ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಇದೇ ತಿಂಗಳ 17ರಂದು ಹೊರಬೀಳುವ ಸಾಧ್ಯತೆ ಇದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾ.16ರಂದು ನಗರದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಒಂದು ಸಭೆ ಕರೆಯಲಾಗಿದೆ. ಮರುದಿನ ಅಂದರೆ ಮಾ.17ರಂದು ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಅಲ್ಲಿ ಅಂತಿಮ ತೀರ್ಮಾನ ಆಗಲಿದೆ’ ಎಂದು ತಿಳಿಸಿದರು.
ಇತ್ತೀಚೆಗೆ ನಿಧನರಾದ ಮಾಜಿ ಸಂಸದ ಧ್ರುವನಾರಾಯಣ ಅವರ ಪುತ್ರನಿಗೆ ಟಿಕೆಟ್ ನೀಡುವಂತೆ ಒತ್ತಡ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಧ್ರುವನಾರಾಯಣ ಅವರ ಕುಟುಂಬಕ್ಕೆ ಆಪ್ತರಾಗಿದ್ದಾರೆ. ಇನ್ನು ಪಕ್ಷದ ಟಿಕೆಟ್ ಹಂಚಿಕೆ ವಿಚಾರವಾಗಿ ಅವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಪಕ್ಷದ ನಿಷ್ಠಾವಂತ ನಾಯಕರಾದ ಧ್ರುವನಾರಾಯಣ ಅವರ ವಿಚಾರದಲ್ಲಿ ನಾನು ಪ್ರಾಮಾಣಿಕವಾಗಿ ನಮ್ಮ ನಾಯಕರಿಗೆ ಯಾವ ಸಲಹೆ ನೀಡಬೇಕೋ ನೀಡಿದ್ದೇನೆ. ಅವರ ಅಗಲಿಕೆ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಆ ಆಘಾತದಿಂದ ನಾವಿನ್ನೂ ಹೊರಬರಲು ಸಾಧ್ಯವಾಗಿಲ್ಲ. ಸಂಘಟನೆ ಶಕ್ತಿ, ತಾಳ್ಮೆ, ನಿಷ್ಠೆ, ಸೌಮ್ಯ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರು ಧ್ರುವನಾರಾಯಣ ಆಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗುವಂತಹ ಕೆಲಸವನ್ನು ಪಕ್ಷ ಮಾಡಲಿದೆ’ ಎಂದು ತಿಳಿಸಿದರು.
ಪ್ರಧಾನಿ ರೌಡಿ ಶೀಟರ್‌ಗೆ ಕೈಮುಗಿದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, “ಅವರ ಪಕ್ಷ, ಅವರಿಗೆ ಯಾರು ಬೇಕೋ ಅವರನ್ನು ಸೇರಿಸಿಕೊಂಡಿದ್ದಾರೆ. ಅವರು ಸ್ಯಾಂಟ್ರೋ ರವಿ ಅವರನ್ನಾದರೂ ಸೇರಿಸಿಕೊಳ್ಳಲಿ. ಫೈಟರ್ ರವಿ ಅವರನ್ನಾದರೂ ಸೇರಿಸಿಕೊಳ್ಳಲಿ. ಅತ್ಯಾಚಾರಿಗಳನ್ನು ಜತೆಯಲ್ಲಿ ಇಟ್ಟುಕೊಳ್ಳಲಿ. ಲಂಚಕೋರರನ್ನಾದರೂ ಇಟ್ಟುಕೊಳ್ಳಲಿ. ಅದು ಅವರ ಪಕ್ಷದ ವಿಚಾರ. ಅದರ ಬಗ್ಗೆ ನಾನ್ಯಾಕೆ ಮಾತನಾಡಲಿ’ ಎಂದು ಸೂಚ್ಯವಾಗಿ ಚುಚ್ಚಿದರು.