೀದ್ ಮಸೂದ್: 2013 ರ ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಯ ಆಧಾರದ ಮೇಲೆ ಅನರ್ಹಗೊಂಡ ಮೊದಲ ಸಂಸದ ಕಾಂಗ್ರೆಸ್‌ನ ರಶೀದ್ ಮಸೂದ್. ಎಂಬಿಬಿಎಸ್ ಸೀಟು ಹಗರಣದಲ್ಲಿ ಅವರು ‘ಅನರ್ಹ’ ಅಭ್ಯರ್ಥಿಗಳನ್ನು ಎಂಬಿಬಿಎಸ್ ಸೀಟುಗಳಿಗೆ ನಾಮನಿರ್ದೇಶನ ಮಾಡಿದ್ದರು. ಮಸೂದ್‌ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಜಯಲಲಿತಾ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರು 66 ಕೋಟಿ ರೂ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. 2014ರಲ್ಲಿ ಬೆಂಗಳೂರಿನ ನ್ಯಾಯಾಲಯ ಆಕೆಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ 100 ಕೋಟಿ ರೂ. ದಂಡ ವಿಧಿಸಿತ್ತು. ಈ ವೇಳೆ ಅವರು ಶಾಸಕ ಸ್ಥಾನದಿಂದ ಅನರ್ಹರಾಗಿದ್ದರು.

Advertisement

ಲಾಲು ಪ್ರಸಾದ್ ಯಾದವ್: ಮೇವು ಹಗರಣದಲ್ಲಿಆರೋಪ ಸಾಬೀತಾದ ಕಾರಣದಿಂದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದರು. ಪಶು ಮೇವು ಹಗರಣದಲ್ಲಿ 970 ಕೋಟಿ ರೂಪಾಯಿ ವಂಚನೆ ಮಾಡಿದ್ದಕ್ಕಾಗಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಅಜಂ ಖಾನ್: ಸಮಾಜವಾದಿ ಪಕ್ಷದ ಅಜಂ ಖಾನ್ ಅವರು 2019ರಲ್ಲಿ ಉತ್ತರ ಪ್ರದೇಶ ವಿಧಾನಸಭೆಯಿಂದ ಅನರ್ಹಗೊಂಡಿದ್ದರು. ಸಿಎಂ ಯೋಗಿ ಆದಿತ್ಯನಾತ್ ವಿರುದ್ಧ ದ್ವೇಷ ಭಾಷಣ ಮಾಡಿದ್ದ ಆರೋಪದಡಿ ಅಜಂ ಖಾನ್ ಅವರಿಗೆ ಕೋರ್ಟ್ ಮೂರು ವರ್ಷದ ಜೈಲು ಶಿಕ್ಷೆ ವಿಧಿಸಿದೆ.

ಏನಿದು ನಿಯಮ

ನಿಗದಿತ ಪ್ರಕರಣದಲ್ಲಿ ಎರಡು ವರ್ಷವರೆಗೆ ಶಿಕ್ಷೆಗೆ ಗುರಿಯಾದ ಸಂಸತ್‌ ಸದಸ್ಯರು (ಲೋಕಸಭೆ ಮತ್ತು ರಾಜ್ಯಸಭೆ) ಶಾಸಕರು (ವಿಧಾನಸಭೆ ಮತ್ತು ವಿಧಾನ ಪರಿಷತ್‌) ಕೂಡಲೇ ತಾವು ಹೊಂದಿರುವ ಸದನದ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ.

ಜತೆಗೆ 2013ರ ಜು.10ರಂದು ಸುಪ್ರೀಂ ಕೂಡ ಇದೇ ಅಂಶವನ್ನು ಪುಷ್ಟೀಕರಿಸಿತ್ತು. ಜತೆಗೆ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 8 (4)ರ ಅನ್ವಯ ಅವರಿಗೆ ಆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ 3 ತಿಂಗಳ ಅವಕಾಶವನ್ನು ತೆಗೆದು ಹಾಕಿ ದೂರಗಾಮಿ ಪರಿಣಾಮ ಬೀರುವ ತೀರ್ಪು ನೀಡಿತ್ತು.

ಇದನ್ನೂ ಓದಿ:ಟಿ20 ವಿಶ್ವಕಪ್ ವಿಜೇತ ತಂಡದೊಂದಿಗೆ ಕ್ರಿಕೆಟ್ ಆಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್; ವಿಡಿಯೋ

2013ರಲ್ಲಿ ಅಧಿಕಾರದಲ್ಲಿ ಇದ್ದ ಮನ್ ‌ಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಅವರನ್ನು ಮೇವು ಹಗರಣದಲ್ಲಿ ಅನರ್ಹಗೊಳಿಸಿ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಆ ಅವಧಿಯನ್ನು 2 ತಿಂಗಳಿಗೆ ಇಳಿಸುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿತ್ತು. ಆಗ ಅಮೇಠಿ ಕ್ಷೇತ್ರದ ಸಂಸದರಾಗಿದ್ದ ರಾಹುಲ್‌ ಗಾಂಧಿಯವರು, ಕಾಂಗ್ರೆಸ್‌ ಮುಖಂಡ ಅಜಯ ಮಕೇನ್‌ ಉಪಸ್ಥಿತಿಯಲ್ಲಿ ನಡೆಸಲಾಗಿದ್ದ  ಸುದ್ದಿಗೋಷ್ಠಿಯಲ್ಲಿ ಸುಗ್ರೀವಾಜ್ಞೆಯ ಪ್ರತಿಯನ್ನೇ ಹರಿದು ಎಸೆದಿದ್ದರು. ಸೆ.27ರಂದು ಈ ಘಟನೆ ನಡೆದಿತ್ತು. ಅಂತಿಮವಾಗಿ ಅ.2ರಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನೇ ವಾಪಸ್‌ ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next